ಮಹಿಳೆಯರಿಗೆ ಇರುವ ಕಾನೂನು ಶೋಷಿತರ ಧ್ವನಿಯಾಗಬೇಕು: ಶ್ಯಾಮಲ ಎಸ್ ಕುಂದರ್

ತುಮಕೂರು
 
      ಮಹಿಳೆಯರ ರಕ್ಷಣೆಗಾಗಿ ಇರುವ ದೇಶದ ಕಾನೂನು ಶೋಷಿತ ಮಹಿಳೆಯರ ಧ್ವನಿಯಾಗಬೇಕು. ಕಾನೂನಿನ ಸದುಪಯೋಗ ಆಗಬೇಕೇ ಹೊರತು ಇದರಿಂದ ಸಂಸಾರದ ಸಂಬಂಧ ಬಿಗಡಾಯಿಸುವಂತಾಗಬಾರದೆಂದು ರಾಷ್ಟ್ರೀಯ ಮಹಿಳಾ ಆಯೋಗದ ಸದ್ಯಸ್ಯೆ ಶ್ಯಾಮಲ ಎಸ್. ಕುಂದರ್ ಅವರು ತಿಳಿಸಿದರು.
      ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಶ್ವವಿದ್ಯಾನಿಲಯದ ಸರ್. ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿಂದು  ಜರುಗಿದ ಮಹಿಳಾ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
     ದೇಶದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನವಿರುವುದಕ್ಕೆ ನಮ್ಮ ಎಲ್ಲಾ ದೇವತೆಗಳ ಹೆಸರು ಮತ್ತು ನದಿಗಳ ಹೆಸರು ಹೆಣ್ಣಿನದೇ ಆಗಿದೆ. ಹೆಣ್ಣಿನಲ್ಲಿರುವ ಶಕ್ತಿ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಕಾರ್ಯವೈಖರಿಯಿಂದ ಗುರುತಿಸಲ್ಪಟ್ಟಿದೆ. ಅದಕ್ಕಾಗಿ ಈ ಕಾನೂನು ಮಹಿಳೆಯರ ಆತ್ಮರಕ್ಷಣೆ ಮತ್ತು ಸ್ವಾಭಿಮಾನದ ರಕ್ಷಣೆಗೆ ಉಪಯೋಗವಾಗಬೇಕೆಂದು ಅವರು ಅಭಿಪ್ರಾಯಪಟ್ಟರು. 
      ಸಮಾಜದಲ್ಲಿ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಂತೆ ಭಾವಿಸಿದಾಗ ಕೌಟುಂಬಿಕ ಜಗಳಗಳಾಗಲು ಸಾಧ್ಯವಿಲ್ಲ. ನಮ್ಮ ದೇಶದ ಸಂಸ್ಕøತಿ ಮತ್ತು ಸಂಸ್ಕಾರ ಮಹಿಳೆಯರಿಂದ ಉಳಿದುಬಂದಿದ್ದು ಅದನ್ನು ವಿದೇಶಿಯರು ಗೌರಿವಿಸುತ್ತಿದ್ದಾರೆ. ಯಶಸ್ವಿ ಪುರುಷನ ಹಿಂದೆ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಪುರುಷ ಮತ್ತು ಮಹಿಳೆ ಸಮಾನರೆಂದು ಭಾವಿಸಬೇಕೇ ಹೊರತು ಸ್ಪರ್ಧೆಗೆ ಇಳಿಯಬಾರದೆಂದು ಅವರು ಕಿವಿಮಾತು ಹೇಳಿದರು. ಇತ್ತೀಚಿನ ಮೊಬೈಲ್ ಬಳಕೆಯಿಂದ ಸಾಂಸಾರಿಕ ಸಂಬಂಧ ಬಿಗಡಾಯಿಸುತ್ತಿದ್ದು, ಮೊಬೈಲ್ ಸದ್ಬಳಕೆ ಆಗಬೇಕು ಅದು ನಮ್ಮ ಜೀವನಕ್ಕೆ ಮುಳುವಾಗಬಾರೆದೆಂದು ಅವರು ಸಲಹೆ ನೀಡಿದರು. 
     ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಪಿ. ಲಕ್ಷ್ಮಮ್ಮ ಮಾತನಾಡಿ, ಸಮಾಜದಲ್ಲಿ ಮಹಿಳೆಯರನ್ನು ಅಕ್ಕ, ತಂಗಿ, ತಾಯಿ ಎಂದು ಭಾವಿಸಿ ಸಮಾನವಾಗಿ ಕಾಣುವುದರ ಜೊತೆಗೆ ಗೌರವ ನೀಡುವುದರಿಂದ ಒಂದು ಸುಸಂಸ್ಕøತ ಸಮಾಜ ನಿರ್ಮಾಣವಾಗಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಆಯೋಗಕ್ಕೆ ಪ್ರತಿದಿನ 100 ರಿಂದ 150 ದೂರುಗಳ ದಾಖಲಾಗುತ್ತಿದ್ದು, ಪ್ರಸಕ್ತ ವರ್ಷ 9000 ಇಂತಹ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು. 
      ಮಹಿಳೆಯರ ದೂರು ವಿಷಯದಲ್ಲಿ ಅರ್ಜಿ ಸ್ವೀಕಾರ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿಯಿದ್ದು, ನೋಂದ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಲು ದೂರು ನೀಡಬಹುದಾಗಿದೆ ಎಂದು ಅವರು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ.ಎಸ್. ಸಿದ್ದೇಗೌಡ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇಕಡಾ 50ರಷ್ಟು ಇರುವ ಮಹಿಳೆಯರು ದೇಶದ ಅಭಿವೃದ್ಧಿಗಾಗಿ ಎಲ್ಲಾ ರಂಗಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಸ್ವಾವಲಂಬಿ ಬದುಕನ್ನು ಮಹಿಳೆಯರು ರೂಪಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
       ದೇಶದ ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿಯೇ ಅನೇಕ ಕಾನೂನುಗಳಿದ್ದು, ಈ ಕಾನೂನುಗಳ ಅನುಷ್ಠಾನ ಫಲಪ್ರದವಾಗಿ ಆಗಬೇಕಾಗಿದೆ ಎಂದು ಅವರು ತಿಳಿಸಿದರು. ಹೆಣ್ಣು ಕಲಿತರೆ ಒಂದು ಕುಟುಂಬ, ಸಮಾಜ ಸುಶಿಕ್ಷಿತರಾದಂತೆ ಆಗುತ್ತದೆ.ಸ್ವಾಮಿ ವಿವೇಕಾನಂದರು ಹೇಳುವಂತೆ ನಮ್ಮ ಜೀವನದ ಶಿಲ್ಪಿಗಳು ನಾವೇ ಆಗಬೇಕು ಎಂಬ ಮಾತನ್ನು ಅರಿತಿರುವ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಹೊಸ ಸಮಾಜ ನಿರ್ಮಾಣಕ್ಕೆ ಹೆಣ್ಣಿನ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 
    ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕುರಿತು ನಗರದ ವರದಕ್ಷಿಣೆ ವಿರೋಧಿ ವೇದಿಕೆಯ ವಕೀಲರು ಹಾಗೂ ಕಾರ್ಯದರ್ಶಿಗಳಾದ ಸಾ.ಚಿ. ರಾಜ್‍ಕುಮಾರ್, ಹೆಣ್ಣು ಭ್ರೂಣ ಹತ್ಯೆ, ಪ್ಲಾಸ್ಟಿಕ್ ನಿಷೇಧ ಸ್ವಚ್ಛತೆ ಕುರಿತು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹಾಗೂ ಮಕ್ಕಳ ತಜ್ಞೆ ಡಾ. ಎಂ. ರಜನಿ, ಜೀವನಾಂಶ, ಆಸ್ತಿಯ ಹಕ್ಕು, ಮಹಿಳೆಯರ ಅನೈತಿಕ ಸಾಗಾಟ ತಡೆ ಕಾಯ್ದೆ ಹಾಗೂ ಮಹಿಳೆಯರಿಗಾಗಿ ಇರುವ ಇತರೆ ಕಾನೂನುಗಳ ಕುರಿತು ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್. ರಮೇಶ್ ಹಾಗೂ ಕೌಟುಂಬಿಕ ದೌರ್ಜನ್ಯ ತಡೆಕಾಯ್ದೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ ಕೆ.ಹೆಚ್. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾಯಿದೆಗಳ ಕುರಿತು ಸುದೀರ್ಘವಾದ ಉಪನ್ಯಾಸ ನೀಡಿದರು.
     ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕೆ.ಎನ್. ಗಂಗಾನಾಯಕ್, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ್ ಕೆ.ಜಿ. ಡಿವೈಎಸ್‍ಪಿ ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್. ನಟರಾಜ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap