ಬಳ್ಳಾರಿ
ಹಂಪಿ ಉತ್ಸವ ಜನರು ಮೆಚ್ಚುವ ರೀತಿಯಲ್ಲಿ ನಡೆಯಿತು. ಸರಕಾರ ಸೇರಿದಂತೆ ಇದಕ್ಕೆ ಕಾರಣಿಕರ್ತರಾದ ಸರ್ವರಿಗೂ ಧನ್ಯವಾದ ಅರ್ಪಿಸುತ್ತೇನೆ. ಈ ರೀತಿ ಯಶಸ್ವಿಯಾಗಲು ಜನರು ಕಾರಣ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.5.50ಕೋಟಿ ರೂ. ಸರಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಜಿಲ್ಲಾಡಳಿತ ಅಲ್ಪ ಹಣ ಸಂಗ್ರಹಿಸಿ ಅದರಡಿ ಈ ಭರ್ಜರಿ ಉತ್ಸವವನ್ನು ನಡೆಸಲಾಗಿದೆ.
ಬಳ್ಳಾರಿ ಜಿಲ್ಲೆಯ 196 ಕಲಾತಂಡಗಳು, ಹೈಕ ಜಿಲ್ಲೆಗಳ 28,ರಾಜ್ಯದ ಇತರೆ ಜಿಲ್ಲೆಗಳ 80ಕಲಾತಂಡಗಳು ಸೇರಿದಂತೆ 298 ಕಲಾತಂಡಗಳು 3435 ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇಡೀ ವಿಶ್ವದಲ್ಲಿಯೇ ನೋಡಬೇಕಾದ ಪ್ರವಾಸಿ ಐತಿಹಾಸಿಕ ಸ್ಥಳಗಳಲ್ಲಿ ಹಂಪಿ 2ನೇ ಸ್ಥಾನ ಪಡೆದಿದ್ದು, ಈ ಉತ್ಸವವನ್ನು ದೇಶ ಮತ್ತು ಜಗತ್ತು ಮೆಚ್ಚುವ ರೀತಿಯಲ್ಲಿ ಉತ್ಸವ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು.
ಹಂಪಿ ಉತ್ಸವವನ್ನು ಅತ್ಯಂತ ದೊಡ್ಡ ಜನೋತ್ಸವವನ್ನಾಗಿ ಆಚರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 10ಕೋಟಿ ರೂ., ಕೇಂದ್ರ ಸರಕಾರ 5ಕೋಟಿ ರೂ.ಗಳ ಅನುದಾನವನ್ನು ಪ್ರತಿ ವರ್ಷ ಬಿಡುಗಡೆ ಮಾಡಬೇಕು. ಈ ರೀತಿಯ ಉತ್ಸವವನ್ನು ಉಳಿಸಿ ಬೆಳೆಸುವ ಕೆಲಸ ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಹಂಪಿಯಲ್ಲಿ ಸಂಗ್ರಹಿಸಲಾದ ಹಣವನ್ನು ಇದೇ ಉತ್ಸವಕ್ಕೆ ಬಳಸಬೇಕು. ಅಗತ್ಯ ಬಿದ್ದರೇ ಸದನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಕಂಪ್ಲಿ ಕ್ಷೇತ್ರಕ್ಕೆ ವಿಶೇಷ ಅನುದಾನ ರೂ.6ಕೋಟಿ ಸೇರಿದಂತೆ 32.50ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಆರಂಭಿಸಲು ಕ್ರಮವಹಿಸಲಾಗಿದೆ ಎಂದರು.
ಛಾಯಾಚಿತ್ರ ಸ್ಪರ್ಧೆಯಲ್ಲಿ 104ಜನರು ಭಾಗವಹಿಸಿದ್ದು 1.50ಲಕ್ಷ ಜನರು ವೀಕ್ಷಿಸಿದ್ದಾರೆ. ಹಂಪಿಉತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಗೋಡೆಬರಹ
ಚಿತ್ರಕಲಾ ಉತ್ಸವದಲ್ಲಿ 50 ಕಲಾವಿದರು ಹಂಪಿಯ ಪಾರಂಪರಿಕ ಸ್ಮಾರಕಗಳ ಚಿತ್ರಣ ಮತ್ತು ಸ್ವಚ್ಚತಾ ಜಾಗೃತಿಯ ಶಿಕ್ಷಣ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಲಾಗಿದ್ದು, ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಕಲಾ ಶಿಬಿರದಲ್ಲಿ 20ಜನ ಕಲಾವಿದರು ಭಾಗವಹಿಸಿ 39ಕಲಾಕೃತಿಗಳು ರಚಿಸಿದ್ದು ಲಕ್ಷಾಂತರ ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ತುಂಗಾಭದ್ರಾ ಆರತಿ ಮಹೋತ್ಸವ, ಆಗಸದಲ್ಲಿ ಹಂಪಿ, ಪಾರಂಪರಿಕ ನಡಿಗೆ, ಮರಳು ಶಿಲ್ಪಉತ್ಸವ, ವಿಜಯನಗರ ವಸಂತ ವೈಭವ, ಗ್ರಾಮೀಣ ಕ್ರೀಡೆಗಳು, ವಿವಿಧ ವಸ್ತು ಪ್ರದರ್ಶನ ಮತ್ತು ಮೇಳಗಳು,ಫಲಪುಷ್ಪ ಪ್ರದರ್ಶನ, ಕಿಡ್ಸ್ ಝೋನ್, ಸಾಹಸ ಶಿಬಿರ, ಸಾಹಸ ಕ್ರೀಡೆಗಳು, ಶೋಭಾಯಾತ್ರೆ,ಮಹಿಳಾ ಉತ್ಸವ, ರೈತರ ವಿಚಾರ ಸಂಕಿರಣ, ಕವಿಗೋಷ್ಠಿ/ವಿಶೇಷ ಉಪನ್ಯಾಸ, ಒಂಟೆ ಸವಾರಿ,ಮೀನುಗಾರರ ತೆಪ್ಪ ಸ್ಪರ್ಧೆ ಸೇರಿದಂತೆ ವಿವಿಧ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು 5ವೇದಿಕೆಗಳಲ್ಲಿ ನಡೆದವು ಎಂದು ಅವರು ವಿವರಿಸಿದರು.
ನಮ್ಮಜಿಲ್ಲೆಯಲ್ಲಿ ಆರೋಗ್ಯ ಮನೆಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರತಿ ತಿಂಗಳಿಗೆ ಒಂದು ಬಾರಿಯಂತೆ ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಮಾಡಲಾಗುವುದು. ನನ್ನ ಅನುದಾನದಲ್ಲಿ 4ಕೋಟಿ ವಿಮ್ಸ್ ಅಭಿವೃದ್ಧಿಗೆ, ಹಂಪಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 2ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಹಡಗಲಿಯಲ್ಲಿ 4ಕೆರೆಗಳನ್ನು ನಿರ್ಮಾಣ ಮಾಡುವುದಕ್ಕೆ 4ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಕೂಡ್ಲಿಗಿಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ 2ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಕನ್ನಡ ವಿವಿಯಲ್ಲಿ ಬಾಲಕೀಯರ ವಸತಿ ನಿಲಯ ನಿರ್ಮಾಣಕ್ಕೆ 2ಕೋಟಿ ರೂ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
