ಬೆಂಗಳೂರು
ಹುಬ್ಬಳ್ಳಿಯ ಬಿಜೆಪಿ ಕೋರ್ ಸಭೆಯಲ್ಲಿ ಮಾತನಾಡಿರುವ ಆಡಿಯೋ ತಮ್ಮದಲ್ಲ ಎನ್ನುವದಾದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಲೇ ತಮ್ಮ ಆರಾಧ್ಯದೈವ ಯಡಿಯೂರು ಸಿದ್ದಲಿಂಗೇಶ್ವರನ ಮುಂದೆ ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ನ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಸವಾಲು ಹಾಕಿದ್ದಾರೆ.
ದೇವರ ಬಗ್ಗೆ ಅಪಾರ ಭಕ್ತಿಭಾವ ಹೊಂದಿರುವ ಯಡಿಯೂರಪ್ಪ ಅವರು, ಆಡಿಯೋ ತಮ್ಮದಲ್ಲ ಎಂದು ಯಡಿಯೂರಿನಲ್ಲಿ ಮಂಗಳವಾರವೇ ಯಡಿಯೂರು ಸಿದ್ದಲಿಂಗೇಶ್ವರನ ಮುಂದೆ ಪ್ರಮಾಣ ಮಾಡಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಯಡಿಯೂರಪ್ಪ ಅವರ ಆಡಿಯೋ ಬಗ್ಗೆ ಆಂತರಿಕ ತನಿಖೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮುಂದಾಗಿದ್ದಾರೆ. ಈ ಆಡಿಯೋ ತಮ್ಮದಲ್ಲ ಎಂದು ಪ್ರತಿಪಾದಿಸುವುದಾದರೆ, ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ತನಿಖೆಗೆ ಒತ್ತಾಯಿಸಬೇಕೆಂದು ಅವರು ಆಗ್ರಹಿಸಿದರು.
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಈ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಣತಿಯಂತೆ ನಡೆದಿದೆ ಎಂದು ಹೇಳಿದ್ದಾರೆ. ಈಗ ನೋಡಿದರೆ, ಉಲ್ಟಾ ಹೊಡೆಯುತ್ತಿದ್ದಾರೆ. ಅನರ್ಹರು ತಮಗೆ ಗೊತ್ತೇ ಇಲ್ಲ ಎಂದೂ ಅವರು ಹೇಳುತ್ತಿದ್ದಾರೆ.
ಯಡಿಯೂರಪ್ಪನವರಿಗೆ ತಾಕತ್ತು ಇದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ವಿರುದ್ಧ ಉಡಾಫೆ ಮಾತನಾಡುತ್ತಿದ್ದಾರೆ, ಚುನಾವಣೆ ಎದುರಿಸುವಂತೆ, ಒತ್ತಾಯಿಸುವ ನಿಮಗೆ ತಾಕತ್ತು ಇದ್ದರೆ, ಹೊಸದಾಗಿ ಚುನಾವಣೆ ಎದುರಿಸಿ ಎಂದು ಅವರು ಹೇಳಿದರು.
ಬಿಜೆಪಿ ನಾಯಕರಿಗೆ ಸಾಮೂಹಿಕ ಸನ್ನಿ ಹಿಡಿದಂತಿದೆ, ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರೆಲ್ಲರಿಗೂ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಲೇವಡಿ ಮಾಡಿದರು. ಮಾಜಿ ಮೇಯರ್ ರಾಮಚಂದ್ರಪ್ಪ ಇನ್ನಿತರ ಮುಖಂಡರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








