ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ

ಕೂಡ್ಲಿಗಿ:

      ತಾಲ್ಲೂಕಿನಲ್ಲಿ ತೀವ್ರ ಬರಗಾಲವಿದ್ದು, ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವ ಮೂಲಕ ಜನರು ಗುಳೇ ಹೋಗುವ ಪದ್ದತಿಯನ್ನು ನಿಲ್ಲಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

     ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಲಾಗುತ್ತಿದೆ ಎಂದು ಪಂಚಾಯ್ತಿ ಅಧಿಕಾರಿಗಳು ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಬೇಕು. ಯೋಜನೆಯ ಮಾರ್ಗ ಸೂಚಿಯಂತೆ ಕ್ರಮ ಕೈಕೊಂಡು ಹೆಚ್ಚು ಜನರಿಗೆ ಕೆಲಸ ನೀಡುವ ಮೂಲಕ ಜನರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದ ಅವರು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ಮೂಲಕ ರೈತರಿಗೆ ಉದ್ಯೋಗ ಒದಗಿಸಬೇಕು ಎಂದು ತಿಳಿಸಿದರು.

     ನರೇಗ ಯೋಜನೆಯಲ್ಲಿ ಅರಣ್ಯದಂಚಿನಲ್ಲಿ ತಡೆ ಗೋಡೆ ನಿರ್ಮಾಣ ಮಾಡುವ ಮೂಲಕ ಜನರಿಗೆ ಕೆಲಸ ನೀಡವುದರ ಜೊತೆಗೆ ಜನರ ಮೇಲೆ ಕರಡಿಗಳು ದಾಳಿ ಮಾಡುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಗುಡೇಕೋಟೆ ವಲಯರಣ್ಯಾಧಿಕಾರಿ ಮಂಜುನಾಥ ಅವರಿಗೆ ನಿರ್ದೇಶನ ನೀಡಿದರು.

     ಕರಡಿಹಳ್ಳಿ, ಭೀಮಸಮುದ್ರ, ಕಡೇಕೊಳ್ಳ ಸೇರಿದಂತೆ ಕರಡಿ ದಾಳಿ ಹೆಚ್ಚಿರುವ ಗ್ರಾಮಗಳ ರೈತರ ಪಂಪ್ ಸೆಟ್ಟುಗಳಿಗೆ ಬೆಳಿಗ್ಗೆ 6ರಿಂದ ಎರಡು ಪಾಳೆಯದಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜೆಸ್ಕಾಂನ ಎಇಇ ಎ.ಎಂ. ರಾಜೇಶಗೆ ಶಾಸಕರು ತಿಳಿಸಿದರು. ಇದಕ್ಕೆ ಪೂರಕವಾಗಿ ಮೇಲಾಧಿಕಾರಿಗಳೊಂದಿಗೆ ಮಾತನಾಡಿದ ರಾಜೇಶ್, ನಾಳೆಯಿಂದಲೇ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಶಾಸಕರ ಗಮನಕ್ಕೆ ತಂದರು.

     ತಾಲ್ಲೂಕು ಈಗಾಗಲೇ ಬರ ಪೀಡಿತ ಎಂದು ಘೋಷಣೆಯಾಗಿದ್ದು, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯವಿರುವ ಗ್ರಾಮಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ಯೋಜನೆ ಸಿದ್ದಪಡಿಸಿಟ್ಟಕೊಳ್ಳುವಂತೆ ಪಿಡಿಒಗಳಿಗೆ ತಿಳಿಸಿದರು.

     ಮೇವು ಬ್ಯಾಂಕಿನಿಂದ ಮೇವು ದುರ್ಬಳಕೆಯಾಗಬಹುದು. ಅದ್ದರಿಂದ ಮೇವು ಬ್ಯಾಂಕಿನ ಬದಲಾಗಿ ಗಂಡಬೊಮ್ಮನಹಳ್ಳಿಯ ಗೋಶಾಲೆಯ ಜೊತೆಗೆ ಹೊಸಹಳ್ಳಿ ಹಾಗೂ ಕೂಡ್ಲಿಗಿ ಭಾಗದಲ್ಲಿ ಹೆಚ್ಚುವರಿಯಾಗಿ ಎರಡು ಗೋಶಾಲೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್ ಕುಮಾರಗೆ ತಿಳಿಸಿದರು.

      ನಂತರ ಇದೇ 28ರಂದು ನಡೆಯುವ ಜನ ಸಂಪರ್ಕ ಸಭೆಗೆ ಎಲ್ಲಾ ಆಧಿಕಾರಿಗಳು ಕಡ್ಡಾಯವಾಗಿ ಭಾಗಿಯಾಗಿ, ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂಧನೆ ಮಾಡಬೇಕು. ಅಲ್ಲದೆ ಕುಡಿಯುವ ನೀರು ಸೇರಿದಂತೆ ತಾಲ್ಲೂಕಿನಲ್ಲಿನ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

     ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯ ಪಾಪನಾಯಕ, ಮುಖಂಡ ಸೂರ್ಯಪಾಪಣ್ಣ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap