ಬೆಂಗಳೂರು
ಮಾರತ್‌ಹಳ್ಳಿಯ ಬಳಿ ಪ್ರೇಯಸಿಗೆ ಗುಂಡು ಹೊಡೆದು ಪರಾರಿಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಅಮರೇಂದ್ರ ಪಟ್ನಾಯಕ್ ಕೃತ್ಯಕ್ಕೂ ಮುನ್ನ ಬರೆದಿಟ್ಟಿದ್ದ 17 ಪುಟಗಳ ಡೆತ್‌ನೋಟ್‌ನಲ್ಲಿ ತನ್ನ ಪ್ರೇಮ ಕಥೆಯನ್ನು ಏಳೆ ಏಳೆಯಾಗಿ ಬಿಚ್ಚಿಟ್ಟು ಸಾವನ್ನಪ್ಪಿದ ನಂತರ ದೇಹವನ್ನು ದಾನವನ್ನು ಮಾಡುವಂತೆ ಕುಟುಂಬದವರಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಸಂಸ್ಕೃತದಲ್ಲಿ ಡೆತ್ ನೋಟ್ ಆರಂಭಿಸಿ ಓಡಿಯಾ ಭಾಷೆಯಲ್ಲಿ ಅಂತ್ಯಗೊಳಿಸಿ ಪೂರ್ವಯೋಜಿತವಾಗಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಗನ್ ಜೊತೆ ಡೆತ್ ನೋಟ್ ಬರೆದುಕೊಂಡು ಅಮರೇಂದ್ರ ಬಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ಮಾರತ್‌ಹಳ್ಳಿಯ ಪಿಜಿ ಬಳಿ ಗೆಳತಿಯನ್ನು ಶೂಟ್ ಮಾಡಿ, ಹೊರ ವರ್ತುಲ ರಸ್ತೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ. ಘಟನಾ ಸ್ಥಳದಲ್ಲಿ ದೊರೆತ ಡೆತ್ ನೋಟ್‌ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.
ಸದ್ಯ ಗಾಯಗೊಂಡಿರುವ ಆರೋಪಿ ಅಮರೇಂದ್ರ ಮತ್ತು ಯುವತಿ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.ಡಿಯರ್ ಸೊಸೈಟಿ ಎಂದು ಆರಂಭಿಸಿರುವ ಅಮರೇಂದ್ರದಲ್ಲಿ ಮೊದಲಿಗೆ ಸರ್ವೇಜನ ಸುಖಿನೋ ಭವಂತು ಎಂದು ಬರೆದಿದ್ದಾನೆ. ಸಮಾಜದಲ್ಲಿ ಪ್ರೀತಿಗೆ ಬೇರೆ ಬೇರೆ ವ್ಯಾಖ್ಯಾನಗಳಿದ್ದು, ಈ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ನನ್ನ ಪ್ರೀತಿ ಬಗ್ಗೆ ನನಗೆ ತುಂಬ ಗೌರವ ಇದೆ. ಪ್ರೀತಿ ಸುಮ್ಮನೇ ಬರಲ್ಲ. ನಾನು ಸಹ ನನ್ನ ಪ್ರೀತಿಗಾಗಿ ತುಂಬಾನೇ ತ್ಯಾಗ ಮಾಡಿದ್ದೇನೆ. ಹಲವು ಬಾರಿ ತ್ಯಾಗ ಮಾಡಬೇಕಾದ ಪರಿಸ್ಥಿತಿಯೂ ಬಂತು. ನನ್ನ ಹಾಗೆ ಎಲ್ಲರೂ ತಮ್ಮ ಪ್ರೀತಿಗಾಗಿ ಒಂದಲ್ಲ ಒಂದು ರೀತಿ ತ್ಯಾಗ ಮಾಡಿರುತ್ತಾರೆ ಎಂದು ಹೇಳಿಕೊಂಡಿದ್ದಾನೆ.
ನನ್ನ ಮರಣದ ಬಳಿಕ ಅಂಗಾಂಗಳನ್ನು ದಾನ ಮಾಡಿ, ವೈದ್ಯಕೀಯ ಕಾಲೇಜಿಗೆ ಮೃತ ದೇಹವನ್ನು ತಲುಪಿಸಿ. ನನ್ನ ಇಪಿಎಫ್ ಹಣ ಕುಟುಂಬಸ್ಥರಿಗೆ ಸೇರಬೇಕು. ನನ್ನ ಪ್ರೇಯಸಿ ಜೀವನ ಚೆನ್ನಾಗಿರಲಿ. ಗೆಳತಿ ಶುಭಶ್ರೀ ಪ್ರಿಯದರ್ಶಿನಿ ಮತ್ತು ಅಕ್ಕ ಗಾಯಿತ್ರಿ ಹೆಸರು ಉಲ್ಲೇಖಿಸಿದ್ದಾನೆ. ನನ್ನ ಪ್ರೀತಿಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಾನು ಈಗಲೂ ಶುಭಶ್ರೀಯನ್ನು ಇಷ್ಟಪಡುತ್ತೇನೆ. ಈ ಕ್ಷಣ ನಾನು ಯಾರನ್ನು ದೂರಲ್ಲ. ಗುಡ್ ಬೈ ಸೊಸೈಟಿ ಎಂದು ಬರೆದು ಹೀಗೆ ಹಲವು ವಿಷಯಗಳನ್ನು ಅಮರೇಂದ್ರ ಹಂಚಿಕೊಂಡಿದ್ದಾನೆ.
ಪ್ರಕರಣದ ವಿವರ
ಓಡಿಶಾ ಮೂಲದ ಶುಭಶ್ರೀ ಪ್ರಿಯದರ್ಶಿನಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದರು. ಆರೋಪಿ ಅಮರೇಂದ್ರ ಪಟ್ನಾಯಕ್ ಮತ್ತು ಶುಭಶ್ರೀ ಇಬ್ಬರೂ ಎರಡು ವರ್ಷದಿಂದ ಪ್ರೀತಿಯಲ್ಲಿದ್ದರು. ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಅಮರೇಂದ್ರ ಪ್ರೀತಿ ಅಂತ್ಯಗೊಳಿಸಿ ಬೇರೆ ಯುವತಿ ಜೊತೆ ಮದುವೆಗೆ ಸಿದ್ಧವಾಗಿದ್ದನು. ಅಮರೇಂದ್ರ ಮದುವೆ ಆಗುತ್ತಿದ್ದ ಯುವತಿಗೆ ಇಬ್ಬರ ಕೆಲ ಫೋಟೋಗಳನ್ನು ಶುಭಶ್ರೀ ಕಳಿಸಿದ್ದಳು. ಫೋಟೋಗಳಿಂದಾಗಿ ಅಮರೇಂದ್ರ ಮದುವೆ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಅಮರೇಂದ್ರ ಪ್ರೇಯಸಿಗೆ ಗುಂಡು ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
