ಹಿಂದುಳಿದ ವರ್ಗದ ಬೆಳವಣಿಗೆಗೆ ಶಿಕ್ಷಣ ಅನಿವಾರ್ಯ : ಡಾ.ಯತೀಂದ್ರ ಸಿದ್ಧರಾಮಯ್ಯ

ಶಿರಾ:

    ದೇಶದ ಅಭಿವೃದ್ಧಿಯಷ್ಟೇ ಅಲ್ಲದೆ ಇಂದಿನ ವಿದ್ಯಾರ್ಥಿಗಳ ಭವಿಷ್ಯ ಶೈಕ್ಷಣಿಕ ಕ್ಷೇತ್ರದ ಮೇಲೆ ನಿಂತಿದ್ದು ಹಿಂದುಳಿದ ವರ್ಗದ ಸಮಾಜಮುಖಿ ಬೆಳವಣಿಗೆಗೆ ಶಿಕ್ಷಣ ಅನಿವಾರ್ಯ ಎಂಬುದನ್ನು ಅರಿಯುವ ಮೂಲಕ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ವಿಶೇಷ ಒತ್ತು ನೀಡಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.

    ತಾಲ್ಲೂಕಿನ ಪಟ್ಟನಾಯಕನಹಳ್ಳಿ ಸಮೀಪದ ವೀರಗಾನಹಳ್ಳಿ ಗ್ರಾಮದಲ್ಲಿ ಶ್ರೀ ಕನಕ ಶೈಕ್ಷಣಿಕ ಹಾಗೂ ಸಮಾಜಸೇವಾ ಟ್ರಸ್ಟ್ ವತಿಯಿಂದ ಸೋಮವಾರ ನಡೆದ ಕನಕದಾಸರ 532ನೇ ಕನಕ ಜಯಂತ್ಯುತ್ಸವ, ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಶೋಷಿತರು, ದಲಿತರೂ ಸೇರಿದಂತೆ ತಳ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಮೇಲ್ವರ್ಗದ ದಬ್ಬಾಳಿಕೆಗೆ ಸಿಲುಕಿದಂತಹ ಸಂದರ್ಬದಲ್ಲಿ ಅಂತಹ ತಳ ಸಮುದಾಯಗಳ ಬೆನ್ನಿಗೆ ನಿಂತವರು ಕನಕದಾಸರು. ಆಳುವ ವರ್ಗದಿಂದ ಮುಕ್ತಿ ಪಡೆದು ಶೋಷಿತ ವರ್ಗ ಒಂದಿಷ್ಟು ಉಸಿರಾಡುವಂತೆ ಮಾಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.

    ಹಿಂದುಳಿದವರು ಮುಂದೆ ಬರಲು ಶಿಕ್ಷಣ ಅನಿವಾರ್ಯ. ಆಸ್ತಿ ಅಧಿಕಾರ ಎಂದಿಗೂ ಶಾಶ್ವತವಲ್ಲ, ವಿದ್ಯೆಯೊಂದೇ ಶಾಶ್ವತ ಎಂಬುದನ್ನು ಎಲ್ಲರೂ ಮನಗಾಣಬೇಕು. ರಾಜಕೀಯ ಕ್ಷೇತ್ರದಲ್ಲಿನ ಅಧಿಕಾರ ಕೆಲವೇ ವರ್ಷಗಳಷ್ಟೆಯಾದರೂ ಈ ಕ್ಷೇತ್ರದಲ್ಲಿ ನಾವುಗಳು ಜಾತ್ಯಾತೀತವಾಗಿ ಸಲ್ಲಿಸಿದ ಸೇವೆ ಮಾತ್ರಾ ಶಾಶ್ವತವಾಗಿ ಉಳಿಯಲು ಸಾದ್ಯ ಎಂದು ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

   ಇದು ಸ್ಪರ್ಧಾತ್ಮಕ ಜಗತ್ತಾಗಿದ್ದು ಇಲ್ಲಿ ವಿದ್ಯೆ ಗಳಿಸಿದವ ಮಾತ್ರಾ ದೇಶದ ಕೀರ್ತಿ ಹೆಚ್ಚಿಸಲು ಸಾದ್ಯ. ರಾಜಕಾರಣಿಗಳ ಅವಧಿ ಕೇವಲ 5 ವರ್ಷವಾಗಿದ್ದು ಅಧಿಕಾರಿಗಳ ಅವಧಿ ನಿವೃತ್ತಿಯತನಕವೂ ಮುಂದುವರೆಯುತ್ತದೆಯಾದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಎಂದು ಕಿವಿ ಮಾತು ಹೇಳಿದ ಅವರು ನನ್ನ ಚುನಾವಣೆಯ ಸಂದರ್ಬದಲ್ಲಿಯೂ ಶಿರಾ ಭಾಗದ ಅನೇಕ ಯುವಕರು ವರುಣ ಕ್ಷೇತ್ರಕ್ಕೆ ಬಂದು ನನ್ನ ಪರ ಪ್ರಚಾರವನ್ನೂ ಮಾಡಿದ್ದು ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.

   ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಸತ್ಯನಾರಾಯಣ್ ಮಾತನಾಡಿ ಕನಕದಾಸರದು ಮೇರು ವ್ಯಕ್ತಿತ್ವ. ಜಗತ್ತು ಕಂಡ ಅಪರೂಪದ ಭಕ್ತಿ ಪರಾಕಾಷ್ಟೆಯನ್ನು ನಾವು ಕನಕದಾಸರಲ್ಲಿ ಕಂಡಿದ್ದೇವೆ. ತಮ್ಮದೇ ಆದ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಕನಕದಾಸರು ಜಾತಿ ಶೋಷಣೆಗಳ ವಿರುದ್ಧ ದನಿ ಎತ್ತಿದವರೆಂದು ಬಣ್ಣಿಸಿದರು.

    ಸಮಾರಂಭದ ವಿದ್ಯ ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಕಾಗಿನೆಲೆ ಗುರುಪೀಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ಮಾತನಾಡಿ ಯಾವುದೇ ಸಮಾಜಗಳಿಗೆ ಒಬ್ಬ ನಾಯಕನ ಅಗತ್ಯವಿದೆ. ಶೋಷಿತ ಸಮುದಾಯಗಳ ಪ್ರತಿನಿಧಿಯ ಸ್ಥಾನವನ್ನು ಅಂದು ಕನಕದಾಸರು ಕಟ್ಟಿಕೊಟ್ಟರೆ ಇಂದು ಅಂತಹ ನಾಯಕನ ಕರ್ತವ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿಭಾಯಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಜಾತ್ಯಾತೀತ ಭಾವನೆಗಳಿಂದ ಸಮಾಜಮುಖಿ ಕೆಲಸ ಮಾಡಿದ ಬಸವಣ್ಣನವರ ಅನುಭವ ಮಂಟಪದಂತೆ ನಮ್ಮ ಎಲ್ಲಾ ಶೋಷಿತ ಸಮುದಾಯಗಳಿಗೆ ಕಳೆದ 5 ವರ್ಷಗಳ ಸಂಪೂರ್ಣ ರಾಜ್ಯಾಡಳಿತ ನೀಡಿದ ಸಿದ್ಧರಾಮಯ್ಯ ಅವರು ಕೂಡಾ ತಮ್ಮ ಸಂಪುಟದಲ್ಲಿ ಎಲ್ಲಾ ಕೆಳಜಾತಿಗಳಿಗೂ ಸ್ಥಾನಮಾನ ನೀಡಿದ್ದು ಶ್ಲಾಘನಾರ್ಹವೇ ಸರಿ ಎಂದರು.

   ಕನಕ ಜಯಂತ್ಯುತ್ಸವಗಳು ಎಲ್ಲಾ ಜಾತಿ ಜನಾಂಗಳ ಸಮ್ಮಿಲನವಾಗಬೇಕು. ದೇವರ ಮಹಿಮೆ ಹಾಗೂ ಜೀವನದ ಮಾತುಗಳನ್ನು ಆಡುವ ಮಾತಿನಲ್ಲಿ ಬರೆದು ಸಾಮಾಜಿಕ ಕಾಳಜಿ ಮೂಡಿಸಿದ ಕನಕದಾರ ಕೀರ್ತನೆಗಳು ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೂರಬೇಕು. ಭಗವಂತನನ್ನು ಕಾಣಲು ಜಾತಿ ಮುಖ್ಯವಲ್ಲ ಭಕ್ತಿಮುಖ್ಯ ಎಂಬುದನ್ನು ಕನಕದಾಸರು ಸಾಬೀತುಗೊಳಿಸಿದ್ದಾರೆಂದು ಶ್ರೀ ಈಶ್ವರಾನಂದಪುರಿಸ್ವಾಮೀಜಿ ತಿಳಿಸಿದರು.

   ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ದೇವರ ಪ್ರತಿಷ್ಠಾಪನೆಯು ಪೂರ್ವ ದಿಕ್ಕಿನಲ್ಲಿರುವುದು ಸಹಜವೂ ಹೌದು. ಇದು ಐತಿಹಾಸಿಕ ಮಾತು ಕೂಡಾ ಆಗಿದೆಯಾದರೂ ದೇವರು ತನ್ನ ಇರುವಿಕೆಯ ದಿಕ್ಕನ್ನೇ ಬದಲಿಸಿ ದರ್ಶನ ಪಡೆದುಕೊಳ್ಳುವ ಭಕ್ತಿ ಪರಾಕಾಷ್ಟೆ ಮೆರೆದ ಕನಕದಾಸರು ನಿಜಕ್ಕೂ ಸ್ಮರಣಾರ್ಹರು ಎಂದರು.

    ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ ಮಾತನಾಡಿ ಶಿರಾ ಭಾಗವು ಅತ್ಯಂತ ಬರಪೀಡಿತ ಪ್ರದೇಶವಾಗಿದ್ದು ಇಲ್ಲಿನ ಜನರಿಗೆ ಶಾಶ್ವತ ನೀರಾವರಿಯ ಅಗತ್ಯವಿದೆ. ನೀರಿನ ಹೆಸರಲ್ಲಿ ರಾಜಕೀಯ ಬೇಡ. ನಮ್ಮ ಸಮಾಜದ ಮುಖಂಡರನ್ನು ರಾಜಕೀಯವಾಗಿ ಬಳಸಿಕೊಳ್ಳುವವರು ಆಯ್ಕೆಗೊಂಡ ನಂತರ ಮುಖಂಡರನ್ನು ಸ್ಮರಿಸದಂತಾಗುತ್ತಾರೆ. ಅಂತಹ ಭಾವೆನಗಳಿಂದ ರಾಜಕಾರಣಿಗಳು ಮೊದಲು ಹೊರ ಬರಬೇಕು ಎಂದರು.ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಲ್ಲಾ ಜಾತಿ ಜನಾಂಗಗಳನ್ನು ಪ್ರತಿನಿಧಿಸುವ ಒಬ್ಬ ನಾಯಕರಾಗಿ ಹೊರ ಹೊಮ್ಮಿದ್ದು ಅವರ ಪುತ್ರ ಡಾ.ಯತೀಂದ್ರ ಕೂಡಾ ಅಂತಹ ನಾಯಕತ್ವವನ್ನು ಹೊಂದುವಂತಾಗಬೇಕು ಎಂದು ಎಸ್.ನಾಗಣ್ಣ ತಿಳಿಸಿದರು.

     ಸಮಾಜಸೇವಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ ಸಾಧನೆಯು ಯಾರೊಬ್ಬರ ಸ್ವತ್ತು ಕೂಡಾ ಅಲ್ಲ. ಸಾಧನೆಯು ಎಂದೂ ಜಾತಿಗೆ ಸೀಮಿತವಾಗುವುದಿಲ್ಲ ಎಂಬುದಕ್ಕೆ ಭಕ್ತ ಕನಕದಾಸರ ಕೀರ್ತನೆಗಳ ಅರ್ಥವೇ ಜ್ವಲಂತ ಸಾಕ್ಷಿ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಾಸ ಸಾಹಿತ್ಯ ಅತ್ಯಂತ ಪ್ರಮುಖವು ಆಗಿದೆ ಎಂದರು.

     ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ ದಾಸಶ್ರೇಷ್ಠರಲ್ಲಿ ಪ್ರಮುಖರಾದ ಕನಕದಾಸರ ಜಯಂತೋತ್ಸ ವವನ್ನು ವೀರಗಾನಹಳ್ಳಿ ಯುವಕರು ಕೈಗೊಂಡಿರುವುದು ಶ್ಲಾಘನಾರ್ಹ ಸಂಗತಿ. ಗ್ರಾಮದ ಸಮಸ್ಯೆಗಳನ್ನು ಯುವಕ ಸಂಗದವರು ಜನಪ್ರತಿನಿಧಿಗಳಾದ ನಮ್ಮ ಮುಂದೆ ಇಟ್ಟಿದ್ದು ಅವುಗಳನ್ನು ಈಡೇರಿಸುವ ಕೆಲಸವನ್ನು ಮಾಡಬೇಕು ಎಂದರು.

     ಸಮಾರಂಭಕ್ಕೂ ಮುನ್ನ ಪಟ್ಟನಾಯಕನಹಳ್ಳಿ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಿಂದ ವೀರಗಾನಹಳ್ಳಿಯ ಕನಕ ಜಯಂತ್ಯುತ್ಸವದ ವೇದಿಕೆಯವರೆಗೂ ಡಾ.ಯತೀಂದ್ರ ಸೇರಿದಂತೆ ಗಣ್ಯರನ್ನು ಬೈಕ್ ರ್ಯಾಲಿ ಮೂಲಕ ಮೆರವಣಿಗೆಯಲ್ಲಿ ಕರೆ ತರಲಾಯಿತು.

      ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್ ಸೇರಿದಂತೆ ಹಲವರು ಮಾತನಾಡಿದರು. ಶ್ರೀ ಬಿಂದುಶೇಖರ ಒಡೆಯರ್‍ಸ್ವಾಮೀಜಿ, ನಟರಾಜ್ ಬರಗೂರು, ಶ್ರೀನಿವಾಸ್ ಬರಗೂರು, ದೇವರಾಜಪ್ಪ, ತಾ.ಪಂ. ಸದಸ್ಯ ಶ್ರೀನಿವಾಸ್, ಕನಕಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಮಂಜುನಾಥ್, ಕೆ.ಎನ್. ಮಂಜು ನಾಥ್ , ಕೆ.ಎನ್.ನಾಗರಾಜು, ಬಿ.ಜೆ.ಕರಿಯಪ್ಪ, ಅಬ್ದುಲ್ಲಾಖಾನ್, ಮುದಿಮಡು ರಂಗಸ್ವಾಮಯ್ಯ ಸೇರಿದಂತೆ ಶ್ರೀ ಕನಕ ಶೈಕ್ಷಣಿಕ ಹಾಗೂ ಸಮಾಜಸೇವಾ ಟ್ರಸ್ಟ್‍ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link