ಬೆಂಗಳೂರು
ಮದುವೆಯ ನಂತರ ಮಾಂಸ ದೂಟದ ಪಾರ್ಟಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಆತನ ಪೋಷಕರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ನವ ವಿವಾಹಿತ ಪತ್ನಿ ತವರು ಮನೆ ಸೇರಿ ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಮಮೂರ್ತಿ ನಗರದ ಜಯಂತಿ ನಗರದ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಪತಿಯೊಬ್ಬ ಮದುವೆಯ ನಂತರ ಪತ್ನಿಯ ತಂದೆ-ತಾಯಿ ಮಾಂಸ ದೂಟ ಮಾಡಿ ಬಡಿಸಿಲ್ಲ ಎಂದು ಪತ್ನಿಗೆ ಕ್ಷುಲ್ಲಕ ಕಾರಣಕ್ಕಾಗಿ ಹಿಂಸಿಸುತ್ತಿದ್ದು ಇದನ್ನು ತಡೆಯಲಾರದೇ ಪತ್ನಿ ದೂರು ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಾಂಸ ದೂಟದ ನೆಪವೊಡ್ಡಿ ಆಕೆಯ ಪತಿ ಹಾಗೂ ಆತನ ಪೋಷಕರು ಮನಬಂದಂತೆ ಆಕೆಯನ್ನು ಹಿಂಸಿಸಿದ್ದಾ ರಲ್ಲದೇ, ಆಕೆಯ ತಿಂಗಳ ಸಂಬಳವನ್ನೂ ನೀಡುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಪತಿಯ ತಂದೆ ಜ್ಯೋತಿಷಿಯಾಗಿದ್ದು, ಎಲ್ಲಾ ತೊಂದೆರೆಗಳಿಗೂ ಈಕೆಯೇ ಕಾರಣ ಎಂದು ಅನಗತ್ಯವಾಗಿ ಆಕೆಯ ಮೇಲೆ ಆರೋಪಮಾಡಿ ನಿಂದಿಸುತ್ತಿದ್ದರು.
ಇದರಿಂದ ಬೇಸತ್ತ ಮಹಿಳೆ ಗಂಡನ ಮನೆತೊರೆದು ತನ್ನ ತವರು ಮನೆ ಸೇರಿದ್ದಾಳೆ. ಈ ಕುರಿತು ಆಕೆ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದ್ದಾಳೆ.ಸಂತ್ರಸ್ತ ಮಹಿಳೆ 2018ರಲ್ಲಿ ವಿವಾಹವಾಗಿದ್ದು, ಅಂದಿನಿಂದ ಇಲ್ಲಿಯವರೆಗೂ ಆಕೆಗೆ ಇದೇ ನೆಪವೊಡ್ಡಿ ನಿರಂತರವಾಗಿ ಕಿರುಕುಳನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಅಲ್ಲದೇ ಖಾಲಿ ಪೇಪರ್ ನೀಡಿ ಅದರಲ್ಲಿ ತನಗೆ ಪತಿಯ ಜತೆ ಇರಲು ಇಷ್ಟವಿಲ್ಲವೆಂದು ಹಾಗೂ ಆತನಿಗೆ ಬೇರೆ ಹುಡುಗಿಯೊಂದಿಗೆ ವಿವಾಹ ಮಾಡಲು ತನಗೆ ಒಪ್ಪಿಗೆಯಿದೆ ಎಂದು ಬರೆದುಕೊಡುವಂತೆ ಒತ್ತಾಯಿಸುತ್ತಿರುವುದಾಗಿ ಮಹಿಳೆ ಉಲ್ಲೇಖಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಹಿನ್ನಲೆಯಲ್ಲಿ ರಾಮಮೂರ್ತಿನಗರ ಪೊಲೀಸರು ಆಕೆಯ ಪತಿ ಹಾಗೂ ಆತನ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 498 ಎ ಹಾಗೂ 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








