ಹಿರಿಯೂರು :
ತಾಲ್ಲೂಕಿನ ಜವನಗೊಂಡನಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆ ಕಸ್ತೂರಿಗೆ ವರ್ಗಾವಣೆಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಹೊಸ ಆದೇಶ ಜೂನ್ 25ರಂದು ಮತ್ತೆ ಕಾಲೇಜಿಗೆ ಬಂದಿದೆ.
ಸ್ಥಳೀಯ ಬಿಜೆಪಿ ಶಾಸಕರು, ಜೆಡಿಎಸ್, ಕಾಂಗ್ರೆಸ್ ಮುಖಂಡರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಹಳ್ಳಿಗಳ ಜನರ ವಿರೋಧವನ್ನು ಲೆಕ್ಕಿಸದೆ ಸರ್ಕಾರ ಈ ಆದೇಶ ನೀಡಿದೆ.
ಪ್ರಸ್ತುತ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯದಲ್ಲಿರುವ ಚಂದ್ರಶೇಖರರಾಜ್ ಅವರನ್ನು ಕೆಸ್ತೂರಿನಲ್ಲಿ ಅನ್ಯ ಕಾರ್ಯ ನಿಮಿತ್ತ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರನ್ನು ಕೆಸ್ತೂರಿಗೆ ಹುದ್ದೆ ಸಮೇತ ಸ್ಥಳಾಂತರಿಸಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ.
ಕಾಲೇಜು ಸ್ಥಳಾಂತರ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ ಸ್ವಾಮಿ ವಿವೇಕಾನಂದ ಹಳೆಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಜೂನ್ 10 ರಂದು ಕಾಲೇಜು ಉಳಿಸಿ ಹೆಸರಿನಲ್ಲಿ ಬೃಹತ್ ಹೋರಾಟ ನಡೆಸಲಾಗಿತ್ತು. ಹಾಗೂ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಧರಣಿಯಲ್ಲಿ ಪಾಲ್ಗೊಂಡು ಕಾಲೇಜು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಕ್ಷೇತ್ರದಲ್ಲಿ ಬಿಜೆಪಿ ಎಂಎಲ್‍ಎ ಎಂದು ತಾರತಮ್ಯ : ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಕಾಲೇಜು ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಆದೇಶ ಹೊರಡಿಸುವ ಮೊದಲು ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಸಿಎಂ.ಅವರನ್ನು ಬುಧವಾರ ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ. ಎಂಬುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಥಳೀಯ ಮುಖಂಡರ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ ಈ ಸ್ಥಳಾಂತರ ಆದೇಶ ಹೊರಡಿಸಿದ್ದು, ಬುಧವಾರದಿಂದ ಪ್ರತಿಭಟನೆ ಜೋರಾಗುವ ಸಾಧ್ಯತೆ ಇದೆ ಎಂಬುದಾಗಿ ವಿದ್ಯಾರ್ಥಿ ಶಂಘಟನೆ ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
