ಬಳ್ಳಾರಿ
ಬಳ್ಳಾರಿ ಜಿಲ್ಲೆಯ 1.10ಲಕ್ಷ ರೈತರ 449 ಕೋಟಿ ರೂ.ಸಾಲವನ್ನು ನಮ್ಮ ಸಮ್ಮಿಶ್ರ ಸರಕಾರ ಇದುವರೆಗೆ ಮನ್ನಾ ಮಾಡಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕಂದಾಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಹಕಾರ ವಲಯದಡಿ 40161 ರೈತರ 230 ಕೋಟಿ ರೂ. ಮತ್ತು ವಾಣಿಜ್ಯ ವಲಯದಡಿ 70068 ಸಾವಿರ ರೈತರ 219 ಕೋಟಿ ರೂ.ಗಳ ಸಾಲ ಸೇರಿದಂತೆ ಇದುವರೆಗೆ 1.10ಲಕ್ಷ ರೈತರ 449 ಕೋಟಿ ರೂ.ಗಳ ಬೆಳೆಸಾಲವನ್ನು ಇದುವರೆಗೆ ಮನ್ನಾ ಮಾಡಲಾಗಿದೆ. ಸಹಕಾರ ವಲಯದ 268 ಕೋಟಿ ರೂ ಮತ್ತು ವಾಣಿಜ್ಯ ಬ್ಯಾಂಕ್‍ಗಳ 213 ಕೋಟಿ ರೂ. ಬಾಕಿ ಸೇರಿದಂತೆ 481 ಕೋಟಿ ರೂ. ಇನ್ನೂ ಬಾಕಿ ಇದ್ದು,ಅದನ್ನು ಕೂಡ ಶೀಘ್ರ ಮನ್ನಾ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇಷ್ಟೆಲ್ಲ ಸಾಲವನ್ನು ನಮ್ಮ ಸರಕಾರ ಮನ್ನಾ ಮಾಡಿದರೂ ಯಾವೊಬ್ಬ ರೈತರು ಕೂಡ ಮನ್ನಾ ಆಗಿದೆ ಅಂತ ಹೇಳುತ್ತಿಲ್ಲ ಎಂಬ ಬೇಸರವನ್ನು ತಮ್ಮ ಮಾತುಗಳಲ್ಲಿ ಹೊರಹಾಕಿದ ಡಿಸೋಜಾ ಅವರು, ಸಾಲಮನ್ನಾ ಪಡೆದ ರೈತರಿಗೆ ಕೂಡಲೇ ಬೇ-ಬಾಕಿ ಪತ್ರ ನೀಡುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಪಿಂಚಣಿಯಲ್ಲಿ ಅಮೂಲಾಗ್ರ ಸುಧಾರಣೆಗೆ ನಾನು ಪ್ರಯತ್ನಹಾಕಿದ್ದೇನೆ. ಬದಲಾವಣೆ ತಂದೇ ತರುತ್ತೇನೆ ಎಂಬ ಅದಮ್ಯ ವಿಶ್ವಾಸವನ್ನು ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ ಡಿಸೋಜಾ ಅವರು, ಬಳ್ಳಾರಿ ಜಿಲ್ಲೆಯಲ್ಲಿ 4ಲಕ್ಷ ಜನರು ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅಡಿ ಪಿಂಚಣಿ ಪಡೆಯುತ್ತಿದ್ದು, ಪಿಂಚಣಿ ಹಣ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಸಂದರ್ಭದಲ್ಲಿ ತೊಂದರೆ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದು, ಆ ರೀತಿ ಸಮಸ್ಯೆಗಳು ಉದ್ಭವಿಸದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಬ್ಯಾಂಕ್ ಮೂಲಕ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವುದಕ್ಕೆ ಕ್ರಮ ಕೈಗೊಳ್ಳಲಾ ಗುವುದು ಎಂದರು.ವಿವಿಧ ರೀತಿಯ ಪಿಂಚಣಿಗೆ ಅರ್ಹ ಇರುವ ಪ್ರತಿಯೊಬ್ಬರಿಗೂ ಪಿಂಚಣಿ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಿಂಚಣಿ ಪಡೆಯಲು ಅಲೆದಾಡುವ ಬದಲು ಗ್ರಾಮಲೆಕ್ಕಾಧಿಕಾರಿಗಳಿಗೆ ಪಿಂಚಣಿದಾರರ ಮನೆಗೆ ತೆರಳಿ ದಾಖಲೆಗಳನ್ನು ಪಡೆದ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದರು.
ಕಂದಾಯ ಮತ್ತು ಪಿಂಚಣಿ ಅದಾಲತ್‍ಗಳನ್ನು ಜಿಲ್ಲೆಯಲ್ಲಿ ನಿರಂತರವಾಗಿ ನಡೆಸಿಕೊಂಡು ಹೋಗಿ ಏನೆ ಸಮಸ್ಯೆಗಳು ಉಂಟಾದರೂ ತಕ್ಷಣ ಸ್ಪಂದಿಸಿ ಎಂದು ಸೂಚನೆ ನೀಡಿದ ಅವರು ಮುಂದಿನ ವರ್ಷದಲ್ಲಿ ಈಗ ಪಿಂಚಣಿದಾರರು ಪಡೆಯುತ್ತಿರುವ ಪಿಂಚಣಿ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸರಕಾರ ಸುಭದ್ರ :ಪ್ರತಿಪಕ್ಷದ ತಂತ್ರ ಫಲಿಸಲ್ಲ:
ನಮ್ಮ ಸರಕಾರ ಸುಭದ್ರವಾಗಿದ್ದು ನಿರಾತಂಕವಾಗಿ ಮುಂದುವರಿಯಲಿದೆ. ಪ್ರತಿಪಕ್ಷಗಳ ಗೇಮ್‍ಪ್ಲಾನ್ ವರ್ಕೌಟ್ ಆಗುವುದಿಲ್ಲ ಮತ್ತು ವರ್ಕೌಟ್ ಆಗುವಷ್ಟು ಮಟೇರಿಯಲ್ ಅವರಲ್ಲಿಲ್ಲ ಎಂದರು.ಜಿಲ್ಲೆಯಲ್ಲಿ ಬರಪರಿಸ್ಥಿತಿ ನಿರ್ವಹಣೆ ಸಮರ್ಪಕವಾಗಿ ಮಾಡಿಕೊಂಡು ಬರಲಾಗುತ್ತಿದೆ. ಬರಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 15 ಕೋಟಿ ರೂ.ಗಳು ಮತ್ತು ಆಯಾ ತಹಸೀಲ್ದಾರರ ಖಾತೆಯಲ್ಲಿ 4.91ಕೋಟಿ ರೂ.ಗಳಿವೆ ಎಂದು ವಿವರಿಸಿದ ಅವರು ಸರಕಾರದ ಕುರಿತು ಅನಗತ್ಯ ಟೀಕೆ ಮಾಡುವ ಪ್ರತಿಪಕ್ಷಗಳ ಚರ್ಚೆಗೆ ನಾವು ರೆಡಿ ಎಂದರು.
ಬರಗಾಲದ ಈ ಸಂದರ್ಭದಲ್ಲಿ ರೈತರಿಗೆ ಯಾವ ರೀತಿಯ ತೊಂದರೆ ಇದೆ, ನಾವು ಬಿಡುಗಡೆ ಮಾಡಿದ ಹಣ ರೈತರಿಗೆ ತಲುಪಿದೆಯಾ ?, ಸಾಲಮನ್ನಾ, ಪೋಡಿಮುಕ್ತ, ಹೊಸ ತಾಲೂಕುಗಳ ರಚನೆ, ಪಿಂಚಣಿ ಸೇರಿದಂತೆ ಅನೇಕ ಅಂಶಗಳ ಕುರಿತು ಪರಿಶೀಲಿಸಿ ಏನಾದರೂ ತೊಂದರೆ ಇದ್ದಲ್ಲಿ ಅದನ್ನು ತಿಳಿದುಕೊಂಡು ಸದನದಲ್ಲಿ ಚರ್ಚಿಸಿ ತಿದ್ದುಪಡಿ ತರುವ ಉದ್ದೇಶದಿಂದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡು ತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
