ತುಮಕೂರು
ಬಹು ನಿರೀಕ್ಷೆಗಳೊಂದಿಗೆ ಅನುಷ್ಠಾನಗೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆ ಹಲವು ಹತ್ತು ಸಮಸ್ಯೆಗಳ ಸುಳಿಗೆ ಸಿಲುಕಿ ನಿರೀಕ್ಷಿತ ಫಲಿತಾಂಶ ಸಾಧ್ಯವಾಗುತ್ತಿಲ್ಲ. ಸುಂದರ ಸಿಟಿಯ ಕನಸು ಕಾಣುತ್ತಿದ್ದ ನಾಗರಿಕರಿಗೆ ಸ್ಮಾರ್ಟ್ ಸಿಟಿಯ ಪರಿಕಲ್ಪನೆಯೇ ಬೇಸರ ತರಿಸಿದೆ. ಅಷ್ಟರ ಮಟ್ಟಿಗೆ ನಡೆಯುತ್ತಿವೆ ಕಾಮಗಾರಿಗಳು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಂಡಿರುವ ಈ ಯೋಜನೆ ಪ್ರಾರಂಭವಾಗಿ ವರ್ಷ ಕಳೆದರೂ ಜನತೆಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಯಾವ ಭಾಗದಲ್ಲಿ ಏನು ಕೆಲಸ ನಡೆಯುತ್ತಿದೆ ಎಂಬ ಅರಿವಿಲ್ಲ. ತಿಳಿಯಬೇಕಾ ದವರಿಗೆ ಈ ಮಾಹಿತಿ ಇಲ್ಲವೆಂದರೆ ಜನಸಾಮಾನ್ಯರಿಗೆ ಇನ್ನೆಲ್ಲಿ ಮಾಹಿತಿ ಸಿಗಲು ಸಾಧ್ಯ. ಒಟ್ಟಾರೆ ಈ ಯೋಜನೆಯನ್ನು ಗಮನಿಸುತ್ತಾ ಹೋದರೆ ಹೇಗಾದರೂ ಸರಿ ಈ ಯೋಜನೆ ಮುಗಿದರೆ ಸಾಕು ಎನ್ನುವಂತಿದೆ. ಕಾಮಗಾರಿಯ ಮೇಲ್ವಿಚಾರಣೆ ಇಲ್ಲದೆ ಇದನ್ನು ಪ್ರಶ್ನಿಸುವವರು ಇಲ್ಲದೆ ವಿವಿಧ ಹಂತದ ಕಾಮಗಾರಿಗಳು ಹಳ್ಳ ಹಿಡಿಯುತ್ತಿದ್ದು, ಜನತೆ ಭ್ರಮನಿರಸನಗೊಳ್ಳುವಂತಾಗಿದೆ.
ನಗರದ ಜನರಲ್ ಕಾರ್ಯಪ್ಪ ರಸ್ತೆಯ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಸ್ಮಾರ್ಟ್ ಸಿಟಿ ಯೋಜನೆ ಆರಂಭವಾದಾಗ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಇದೊಂದು ಮಾದರಿ ರಸ್ತೆಯಾಗಲಿದೆ ಎಂದು ಹೇಳಲಾಯಿತು. ಇದಕ್ಕಾಗಿ 363.37 ಲಕ್ಷ ರೂ.ಗಳ ವೆಚ್ಚದ ಯೋಜನೆ ಸಿದ್ಧಗೊಂಡಿತು. ಕೆ.ಆರ್.ಬಡಾವಣೆ ಬಸ್ ನಿಲ್ದಾಣದಿಂದ ಆರಂಭವಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯವರೆಗೆ 530 ಮೀಟರ್ ರಸ್ತೆಯನ್ನು ಸ್ಮಾರ್ಟ್ ಆಗಿಸುವ ಪ್ರಕ್ರಿಯೆಗಳು ಆರಂಭವಾದವು.
ಇದಕ್ಕಾಗಿ ಶ್ರೀನಿವಾಸ ಕನ್ಸ್ಟ್ರಕ್ಷನ್ ಅವರಿಗೆ ಗುತ್ತಿಗೆ ನೀಡಿ 5.12.2019ರ ಒಳಗೆ ಈ ಕಾಮಗಾರಿ ಮುಗಿಸುವ ವಾಯಿದೆ ನೀಡಲಾಯಿತು. 5.12.2018 ರಂದು ಕಾಮಗಾರಿ ಆರಂಭವಾಗಿ 12 ತಿಂಗಳ ಗಡುವು ನೀಡಿದ್ದು, ಈ ವಾಯಿದೆ ಮುಗಿದರೂ ಬಾರ್ಲೈನ್ ರಸ್ತೆ ಸ್ಮಾರ್ಟ್ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ. ವರ್ಷದಿಂದ ಈ ರಸ್ತೆಯನ್ನು ಅಲ್ಲಲ್ಲಿ ಅಗೆಯುತ್ತಲೇ ಇದ್ದು, ಮತ್ತೆ ಮತ್ತೆ ಅಗೆತಕ್ಕೆ ಒಳಗಾಗಿ ಜನ ರೋಸಿ ಹೋಗಿದ್ದಾರೆ. ಅಲ್ಲಿ ನಿಗದಿಯಾಗಿದ್ದ ರೀತಿಯಲ್ಲಿ ಯಾವುದೇ ಕಾಮಗಾರಿಗಳು ಪರಿಪೂರ್ಣ ಗೊಳ್ಳುತ್ತಿಲ್ಲ.
ಅಂದುಕೊಂಡದ್ದೇ ಬೇರೆ, ಆಗಿರುವುದೇ ಬೇರೆ ಎಂಬಂತೆ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗಿವೆ. ಅಲ್ಲಿನ ನಿವಾಸಿಗಳ ಪ್ರಕಾರ ತ್ವರಿತವಾಗಿ ಈ ಕಾಮಗಾರಿಗಳು ನಡೆದಿದ್ದರೆ ಈ ವೇಳೆಗಾಗಲೇ ಮುಗಿಯಬೇಕಿತ್ತು. ಆದರೆ ನಿರಂತರ ನಿರ್ಲಕ್ಷ್ಯದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಇಲ್ಲಿ ಓಡಾಡಲು ಅತ್ಯಂತ ಬೇಸರ ತರಿಸಿದೆ ಎನ್ನುತ್ತಾರೆ ಆ ಭಾಗದ ಸಾರ್ವಜನಿಕರು.
ಈ ರಸ್ತೆಯಲ್ಲಿ ಕಾಮಗಾರಿ ಯೋಜನೆ ಸಿದ್ಧಪಡಿಸುವಾಗ ಹಲವು ಯೋಜನೆಗಳನ್ನು ಕೈಪಿಡಿಯಲ್ಲಿ ಅಳವಡಿಸಲಾಗಿತ್ತು. ವೆಂಡಿಂಗ್ ಝೋನ್, ಲೈಟ್ಗಳು, ಸಾರ್ವಜನಿಕ ಸೌಲಭ್ಯಗಳು, ಪಾರ್ಕಿಂಗ್, ಕುಳಿತುಕೊಳ್ಳುವ ಆಸನಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಲ್ಲಿ ಅಳವಡಿಸಬೇಕು. ಆದರೆ ಕಾಮಗಾರಿಯೇ ಕುಂಟುತ್ತಾ ಸಾಗಿದ್ದು, ಸೌಲಭ್ಯಗಳನ್ನು ಅಳವಡಿಸುವುದು ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.
ಪಾರ್ಕಿಂಗ್ ಸೌಲಭ್ಯದ ವಿಷಯಕ್ಕೆ ಬಂದರೆ ಬಿ.ಎಚ್.ರಸ್ತೆಯಿಂದ ಕಾರ್ಯಪ್ಪ ರಸ್ತೆಯಲ್ಲಿ ಹೋಗುವಾಗ ಎಡಭಾಗದ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ಜಾಗಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದರ ನಿಗದಿಗೊಳಿಸುವ ಮಾಹಿತಿ ಈಗಾಗಲೇ ಬಹಿರಂಗವಾಗಿರುವುದರಿಂದ ಅದರೊಳಗೆ ವಾಹನಗಳನ್ನು ನಿಲ್ಲಿಸಲು ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ಈ ಭಾಗದಲ್ಲಿ ವಾಹನ ನಿಲುಗಡೆಯ ಸಮಸ್ಯೆ ಯಾವಾಗ ನಿವಾರಣೆಯಾಗುವುದೋ ಎಂಬ ಆತಂಕ ಇನ್ನೂ ಮುಂದುವರೆದಿದೆ.
ತಿಂಗಳಾನುಗಟ್ಟಲೆ ಕಾಮಗಾರಿಯ ಹೆಸರಿನಲ್ಲಿ ಮಣ್ಣು ಸೇರಿದಂತೆ ಕೆಲವು ಪರಿಕರಗಳನ್ನು ಈ ರಸ್ತೆಯಲ್ಲಿ ಹಾಕಲಾಗುತ್ತಿದೆ. ಆ ಭಾಗದ ನಿವಾಸಿಗಳಿಗೆ ಇದು ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದ ರೋಸಿಹೋದ ಕೆಲವರು ಮಣ್ಣು ಎತ್ತುವಳಿ ಮಾಡಿ ಬೇರೆ ಕಡೆ ಹಾಕಲು ಹೋದರೆ ಕಳ್ಳತನದ ಪ್ರಕರಣ ದಾಖಲಿಸುವ ಭಯ ಆವರಿಸುತ್ತದೆ. ಈಗಾಗಲೇ ಅಂತಹ ಉದಾಹರಣೆಗಳು ನಡೆದಿವೆ. ಕೆಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು (ವೆಂಡರ್ ಝೋನ್) ಕೆಲವರಿಂದ ತಕರಾರು ಎದುರಾಗಿದ್ದು, ಅದನ್ನು ನಿವಾರಿಸಿ ಮುಂದೆ ಹೋಗುವ ಪ್ರಯತ್ನಗಳು ನಡೆದಿಲ್ಲ. ಇದೆಲ್ಲದರ ಪರಿಣಾಮವಾಗಿ ಇಡೀ ಕಾಮಗಾರಿ ಕುಂಟುತ್ತಾ ಸಾಗಿದೆ.
ಇಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗಸ್ಟ್ 28 ರಂದು ಆ ಭಾಗದ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಜನರಲ್ ಕಾರ್ಯಪ್ಪ ರಸ್ತೆಯ ಶ್ರೀರಾಮ ಮಂದಿರದ ಎದುರೇ ಈ ಪ್ರತಿಭಟನೆ ನಡೆದಿತ್ತು. ಮನವಿ ಪತ್ರವನ್ನೂ ಸಹ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿ, ಸ್ಮಾರ್ಟ್ಸಿಟಿ ಅಧ್ಯಕ್ಷರು, ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿತ್ತು.
ರಸ್ತೆಗಳಲ್ಲಿ ಅತ್ಯಂತ ಆಳವಾದ ಗುಂಡಿಗಳನ್ನು ತೋಡಿದ್ದು, ಇಲ್ಲಿನ ವಾಣಿಜ್ಯ ಮಳಿಗೆಗಳಿಗೆ ತೆರಳಿ ವ್ಯಾಪಾರ ವಹಿವಾಟು ನಡೆಸುವುದು ಕಷ್ಟಕರವಾಗಿದೆ. ಆದಾಯ ಕುಂಠಿತಗೊಳ್ಳುತ್ತಿದೆ. ಇಡೀ ರಸ್ತೆ ಧೂಳಿನಿಂದ ಆವೃತಗೊಂಡಿದೆ. ಇದು ಈ ಭಾಗದ ನಿವಾಸಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಆದರೆ ಪ್ರತಿಭಟನೆ ನಡೆದು ತಿಂಗಳುಗಳೇ ಉರುಳಿದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.
ಇದನ್ನೆಲ್ಲಾ ಗಮನಿಸಿದರೆ ಈ ಭ್ರಷ್ಟ ವ್ಯವಸ್ಥೆಯೊಳಗೆ ಎಲ್ಲರೂ ಭಾಗಿದಾರರೇ ಎನ್ನುವ ಅನುಮಾನ ಮೂಡುತ್ತಿದೆ. ಕಾಮಗಾರಿಗಳ ಬಗ್ಗೆ ನಿಗಾ ವಹಿಸುವವರು, ಮೇಲುಸ್ತುವಾರಿ ಮಾಡುವವರು, ಹಿರಿಯ ಅಧಿಕಾರಿಗಳಾದಿಯಾಗಿ ಎಲ್ಲರೂ ತುಟಿಕ್ ಪಿಟಿಕ್ ಎನ್ನದೆ ಇರುವುದನ್ನು ನೋಡಿದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತಿವೆಯೇ ಎಂಬ ಅನುಮಾನಗಳು ಮೂಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ