ಹುಳಿಯಾರು:
ಹುಳಿಯಾರು ಜನರಿಗೆ ಈಗ ತರಕಾರಿ ಬೆಲೆಯ ಶಾಕ್ ಹೊಡೆಯುತ್ತಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಏರಿತ್ತಿದ್ದು ಜನ ಕೊಳ್ಳಲು ಹಿಂದುಮುಂದು ನೋಡುವಂತ್ತಾಗಿದೆ. ಹೋಟೆಲ್‍ಗಳಲ್ಲಂತಲೂ ತರಕಾರಿ ಸಾರು ಸಿಗದಾಗುತ್ತಿದೆ. ಮದುವೆ ಸೇರಿದಂತೆ ಶುಭ ಕಾರ್ಯ ಮಾಡುವವರು ತರಕಾರಿ ಬೆಲೆ ಕೇಳಿ ಬೆಚ್ಚಿ ಬೀಳುತ್ತಿದ್ದಾರೆ.
ಹುಳಿಯಾರು ಮಾರುಕಟ್ಟೆಗೆ ಹಾಸನದಿಂದ ತರಕಾರಿ ಬರುತ್ತದೆ. ಆದರೆ ಹಾಸನದಲ್ಲೇ ತರಕಾರಿ ಅವಕ ಕುಸಿದಿದ್ದು ಬೆಲೆ ಹೆಚ್ಚಳವಾಗಿದೆ. ಪರಿಣಾಮ ಹುಳಿಯಾರಿನಲ್ಲೂ ಬೆಲೆ ಗಗನಮುಖಿಯಾಗಿದೆ. ಇದಕ್ಕೆ ಮಳೆ ಕೊರತೆ, ಬಿಸಿಲಿನ ಬೇಗೆಯ ಹೆಚ್ಚಳ ಹಾಗೂ ಅಂತರ್ಜಲ ಕುಸಿತದಿಂದ ಕೃಷಿಗೆ ನೀರಿನ ಕೊರತೆ ಎದುರಾಗಿ ಸದ್ಯ ತರಕಾರಿ ಬೆಳೆಯುವವರ ಸಂಖ್ಯೆ ಕಡಿಮೆಂಯಾಗಿರುವುದು ಕಾರಣ ಎನ್ನಲಾಗಿದೆ.
ಮದುವೆ ಮತ್ತಿತರ ಶುಭಕಾರ್ಯಗಳ ಹೆಚ್ಚಳ ಮತ್ತು ರಂಜಾನ್ ಮಾಸದ ಕಾರಣಕ್ಕೆ ತರಕಾರಿಗಳಿಗೆ ಬೇಡಿಕೆ ಸಹ ಹೆಚ್ಚಿದೆ. ಆದರೆ ಪೂರೈಕೆಯ ಪ್ರಮಾಣ ಕಡಿಮೆ ಇದೆ. ಇದರಿಂದ ಸಹಜವಾಗಿ ಬೆಲೆ ಹೆಚ್ಚಳವಾಗಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಗಗನಮುಖಿಯಾಗುತ್ತಿದೆ.
ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಜನಪ್ರಿಯ ತರಕಾರಿಗಳಲ್ಲಿ ಒಂದಾದ ಹುರಳಿಕಾಯಿ (ಬೀನ್ಸ್) ಕಳೆದ ವಾರ ಕೆ.ಜಿ.ಗೆ 40 ರೂ ಇತ್ತು. ಈ ವಾರ 80 ಕ್ಕೆ ಜಿಗಿದಿದೆ. ಹಸಿರು ಮೆಣಸಿಕಾಯಿ 60-70 ರೂ ಆಗಿದೆ. ಕ್ಯಾರೆಟ್ 40 ರೂ. ಆಗಿದೆ. ಟಮೊಟೊ ಅಂತೂ ದಾಖಲೆಯ ಬೆಲೆ ಅಂದರೆ 50-60 ರೂ. ಆಗಿದೆ. ಉಳಿದಂತೆ ಬೆಂಡೆಕಾಯಿ, ಹೂ ಕೋಸು, ಮೂಲಂಗಿ, ಆಲೂಗಡ್ಡೆ, ಉಳ್ಳಾಗಡ್ಡಿ ಬೆಲೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆ.
ಹುಳಿಯಾರು ಸುತ್ತಮುತ್ತ ಸೊಪ್ಪು ಬೆಳೆಗಾರರು ಹೆಚ್ಚಾಗಿದ್ದ ಕಾರಣ ಕೊತ್ತಂಬರಿ, ಪಾಲಕ್, ಮೆಂತ್ಯೆ, ದಂಟು ಹೀಗೆ ವಿವಿಧ ಸೊಪ್ಪುಗಳು ಕಡಿಮೆ ದರದಲ್ಲಿ ಸಿಗುತ್ತಿತ್ತು. ಆದರೆ ಅಂತರ್ಜಲ ಕುಸಿತವಾಗಿ ಕೊಳವೆಬಾವಿಯಲ್ಲಿ ನೀರು ಬಾರದಾಗಿ ಸೊಪ್ಪು ಬೆಳೆಯುವವರು ಸಹ ಕಡಿಮೆಯಾಗಿದ್ದಾರೆ. ಪರಿಣಾಮ ಸೊಪ್ಪಿನ ಬೆಲೆ ಸಹ ಹೆಚ್ಚಳವಾಗಿದೆ. ಕೆಲವೊಂದು ಸಂದರ್ಭದಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಹತ್ತದಿನೈದು ರೂ.ಗಳಿಗೂ ಹೆಚ್ಚಾದ ನಿದರ್ಶನವಿದೆ.
ತರಕಾರಿ ಬೆಲೆ ಜಾಸ್ತಿಯಾಗಿರುವ ಕಾರಣ ಹಿಂದೆಲ್ಲ ಕೆ.ಜಿಗಟ್ಟಲೇ ಖರೀದಿಸುತ್ತಿದ್ದವರು ಈಗ ಅರ್ಧ, ಕಾಲು ಕೆ.ಜಿ ಸಾಕೆನ್ನುತ್ತಿದ್ದಾರೆ. ಅಲ್ಲದೆ ಬೆಲೆಗಳು ಹೆಚ್ಚಾದ ಪರಿಣಾಮ ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾಂಸಹಾರಿಗಳಂತೂ ಕೆ.ಜಿ.ತರಕಾರಿಗೆ ಕೆ.ಜಿ.ಕೋಳಿ ಬರುತ್ತದೆ ಎಂದು ಗೇಲಿ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರು ಬೀನ್ಸ್, ಮೆಣಸಿನಕಾಯಿ, ಟಮೋಟೋ ಖರೀದಿಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ ಎಂದು ತರಕಾರಿ ವ್ಯಾಪಾರಿ ಖಾಜಾಪೀರ್ ಹೇಳುತ್ತಾರೆ.
ಒಟ್ಟಾರೆ ಬೆಲೆ ಏರಿಕೆಯ ಬಿಸಿ ಮಧ್ಯಮ ಮತ್ತು ಬಡ ವರ್ಗದ ಮೇಲೆ ತಟ್ಟುತ್ತಿದೆ. ಅಲ್ಲದೆ ಹೋಟೆಲ್ ಉದ್ಯಮದ ಮೇಲೂ ತರಕಾರಿ ಏರಿಕೆಯ ಬಿಸಿ ತಟ್ಟಿದೆ. ಈಗ ಮಳೆ ಬಂದು ರೈತರು ತರಕಾರಿ ಬೆಳೆಯಲು ಮುಂದಾದರೂ ಅವು ಮಾರುಕಟ್ಟೆಗೆ ಬರುವುದು ಕನಿಷ್ಟ ಎಂದರೂ ಎರಡ್ಮೂರು ತಿಂಗಳುಗಳು ಬೇಕಾಗುತ್ತದೆ. ಅಲ್ಲಿಯವರೆವಿಗೂ ತರಕಾರಿ ಬೆಲೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಊಹಿಸಲಾಗದಾಗಿದೆ.