ಬಳ್ಳಾರಿ:
ಮಹಾತ್ಮಗಾಂಧಿ ಹತ್ಯೆ ಪ್ರಕರಣದಲ್ಲಿ 7ನೇ ಆರೋಪಿಯಾಗಿದ್ದ ಸಾವರ್ಕರ್ಗೆ ದೇಶದಲ್ಲಿ ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಭಾರತ ರತ್ನ ನೀಡದೆ, ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಭಾರತ ರತ್ನ ನೀಡುವುದಾಗಿ ಹೇಳಿರುವ ಉದ್ದೇಶವಾದರೂ ಏನು? ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾವರ್ಕರ್ ಬ್ರಿಟೀಷರ ವಿರುದ್ಧ ಹೋರಾಟ ಮಾಡಿಲ್ಲವೆಂದು ನಾನು ಹೇಳಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಹಲವಾರು ಕ್ರಾಂತಿಕಾರಿ ಪುರುಷರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಾರೆ.
ಅವರಂತೆ ಸಾವರ್ಕರ್ ಸಹ ಹೋರಾಟ ಮಾಡಿ, ಬ್ರಿಟೀಷರ ವಶದಲ್ಲಿದ್ದರು. ಆದರೆ, ಸಾವರ್ಕರ್ ಸ್ಥಾಪಿಸಿದ್ದ ಹಿಂದೂ ಮಹಾಸಭಾದಲ್ಲಿ ನಾಥುರಾಮ್ ಗೋಡ್ಸೆ ಸದಸ್ಯರಾಗಿದ್ದು, ಮಹಾತ್ಮಗಾಂಧಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ 7ನೇ ಆರೋಪಿ ಆಗಿದ್ದರು. ಆದರೆ, ದೇಶದಲ್ಲಿ 1997 ರಿಂದ 2004ರವರೆಗೆ ದಿ. ಅಟಲ್ ಬಿಹಾರಿ ವಾಜಪೇಯಿ, 2014 ರಿಂದ ಇಲ್ಲಿವರೆಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಸಾವರ್ಕರ್ಗೆ ಭಾರತ ರತ್ನ ನೀಡಲು ಏಕೆ ನೆನಪಿಗೆ ಬರಲಿಲ್ಲಾ…? ಎಂದು ಪ್ರಶ್ನಿಸಿದ ಉಗ್ರಪ್ಪ, ಇದೆಲ್ಲ ರಾಜಕೀಯ ಗಿಮಿಕ್. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ ಗಿಟ್ಟಿಸಿಕೊಳ್ಳುವ ತಂತ್ರ. ಈ ಹಿಂದೆಯೂ ಸರ್ದಾರ್ ವಲ್ಲಭಬಾಯಿ ಪಟೇಲ್, ಶಿವಾಜಿ, ಇದೀಗ ಸಾವರ್ಕರ್ ಅವರನ್ನು ಬಿಜೆಪಿಯವರು ಚುನಾವಣೆ ನಿಮಿತ್ತ ಸಾಂದರ್ಭಿಕವಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂದವರು ದೂರಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಂಪಿ ಉತ್ಸವದೊಂದಿಗೆ ಈ ಭಾಗದ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕಳೆದ ವರ್ಷ ಉಪಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಹಂಪಿ ಉತ್ಸವವನ್ನು ಮುಂದೂಡಲಾಗಿತ್ತು. ಆದರೆ, ಸ್ಥಳೀಯ ಕಲಾವಿದರು, ಸ್ವಾಮೀಜಿಗಳು, ಶಾಸಕರ ಒತ್ತಾಯದ ಮೇರೆಗೆ ಕೊನೆಗೆ ಎರಡು ದಿನಗಳ ಕಾಲ ಆಚರಿಸಲಾಯಿತು.
ಆದರೆ, ಪ್ರಸಕ್ತ ವರ್ಷ ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳೇ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಿಸಿದ ಉಗ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವಧಿ ಎಲ್ಲಿದ್ದೀಯಪ್ಪ, ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದ ನಿಮ್ಮ ಸ್ವಾಭಿಮಾನ ಎಲ್ಲಿ ಹೋಯ್ತು. ಸ್ವಾಭಿಮಾನಿ ಡ್ಯಾಶ್ಡ್ಯಾಶ್….. ಎನ್ನುವ ಮೂಲಕ ಸಚಿವ ರಾಮುಲು ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಕಳೆದ ವರ್ಷದಂತೆಯೇ ಈ ಬಾರಿಯೂ ಉತ್ಸವ ಆಚರಣೆಗಾಗಿ ಕಲಾವಿದರು, ಜನಪ್ರತಿನಿಧಿಗಳು ರಸ್ತೆಗಿಳಿಯಲು ಅವಕಾಶ ನೀಡಬಾರದು. ಮೈಸೂರು ದಸರಾ, ಕಿತ್ತೂರು ಉತ್ಸವ ಆಚರಣೆಗೆ ಇಲ್ಲದ ಅಡ್ಡಿ ಹಂಪಿ ಉತ್ಸವ ಆಚರಣೆಗೆ ಏಕೆ? ಹಂಪಿ ಉತ್ಸವ ಆಚರಣೆಗೆ ಹೋರಾಟ ಅನಿವಾರ್ಯವಾದರೆ ಪಕ್ಷಾತೀತವಾಗಿ ಬೀದಿಗಿಳಿದು ಹೋರಾಟ ಮಾಡಲು ನಾವು ಸಿದ್ಧ ಎಂದು ಜಿಲ್ಲಾಡಳಿತ, ಜಿಲ್ಲಾ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಕೇಂದ್ರದ ಕೈಗೊಂಬೆ;
ಭಾರತ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತಾಗಿದೆ. ತ್ರಿಪುರಾದಲ್ಲಿ ನ್ಯಾಯಾಲಯ 6 ವರ್ಷ ಶಿಕ್ಷೆ ವಿಧಿಸಿರುವ ಅನರ್ಹ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ದ್ವಂದ್ವ ನಿಲುವು ಪ್ರದರ್ಶಿಸುತ್ತಿರುವ ಚುನಾವಣಾ ಆಯೋಗ ಕುಂಭಕರ್ಣ ನಿದ್ರೆಯಲ್ಲಿದೆ. ಉತ್ಸವ, ಹಬ್ಬ ಹರಿದಿನಗಳ ಆಚರಣೆಗೆ ನೀತಿ ಸಂಹಿತೆ ಅಡ್ಡಿ ಬರಲ್ಲ. ಹಾಗಾಗಿ ಹಂಪಿ ಉತ್ಸವವನ್ನು ಆಚರಿಸಬೇಕು ಎಂದರು.
ಡಜನ್ ಹೆಚ್ಚು ಆಕಾಂಕ್ಷಿಗಳು;
ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಒಂದು ಡಜನ್ಗೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. 15 ಕ್ಷೇತ್ರಗಳಲ್ಲೂ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ, ನಮ್ಮ ಪಕ್ಷಕ್ಕೆ ದ್ರೋಹ ಮಾಡುವವರು ಇದ್ದಾರೆ. ಪಕ್ಷ ದ್ರೋಹಿಗಳನ್ನು ದೂರವಿಟ್ಟರೆ ರಾಜ್ಯ ಮಾತ್ರವಲ್ಲ. ಬಳ್ಳಾರಿಯಲ್ಲೂ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವತ್ರಿಕ ಚುನಾವಣೆ ಸಾಧ್ಯತೆ;
ರಾಜ್ಯದಲ್ಲಿ ಉಪಚುನಾವಣೆ ಬದಲಿಗೆ ಸಾರ್ವತ್ರಿಕ ಚುನಾವಣೆಗೆ ಹೋಗೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲೇ ಗುಂಪುಗಾರಿಕೆ ಹೆಚ್ಚುತ್ತಿದೆ. ಲಿಂಗಾಯತರನ್ನು ಕಚೇರಿಯಿಂದ ಹೊರ ಹಾಕಲಾಗುತ್ತದೆ. ಬಿಜೆಪಿಯಲ್ಲಿನ ಆಂತರಿಕ ಜಾತಿ ಕಚ್ಚಾಟದ ಕಾರಣದಿಂದ ಪಕ್ಷ ಒಡೆದು ಹೋಗುತ್ತಿದೆ. ಸಿಎಂ ಯಡಿಯೂರಪ್ಪ, ಬಿ.ಎಲ್.ಸಂತೋಷ್, ಸದಾನಂದಗೌಡ, ಈಶ್ವರಪ್ಪನವರ ಗುಂಪುಗಳು ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಕೆಪಿಸಿಸಿ ಕೂಡ್ಲಿಗಿ ಉಮೇಶ್, ಯುವ ಮುಖಂಡರಾದ ಅಸುಂಡಿ ಹೊನ್ನೂರಪ್ಪ, ಅಸುಂಡಿ ನಾಗರಾಜಗೌಡ, ವೆಂಕಟೇಶ್ ಹೆಗಡೆ, ಬಿ.ಮಲ್ಲಿಕಾರ್ಜುನ ಪಾಟೀಲ್, ಪಾಲಿಕೆ ಸದಸ್ಯೆ ಪರ್ವಿನ್ಬಾನು, ಅರವಿಂದ, ಬಾಲು, ನಜೀರ್ಸಾಬ್ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
