ಬಳ್ಳಾರಿ:
ವಿವಿಯ ಕನ್ನಡ ಅಧ್ಯಯನ ವಿಭಾಗದ ಅಡಿ ಸ್ನಾತಕೋತ್ತರ ಪದವಿಯಲ್ಲಿ ಪ್ರದರ್ಶನ ಕಲೆ ಹಾಗೂ ಎಂ.ಇಡಿ ಎಂಬ ಎರಡು ಹೊಸ ಕೋರ್ಸ್ ಪ್ರಾರಂಭಿಸಲು ವಿವಿಯ ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಗಳವಾರ ವಿವಿಯ ಅತಿಥಿ ಗೃಹದಲ್ಲಿ ನಡೆದ ವಿದ್ಯಾ ವಿಷಯಕ ಪರಿಷತ್ ಸಭೆಯಲ್ಲಿ ಇವುಗಳನ್ನು ಅನುಮೋದನೆಗೊಳಿಸಲಾಯಿತು.
ನಡಾವಳಿಗಳಲ್ಲಿ ಚರ್ಚಿತವಾದ ಇನ್ನಿತರ ವಿಷಯಗಳ ಪೈಕಿ, ವಿವಿ ಅಧೀನದಲ್ಲಿ ಬರುವ ಮಹಾವಿದ್ಯಾಲಯಗಳಲ್ಲಿ ಪಿಹೆಚ್.ಡಿ ಸಂಶೋಧನಾ ಕೇಂದ್ರ ಆರಂಭಿಸಲು, ಮೊದಲು ಡೀನ್‍ಗಳ ಸಭೆ ಕರೆದು ಇದರ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ನಂತರ ಜೇಷ್ಠತೆ ಆಧಾರದ ಮೇಲೆ ಹಾಗೂ ಕನಿಷ್ಠ ಐದು ವರ್ಷ ಶೈಕ್ಷಣಿಕ ಸಾಧನೆ ಪರಿಶೀಲಿಸಿ ಸಂಶೋಧನಾ ಕೇಂದ್ರಕ್ಕೆ ಅನುಮತಿ ನೀಡಲು ಸಭೆಯ ಅಧ್ಯಕ್ಷರ ಸಮ್ಮುಖದಲ್ಲಿ ಒಪ್ಪಲಾಯಿತು.
ವಿದ್ಯಾ ವಿಷಯಕ ಪರಿಷತ್ ಸದಸ್ಯ ಬಸವರಾಜ ಮಳಿಮಠ ಅವರು ವಿವಿ ಅಧೀನದ ಕೆಲ ಕಾಲೇಜುಗಳಲ್ಲಿ ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಕುಲಸಚಿವರಾದ ಪ್ರೊ. ಬಿ. ಕೆ. ತುಳಸಿಮಾಲ, ವಿವಿ ಅಧೀನದಲ್ಲಿರುವ ಎಲ್ಲ ಮಹಾವಿದ್ಯಾಲಯಗಳಿಗೆ ಕೂಡಲೇ ಸುತ್ತೋಲೆ ಹೊರಡಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ಸಭೆಯ ಮತ್ತೊಂದು ಅಂಶದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದೂರಶಿಕ್ಷಣ ಕೇಂದ್ರ ಆರಂಭಿಸಲು ಶಿವಮೊಗ್ಗದ ಕುವೆಂಪು ವಿವಿ ಅನುಮತಿ ನೀಡುವಂತೆ ವಿವಿಗೆ ಪತ್ರ ಬರೆದಿತ್ತು. ಈ ಕುರಿತು ಸದಸ್ಯರು ಚರ್ಚಿಸಿ, ಶೈಕ್ಷಣಿಕ ಹಿತದೃಷ್ಟಿಯಿಂದ ವಿಶ್ರೀಕೃ ವಿವಿ ಮುಂಬರುವ ಕೆಲದಿನಗಳಲ್ಲಿ ದೂರಶಿಕ್ಷಣ ಅಧ್ಯಯನವನ್ನು ಸ್ವತಃ ಪರಿಚಯಿಸಲು ಮುಂದಾಗಲಿದೆ. ಈ ನಿಟ್ಟಿನಲ್ಲಿ ಕುವೆಂಪು ವಿವಿಗೆ ಅನುಮತಿ ನೀಡದಿರುವುದು ಸೂಕ್ತ ಎಂದು ನಿರ್ಧರಿಸಲಾಯಿತು.
ಖನಿಜ ಸಂಸ್ಕರಣ ಅಧ್ಯಯನ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶದ ನಿಯಮಗಳಲ್ಲಿ ಬದಲಾವಣೆ ಕಲ್ಪಿಸಿದ್ದು, ಬಿ.ಇ. (ತಾಂತ್ರಿಕ ಶಿಕ್ಷಣ) ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಮೂರನೇ ಸೆಮಿಸ್ಟರ್‍ಗೆ ಪ್ರವೇಶ ಪಡೆಯಬಹುದಾಗಿದೆ. ಈ ಕುರಿತು ಅಧಿಸೂಚನೆಯನ್ನು ಶೀಘ್ರದಲ್ಲಿಯೇ ವಿವಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಕೊಪ್ಪಳ ಮತ್ತು ಗಂಗಾವತಿಯಲ್ಲಿ ಎರಡು ನೂತನ ಮಹಾವಿದ್ಯಾಲಯಗಳಿಗೆ ಸಂಯೋಜನೆ ನೀಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಬಳ್ಳಾರಿಯ ಬಿಐಟಿಎಮ್ ಕಾಲೇಜಿನಲ್ಲಿರುವ ಬಿ.ಕಾಂ ಮತ್ತು ಬಿಬಿಎ ಕೋರ್ಸ್ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳಕ್ಕೆ ಸಲ್ಲಿಸಿದ್ದ ಅಂಶವನ್ನು ಅಂಗೀಕರಿಲಾಯಿತು.
ಸಭೆಯಲ್ಲಿ ವಿವಿ ಕುಲಪತಿಗಳು ಮತ್ತು ಸಭೆಯ ಅಧ್ಯಕ್ಷರಾದ ಪ್ರೊ. ಕೆ. ಆರ್. ವೇಣುಗೋಪಾಲ ರೆಡ್ಡಿ, ಕುಲಸಚಿವರಾದ ಪ್ರೊ. ಬಿ. ಕೆ. ತುಳಸಿಮಾಲ, ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ ಕುಮಾರ ಕೆ., ಡೀನರು ಹಾಗೂ ಸಭೆ ಸದಸ್ಯರಾದ ಪ್ರೊ. ಭೀಮನಗೌಡ ಪಾಟೀಲ್, ಪ್ರೊ. ಶಾಂತಾನಾಯ್ಕ್, ಪ್ರೊ. ಕೆ. ಎಸ್. ಲೋಕೇಶ್, ಪ್ರೊ. ಕೆ. ಎಂ. ಬಸವರಾಜ್, ಪ್ರೊ. ವೆಂಕಟೇಶಯ್ಯ, ಬಸವರಾಜ ಮಳಿಮಠ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಇದ್ದರು.