ತುಮಕೂರು:
ನಗರದ ಮೊದಲ ಸ್ಮಾರ್ಟ್ ಸಿಟಿ ರಸ್ತೆಯಾಗಿ ಅಭಿವೃದ್ಧಿಪಡಿಸಿದ್ದ ಜನರಲ್ ಕಾರಿಯಪ್ಪ ರಸ್ತೆ ಇತರೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಮಾದರಿಯಾಗುವ ಬದಲು, ಅವೈಜ್ಞಾನಿಕ ಕಾಮಗಾರಿಗಳಿಗೆ ನಿದರ್ಶನವಾಗಿದೆ.
16ನೇ ವಾರ್ಡ್ ವ್ಯಾಪ್ತಿಗೆ ಬರುವ ವಾಣಿಜ್ಯ ರಸ್ತೆಯಾಗಿರುವ ಜನರಲ್ ಕಾರಿಯಪ್ಪ ರಸ್ತೆಯನ್ನು ತುಮಕೂರಿನ ಸ್ಮಾರ್ಟ್ ಸಿಟಿ ಅಭಿವೃದ್ಧಿಯೋಜನೆಯಡಿ ಮೊದಲಿಗೆ ಕೈಗೆತ್ತಿಕೊಳ್ಳಲಾಯಿತು. ಮಾದರಿಯಾಗಿ ಅಭಿವೃದ್ಧಿಪಡಿಸುತ್ತೇವೆಂದು ಘೋಷಿಸಿ ಪಾದಚಾರಿ ಮಾರ್ಗ ಅಭಿವೃದ್ಧಿ, ಹೊಸ ಎಲೆಕ್ಟ್ರಿಕ್ ಪೋಲ್‍ಗಳನ್ನು ಅಳವಡಿಸಿ, ರಸ್ತೆ ಡಾಂಬರೀಕರಣವನ್ನು ಮಾಡಲಾಗಿದೆ. ಆದರೆ ಮಾದರಿ ರಸ್ತೆಯ ಬಣ್ಣ ಇದೀಗ ಕಳಚುವಂತಾಗಿದ್ದು, ರಸ್ತೆ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಸ್ಲ್ಯಾಬ್‍ಗಳು ಎದ್ದು ಬರುತ್ತಿರುವುದೇ ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ.
ಆರಂಭದಲ್ಲೇ ಕಿತ್ತು ಬರುತ್ತಿರುವ ಸ್ಲ್ಯಾಬ್‍ಗಳು:
ರಸ್ತೆ ಆರಂಭದ ಸೂಪರ್ ಮಾರ್ಕೆಟ್ ಮುಂಭಾಗವೇ ಸ್ಲ್ಯಾಬ್‍ಗಳು ಕಿತ್ತುಬಂದಿದ್ದು, ಇದು ಪೊಲೀಸ್ ಕ್ವಾಟ್ರಸ್, ಗ್ರಾಮಾಂತರ ಠಾಣೆವರೆಗೆ ಎರಡುಬದಿಯಲ್ಲಿ ಮುಂದುವರಿದಿದೆ. ಎದ್ದಿರುವ ಸ್ಲ್ಯಾಬ್‍ಗಳನ್ನು ಪಾದಚಾರಿಗಳು ನೋಡದೆ ತುಳಿದು, ಬಿದ್ದು ಪೆಟ್ಟುಮಾಡಿಕೊಳ್ಳುವ ಸಂಭವ ಹೆಚ್ಚಾಗಿದೆ.
ರಸ್ತೆಯಲ್ಲಿ ರಾಶಿ ಮಣ್ಣು:
ರಸ್ತೆಯುದ್ದಕ್ಕೂ ಎರಡು ಬದಿಯಲ್ಲಿ ಮಣ್ಣು ತುಂಬಿದ್ದು, ಮಣ್ಣಿನ ಮೇಲೆ ಹಾದುಹೋಗುವ ವಾಹನಗಳಿಂದ ಏಳುವ ಧೂಳಿನಿಂದ ಎರಡು ಬದಿಯ ಅಂಗಡಿಗಳವರು, ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ವಿದ್ಯುತ್ ಕಂಬಗಳು, ಮಾರ್ಗ ಸೂಚಿ ಫಲಕಗಳ ಅಳವಡಿಕೆಗಾಗಿ ಸುರಿದಿರುವ ಮಣ್ಣು, ಜಲ್ಲಿಯನ್ನು ಅಲ್ಲಲ್ಲಿ ಹಾಗೇ ಬಿಡಲಾಗಿದ್ದು, ತೆರವುಗೊಳಿಸಲು ಸ್ಮಾರ್ಟ್‍ಸಿಟಿಯವರಾಗಲೀ, ಪಾಲಿಕೆಯವರಾಗಲೀ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನೀರು ಹರಿಯಲು ಜಾಗವೆಲ್ಲಿ?
ರಸ್ತೆ ಎರಡು ಬದಿಯ ಪಾದಚಾರಿ ಮಾರ್ಗದಲ್ಲಿ ಸ್ಲ್ಯಾಬ್‍ಗಳನ್ನು ಅಳವಡಿಸಿದ್ದು ಅದರ ಮೇಲೆ ಬಿದ್ದ ಮಳೆ ನೀರು ಚರಂಡಿಗೆ ಇಳಿಯಲು ಅವಕಾಶ ಇಲ್ಲವಾಗಿದೆ. ಅಂತೆಯೇ ರಸ್ತೆ ಮೇಲೆ ಬಿದ್ದ ಮಳೆ ನೀರು ಚರಂಡಿಗೆ ಹರಿಯಲು ಕನಿಷ್ಠ 50 ಅಡಿಗಳ ಅಂತರಕ್ಕಾದರೂ ತೂಬು ಮಾಡದಿರುವುದು ಇದೆಂಥಾ ಸ್ಮಾರ್ಟ್ ಕಾಮಗಾರಿ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.
ಎಲ್ಲೆಂದರಲ್ಲಿ ಪಾರ್ಕಿಂಗ್:
ಸದರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಸಹ ಮಾಡಲಾಗುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮೊದಲ ರಸ್ತೆಯಲ್ಲೇ ಇಂತಹ ಸ್ಥಿತಿಯಾದರೆ ಉಳಿದ ರಸ್ತೆಗಳ ಪಾಡೇನು ಎಂಬ ಪ್ರಶ್ನೆ ಈ ಅವಾಂತರಗಳನ್ನು ನೋಡಿದರೂ ಎದುರಾಗುತ್ತಿದೆ. ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಸೂಚಿಸಿದರೂ ಕಾಮಗಾರಿಗಳು ಬೇಕಾಬಿಟ್ಟಿ ಯಾಗುತ್ತಿರುವುದು ನಾಗರಿಕರಲ್ಲಿ ಸ್ಮಾರ್ಟ್ ಸಿಟಿಯ ಬಗ್ಗೆಯೆ ಭ್ರಮ ನಿರಸನವನ್ನುಂಟು ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
