ಬೆಂಗಳೂರು:
ಬೆಂಗಳೂರಿನಲ್ಲಿ ಕೆಲ ದಿನಗಲ ಹಿಂದೆ ಹಾಡಹಗಲೇ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಕೈವಾಡವಿದೆ ಎಂಬ ಶಂಕೆ ಮುಡುತ್ತಿದೆ.
ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ಬಿಜೆಪಿ ಶಾಸಕರ ಆಪ್ತರಾದ ಬೂನ್ ಬಾಬು, ಸತೀಶ್ ಸೇರಿದಂತೆ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೆ ಶಾಸಕರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ .
ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಶೂಟೌಟ್ ನಡೆದ ಸ್ಥಳದಲ್ಲಿ ಪಂಚನಾಮೆ ಮಾಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮಹಜರು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪುನರ್ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು, ಎಸಿಪಿ ಬಾಲರಾಜ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಘಟನಾ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಮಾಹಿತಿ ಕಲೆಹಾಕಲಾಗಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಿದ್ದೇವೆ. ಈ ಸಂಬಂಧ ಈಗಾಗಲೇ ಕೆಲ ಆರೋಪಿಗಳನ್ನು ಕರೆದು ವಿಚಾರಣೆ ನಡೆಸಲಾಗಿದೆ. ಅವಶ್ಯವಿದ್ದಲ್ಲಿ ಶಂಕಿತರನ್ನು ಕರೆತಂದು ವಿಚಾರಣೆ ನಡೆಸುತ್ತೇವೆ ಎಂದರು.
ಪ್ರಕರಣದ ಹಿನ್ನೆಲೆ:
ಯಲಹಂಕದ ಕೋಗಿಲು ಕ್ರಾಸ್ ಬಳಿ 2017ರ ಫೆಬ್ರವರಿ 3ರಂದು ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
