ಕರ್ನಾಟಕದ ಏಕೀಕರಣದಲ್ಲಿ ದಿ.ನಿಜಲಿಂಗಪ್ಪನವರ ಪಾತ್ರ ಪ್ರಮುಖವಾದುದು :ಶಾಸಕ

ಚಳ್ಳಕೆರೆ

     ಕರ್ನಾಟಕ ಏಕೀಕರಣದಲ್ಲಿ ಹೋರಾಟ ನಡೆಸಿದ ಚಿತ್ರದುರ್ಗ ಗಂಡುಮೆಟ್ಟಿನ ನಾಡಿನ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಪರಿಶ್ರಮದಿಂದ 1956ರಲ್ಲಿ ರಾಜ್ಯದ ಏಕೀಕರಣವಾಗಿದ್ದು, ನಿಜಲಿಂಗಪ್ಪನವರ ಕೊಡುಗೆಯನ್ನು ಸದಾ ಸ್ಮರಿಸಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ಅವರು, ಶುಕ್ರವಾರ ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಹಲವಾರು ದಶಕಗಳಿಂದ ನಾಡಿನ ಬಹುತೇಕ ಹಿರಿಯರು, ಸಾಹಿತಿಗಳು ಮತ್ತು ಲೇಖಕರು ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಅನೇಕ ವಿಷಯವನ್ನು ನಮಗೆ ತಿಳಿಸಿದ್ಧಾರೆ. ವಿಶ್ವದ ಯಾವುದೇ ಪ್ರದೇಶದಲ್ಲಿ ನಮ್ಮ ಕನ್ನಡಿಗರು ಇದ್ದರೆ ರಾಜ್ಯೋತ್ಸವ ದ ಉತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಕನ್ನಡ ಭಾಷೆ ರಾಜ್ಯದ ಆರು ಕೋಟಿ ಜನರ ಜೀವ ಭಾಷೆಯಾಗಿದ್ದು ಪ್ರತಿಯೊಂದು ಹಂತದಲ್ಲೂ ಕನ್ನಡ ಭಾಷೆಯ ಪರಿಪೂರ್ಣ ಬೆಳವಣಿಗೆಗೆ ನಾವೆಲ್ಲರೂ ಸಹಕಾರ ನೀಡಬೇಕೆಂದರು.

     ಇತ್ತೀಚಿನ ದಿನಗಳಲ್ಲಿ ಬೇರೆ ಭಾಷಿಕರ ವಲಸೆಯಿಂದ ರಾಜ್ಯದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹಿನ್ನೆಡೆಯಾಗುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡ ಭಾಷೆಯನ್ನು ತಮ್ಮದೇಯಾದ ದಾಟಿಯಲ್ಲಿ ಹಾಡುವ ಕನ್ನಡಿಗೂ ಇದ್ದಾರೆ. ಆದರೆ ನಾವು ಕರ್ನಾಟಕದಲ್ಲಿ ಬದುಕನ್ನು ರೂಪಿಸಿಕೊಂಡಿದ್ದು, ನಮ್ಮ ಎಲ್ಲಾ ವ್ಯವಹಾರಗಳಿಗೆ ಮೊದಲ ಆದ್ಯತೆಯ ಭಾಷೆಯಾಗಿ ಮಾತೃಭಾಷೆ ಕನ್ನಡವನ್ನೇ ಉಪಯೋಗಿಸಬೇಕು. ಬೇರೆ ಎಲ್ಲಾ ಭಾಷೆಗಳು ಚಲನೆಯಲ್ಲಿದ್ದರೂ ಸಹ ಅವು ನಮಗೆ ಸಹೋದರ ಭಾಷೆಗಳಾಗಿವೆ ಎಂದರು.

     ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಾ.ಚಾರುಲತಾ, ಕನ್ನಡ ರಾಜ್ಯೋತ್ಸವದ ಉಪನ್ಯಾಸ ನೀಡಿದ, ಕನ್ನಡ ಭಾಷೆ ತನ್ನದೇಯಾದ ವೈವಿದ್ಯತೆಯನ್ನು ನಾಡಿನಲ್ಲಿ ಹೊಂದಿದೆ. ಈ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಕರ್ನಾಟಕ, ಕರುನಾಡು, ಕನ್ನಡ ನಾಡು ಎಂಬ ಹಲವಾರು ವಿಧದಲ್ಲಿ ನಾವು ನಮ್ಮ ರಾಜ್ಯವನ್ನು ಕರೆಯುತ್ತೇವೆ. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ರೋಚಕದ ಸುದ್ದಿಗಳು ಕನ್ನಡ ಇತಿಹಾಸದಲ್ಲಿ ಬಿಂಬಿತವಾಗುತ್ತವೆ.

     ಗಂಧದ ನಾಡು, ಚಿನ್ನದ ಬೀಡು ಎಂದು ಕರೆಯುವ ನಮ್ಮ ಪ್ರೀತಿಯ ಕನ್ನಡನಾಡಿನಲ್ಲಿ ಅನೇಕ ಧೀಮಂತ ಕವಿಗಳು ತಮ್ಮದೇಯಾದ ಸಾಹಿತ್ಯದ ರಸದೌತಣವನ್ನು ನೀಡಿ ಈ ಭಾಷೆಗೆ ವಿಶೇಷ ಮೆರಗು ತಂದುಕೊಟ್ಟಿದ್ಧಾರೆ. ಕುವೆಂಪು, ತರಾಸು, ದ.ರಾ.ಬೇಂದ್ರೆ, ಪು.ತಿ.ನ, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ನಿಸಾರ್ ಅಹಮ್ಮದ್ ಮುಂತಾದ ಮಹಾನ್ ಕವಿ, ಲೇಖಕರ ಸಾಹಿತ್ಯ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ನಾವೆಲ್ಲರೂ ನಮ್ಮ ಬದುಕಿಗೆ ಆಶ್ರಯವಾದ ಕನ್ನಡ ಭಾಷೆಯ ಗೌರವಕ್ಕೆ ಚ್ಯುತಿಬಾರದಂತೆ ಎಚ್ಚರಿಕೆ ವಹಿಸಬೇಕೆಂದರು.

     ಧ್ವಜರೋಹಣ ನೆರವೇರಿಸಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಕನ್ನಡ ಭಾಷೆ ತನ್ನದೇಯಾದ ವಿಶೇಷ ಛಾಪವನ್ನು ನಾಡಿನಲ್ಲಿ ಮೂಡಿಸಿದ್ದು, ಎಲ್ಲಾ ಜನರಿಗೆ ಅನುಕೂಲವಾಗುವಂತೆ ಸರ್ಕಾರ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ರೂಪಿಸಿದೆ. ಈ ಹಿಂದೆ ಮೈಸೂರು ರಾಜ್ಯವಾಗಿದ್ದ ನಮ್ಮ ಕರ್ನಾಟಕ 1976ರಲ್ಲಿ ದಿವಂಗತ ಮುಖ್ಯಮಂತ್ರಿ ಡಿ.ದೇವರಾe ಅರಸುರವರಿಂದ ಕರ್ನಾಟಕ ಎಂದು ನಾಮಕರಣವಾಗಿದ್ದು, ನಾವೆಲ್ಲರೂ ಸಹ ನಮ್ಮ ಹೃದಯ ಅಂತರಾಳದಲ್ಲಿ ಈ ಭಾಷೆಯನ್ನು ಆಳವಾಗಿ ಬೇರೂರಿಸಿಕೊಳ್ಳಬೇಕು. ಯಾವುದೇ ಹಂತದಲ್ಲಿ ಕನ್ನಡಿಗರಾದ ನಾವು ಕನ್ನಡದ ಬೆಳವಣಿಗೆಯಲ್ಲಿ ನಿರ್ಲಕ್ಷ್ಯೆ ತೋರಬಾರದು ಎಂದರು.

    ಕಳೆದ ಹಲವಾರು ವರ್ಷಗಳಿಂದ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸಿ ನಿವೃತ್ತ ವೈದ್ಯಾಧಿಕಾರಿ ಡಾ.ಚಂದ್ರನಾಯ್ಕ, ಕವಿ ಪಗಡಲಬಂಡೆ ನಾಗೇಂದ್ರಪ್ಪ, ಚಿಕ್ಕಮ್ಮನಹಳ್ಳಿ ಎಚ್.ತಿಪ್ಪೇಸ್ವಾಮಿ, ಡಾ.ಚಾರುಲತಾ, ವೆಂಕಟೇಶ್, ಆರ್.ಎಚ್.ಸುರೇಶ್, ರಾಜಶೇಖರ್, ಕೆ.ಟಿ.ಮುತ್ತುರಾಜ್‍ರವರನ್ನು ಸನ್ಮಾನಿಸಲಾಯಿತು.

   ಮನೋರಂಜನಾ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕೋಟೆ ಇತಿಹಾಸವನ್ನು ಗೀತೆಗಳ ಮೂಲ ನರ್ತಿಸಿ ಜನರ ಮನಸು ಸೂರೆಗೊಂಡ ಮಹಾತ್ಮಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ದೊರಕಿದ್ದು, ಜ್ಞಾನಸುರಭಿ ಶಾಲೆಗೆ ದ್ವಿತೀಯ ಬಹುಮಾನ, ಎಸ್‍ಆರ್‍ಎಸ್ ತೃತೀಯ ಬಹುಮಾನ ಪಡೆದರೆ, ಕುವೆಂಪು, ಸಾಯಿಚೇತನ ಶಾಲೆಗಳು ಸಮದಾನಕರ ಬಹುಮಾನ ಪಡೆದವು.

    ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣಸೂರಯ್ಯ, ಸಮರ್ಥರಾಯ, ಉಮಾ,ರಂಜಿತ, ಜಿ.ವೀರೇಶ್, ನಗರಸಭಾ ಸದಸ್ಯರಾದ ಸಿ.ಕವಿತಾ, ಟಿ.ಶಿವಕುಮಾರ್, ಓ.ಸುಜಾತ, ಸುಮಾ, ಎಸ್.ಜಯಣ್ಣ, ಸಿ.ಎಂ.ವಿಶುಕುಮಾರ್, ಹೊಯ್ಸಳಗೋವಿಂದ, ಎಂ.ನಾಗಮಣಿ, ಕವಿತಾವೀರೇಶ್, ತಿಪ್ಪಮ್ಮ, ಆರ್.ಮಂಜುಳಾ, ಸಿ.ಶ್ರೀನಿವಾಸ್, ಜೈತುಂಬಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಹ್ಲಾದ್, ಬೋರಯ್ಯ, ಎಸ್.ಎಚ್ .ಸೈಯದ್, ಇಒ ಶ್ರೀಧರ್ ಐ.ಬಾರಿಕೇರ್, ಡಿವೈಎಸ್ಪಿ ರೋಷನ್‍ಜಮೀರ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಸ್ವಾಗತಿಸಿ ವಂದಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link