ಬೆಂಗಳೂರು
ಅಧಿಕಾರದಲ್ಲಿದ್ದಾಗ ವಿಧಾನಸೌಧಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ,ಸಹೋದರನ ಜತೆಗೂಡಿ ವಾಮಾಚಾರ ಮಾಡಿಸುವುದರಲ್ಲಿ ತಲ್ಲೀನರಾಗಿದ್ದ ಕುಮಾರಸ್ವಾಮಿ ಈಗ ಜನನಾಯಕ ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವ ನೈತಿಕ ಹಕ್ಕು ಹೊಂದಿಲ್ಲ ಎಂದು ಬಿಜೆಪಿ ನಾಯಕ,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಆಡಳಿತ ಪಕ್ಷದ ಶಾಸಕಾಂಗ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿಧಾನಸೌಧಕ್ಕೆ ಸೀಮಿತರಾಗಿದ್ದರು.ಆಗಾಗ ಮೈಸೂರಿಗೆ ಹೋಗುತ್ತಿದ್ದರು.ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರೇ ಅವರನ್ನು ತಿರಸ್ಕರಿಸಿದರು ಎಂದರು.
ಇವರೀಗ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ.ಎಲ್ಲಿದೆ ಸಚಿವ ಸಂಪುಟ ಎಂದು ಕೂಗುತ್ತಾರೆ.ಹಲ ಕಾರಣಗಳಿಂದ ಸಚಿವ ಸಂಪುಟ ವಿಸ್ತರಣೆ ತಡವಾಗಿರಬಹುದು.ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಯಾವ ಹಿನ್ನಡೆಯೂ ಆಗಿಲ್ಲ.
ಯಡಿಯೂರಪ್ಪ ಅವರೇನೂ ದಿಲ್ಲಿಗೆ ಹೋಗಿ ಸುಮ್ಮನೆ ಕೂತಿರಲಿಲ್ಲ.ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.ವಿವಿಧ ಇಲಾಖೆಗಳ ಮಂತ್ರಿಗಳನ್ನು ಭೇಟಿಯಾಗಿ ರಾಜ್ಯಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.
ಇದರ ಮಧ್ಯೆ ಪ್ರವಾಹಪೀಡಿತ ಜನರ ಸಂಕಷ್ಟಗಳನ್ನು ಖುದ್ದಾಗಿ ಹೋಗಿ ಆಲಿಸಿದ್ದಾರೆ.ಅವರ ಸಮಸ್ಯೆಯ ಪರಿಹಾರಕ್ಕೆ ಅಗತ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ.ಹೀಗಿರುವಾಗ ಸಿದ್ಧರಾಮಯ್ಯ,ಕುಮಾರಸ್ವಾಮಿ,ದಿನೇಶ್ ಗುಂಡೂರಾವ್ ಅವರಂತಹ ನಾಯಕರಿಗೆ ಮಾತನಾಡಲು ಯಾವ ಹಕ್ಕೂ ಇಲ್ಲ ಎಂದರು.
ಇವತ್ತು ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ಧರಾಮಯ್ಯ ಅವರಿಗೆ ತಮ್ಮ ಕ್ಷೇತ್ರವೂ ಪ್ರವಾಹಪೀಡಿತವಾಗಿದೆ ಎಂಬುದು ಗೊತ್ತಿಲ್ಲವೇ?ಅವರು ಕೂಡಾ ಕಾಂಗ್ರೆಸ್ ನಾಯಕರಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬಹುದಿತ್ತಲ್ಲ?ಎಂದು ಪ್ರಶ್ನಿಸಿದರು.
ಅವರು ಅಧಿಕೃತವಾಗಿ ಪ್ರತಿಪಕ್ಷದ ನಾಯಕರಲ್ಲದಿದ್ದರೂ ಕಾಂಗ್ರೆಸ್ ಶಾಸಕಾಂಗ ನಾಯಕ.ಹೀಗಾಗಿ ಅವರಿಗೂ ಜವಾಬ್ದಾರಿ ಇದೆ.ತಾವು ಅಧಿಕಾರದಲ್ಲಿದ್ದಾಗ ವಿಧಾನಸೌಧದಲ್ಲಿರಬೇಕು.ಯಡಿಯೂರಪ್ಪ ಅವರು ಮಾತ್ರ ಜನರ ಕೆಲಸ ಮಾಡಬೇಕು ಎಂದು ಇವರು ಬಯಸುತ್ತಾರೆ.
ಆದರೆ ಇವರೇನೇ ಮಾಡಿದರೂ ಯಡಿಯೂರಪ್ಪ ಜನ ನಾಯಕ.ಈ ನೆಲದ ಹಳ್ಳಿ ಹಳ್ಳಿಗಳಿಗೆ ಅವರು ಪರಿಚಿತರು ಎಂದ ರೇಣುಕಾಚಾರ್ಯ,ಅವರು ಸಿದ್ಧರಾಮಯ್ಯ ಅವರಂತೆ ವಿಧಾನಸೌಧಕ್ಕೆ ಅಂಟಿಕೊಂಡ ನಾಯಕರಲ್ಲ ಎಂದರು.ಇನ್ನು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಟೆಂಪಲ್ ರನ್ ಮಾಡುತ್ತಿದ್ದುದು ಜನರಿಗಾಗಿ ಅಲ್ಲ.ಅವರು ಮತ್ತು ಅವರ ಸಹೋದರ ವಾಮಾಚಾರ ಮಾಡಿಸಲು ಟೆಂಪಲ್ ರನ್ ಮಾಡುತ್ತಿದ್ದರು ಎಂದು ಆರೋಪಿಸಿದರು.
ಲೋಕೋಪಯೋಗಿ ಸಚಿವರಾಗಿದ್ದ ಇವರ ಸಹೋದರ ಯಾವ ಮಟ್ಟದಲ್ಲಿ ವಾಮಾಚಾರ ಮಾಡಿಸುತ್ತಿದ್ದರು ಎಂಬುದು ಮಾಧ್ಯಮಗಳಲ್ಲೇ ವರ್ಣರಂಜಿತವಾಗಿ ಪ್ರಕಟವಾಗಿದೆ.ತಮ್ಮ ಹಿತಕ್ಕಾಗಿ ಕಂಡವರ ಮೇಲೆ ವಾಮಾಚಾರ ಮಾಡಿಸುತ್ತಿದ್ದವರು ಈಗ ಜನರ ಯೋಗಕ್ಷೇಮದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








