ಹಂಪಿ.
ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಕೆರೆಯಲ್ಲಿ ಈ ಬಾರಿ ಏರ್ಪಡಿಸಲಾಗಿದ್ದ ಮೀನುಗಾರರ ತೆಪ್ಪ ಸ್ಪರ್ಧೆ ನೋಡುಗರಲ್ಲಿ ಮೈನವಿರೇಳಿಸಿತು
ತುಂಬಿ ತುಳುಕುತ್ತಿದ್ದ ಕಮಲಾಪುರದ ಕೆರೆಯಲ್ಲಿ ಈ ಬಾರಿ ಮೀನುಗಾರರಿಗೆ ತೆಪ್ಪ ಹಾಯಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ನೋಪಾಸನಾ ಸಾಹಸ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾಂಪ್ರದಾಯಿಕವಾಗಿ ಮೀನುಗಾರಿಕೆ ಕಾಯಕವನ್ನು ಮಾಡುವ ಪುರುಷ ಮತ್ತು ಮಹಿಳೆಯರು ಉತ್ಸುಕತೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ತೆಪ್ಪ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ತೆಪ್ಪವನ್ನು ವೇಗವಾಗಿ ಹುಟ್ಟು ಹಾಕುವ ಮೂಲಕ, ಗುರಿಯನ್ನು ತಲುಪುವತ್ತ ಮುನ್ನುಗ್ಗುತ್ತಿದ್ದರೆ, ಇತ್ತ ಕೆರೆಯ ದಡದಲ್ಲಿ ಸ್ಪರ್ಧೆ ವೀಕ್ಷಿಸುತ್ತಿದ್ದ ಸಾರ್ವಜನಿಕರು, ಸ್ಪರ್ಧಾಳುಗಳ ಬೆಂಬಲಿಗರು, ಜೋರಾಗಿ ಘೋಷಣೆ ಹಾಕುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು.
ಹಲಗೆ ವಾದನ ಸ್ಪರ್ಧೆಗೆ ಇನ್ನಷ್ಟು ಜೋಶ್ ನೀಡುವಂತಿತ್ತು. ನಾ ಮುಂದು, ತಾ ಮುಂದು ಎಂದು ಸ್ಪರ್ಧಿಗಳು ತಮ್ಮೆಲ್ಲ ಶಕ್ತಿಯನ್ನು ಬಳಸಿ ವೇಗವಾಗಿ ಚಲಿಸಲು ನೀರಿನಲ್ಲಿ ಹುಟ್ಟನ್ನು ಬಳಸುತ್ತಿದ್ದ ತಂತ್ರಗಾರಿಕೆ ನೋಡುಗರ ಮೈನವಿರೇಳಿಸಿತು. ಅತ್ಯಂತ ರೋಮಾಂಚನಕಾರಿ ಹಾಗೂ ತುರುಸಿನಿಂದ ನಡೆದ ಈ ಸ್ಪರ್ಧೆಯಲ್ಲಿ, ಗೆಲುವು ಪಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ.
ಕಮಲಾಪುರ ಕೆರೆಯ ಒಂದು ದಡದಿಂದ, ಇನ್ನೊಂದು ದಡಕ್ಕೆ ಸುಮಾರು 200 ಮೀ. ದೂರ ವೇಗವಾಗಿ ಸಾಗಿ, ಅಲ್ಲಿ ಮೊದಲೇ ಹಾಜರಿದ್ದ ತಂಡದಿಂದ, ಚೀಟಿಯನ್ನು ಪಡೆದು, ಹಿಂದಿರುಗಿ ಪುನಃ ಕೆರೆಯ ದಡಕ್ಕೆ ಆಗಮಿಸಬೇಕೆನ್ನುವುದು ಸ್ಪರ್ಧೆಯ ನಿಯಮವಾಗಿತ್ತು. ಸ್ಪರ್ಧಾಳುಗಳು ತಮ್ಮ ಶಕ್ತಿಯ ಸಾಮಥ್ರ್ಯದ ಜೊತೆಗೆ ತೆಪ್ಪ ಹುಟ್ಟು ಹಾಕುವ ತಂತ್ರಗಾರಿಕೆ ಪ್ರದರ್ಶಿಸುವ ಸ್ಪರ್ಧೆ ಇದಾಗಿತ್ತು. ತಾವೇನು ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದ ಮಹಿಳೆಯರು ಆಸಕ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ತಾಕತ್ತು ಪ್ರದರ್ಶಿಸಿ ತಾವು ಗಟ್ಟಿಗಿತ್ತಿಯರು ಎಂಬುದನ್ನು ಸಾಬೀತುಪಡಿಸಿದರು.
ರೋಮಾಂಚನಕಾರಿಯಾಗಿ ನಡೆದ ಮೀನುಗಾರರ ತೆಪ್ಪ ಸ್ಪರ್ಧೆಯ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 23 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಪಂಪಾಪತಿ ಮತ್ತು ನಾಗರಾಜ್ ಅವರನ್ನೊಳಗೊಂಡ ತಂಡ ಮೊದಲ ಸ್ಥಾನ ಪಡೆದು 5 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿತು.
ಕೂದಲೆಳೆ ಅಂತರದಲ್ಲಿ ಎರಡನೆ ಸ್ಥಾನ ಪಡೆದ ಹನುಮಂತ ಹಾಗೂ ರಾಜು ಅವರ ತಂಡ 3 ಸಾವಿರ ರೂ. ಬಹುಮಾನ ಪಡೆದರೆ, ರಾಮು ಮತ್ತು ರವಿ ತಂಡ ಮೂರನೆ ಸ್ಥಾನಕ್ಕೆ ತೃಪ್ತಿ ಪಡೆದು 2 ಸಾವಿರ ರೂ. ಬಹುಮಾನ ಗಿಟ್ಟಿಸಿತು.ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 07 ತಂಡಗಳು ಭಾಗವಹಿಸಿದ್ದವು, ಇದರಲ್ಲಿ ಗೋವಿಂದಮ್ಮ ಮತ್ತು ನಂದಾ ಅವರ ತಂಡ ಮೊದಲ ಸ್ಥಾನ ಪಡೆದು 5 ಸಾವಿರ ರೂ. ಬಹುಮಾನ ಗಿಟ್ಟಿಸಿತು. ವಿಶೇಷವೆಂದರೆ ಇದೇ ತಂಡ ಹಂಪಿ ಉತ್ಸವಗಳಲ್ಲಿ ಸತತ ಮೂರನೆ ಬಾರಿಗೆ ಮೊದಲ ಬಹುಮಾನ ಪಡೆದುಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದೆ. ಉಳಿದಂತೆ ಹಂಪಮ್ಮ ಮತ್ತು ರಾಣಿ ತಂಡ ಎರಡನೆ ಸ್ಥಾನ ಗಳಿಸಿ 3 ಸಾವಿರ ರೂ. ಬಹುಮಾನ ಪಡೆದರೆ, ಮಾನಮ್ಮ ಮತ್ತು ಜಯಂತಿ ತಂಡ ಮೂರನೆ ಸ್ಥಾನ ಪಡೆದು 2 ಸಾವಿರ ರೂ. ಬಹುಮಾನ ಪಡೆಯಿತು.
ತೆಪ್ಪ ಹಾಯಿಸುವ ಸ್ಪರ್ಧೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮೀನುಗಾರರು, ಹಂಪಿ ಉತ್ಸವ ಅಂಗವಾಗಿ ಆಯೋಜಿಸಿರುವ ಈ ಸ್ಪರ್ಧೆ ನಮ್ಮ ಸಾಂಪ್ರದಾಯಿಕ ಮೀನುಗಾರಿಕೆ ವೃತ್ತಿಗೆ ಉತ್ತೇಜನ ನೀಡುವಂತಿದೆ. ಅಲ್ಲದೆ ನಮ್ಮ ಸಂಸ್ಕøತಿ ಹಾಗೂ ಪರಂಪರೆಯನ್ನು ಸರ್ಕಾರ ಪ್ರೋತ್ಸಾಹಿಸಿದೆ ಎಂದು ಸಂತಸ ಹಂಚಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
