ಕೊನೆಗೂ ಜಿ.ಪಂ.`ಅಧಿಕಾರ ಭಾಗ್ಯ’ರಗಳೆ ಅಂತ್ಯ

ಚಿತ್ರದುರ್ಗ

           ಜಿಲ್ಲಾ ಪಂಚಾಯಿತಿಯ ಅಧಿಕಾರಕ್ಕಾಗಿ ಕಳೆದ ಹಲವು ತಿಂಗಳಿಂದ ನಡೆಯುತ್ತಿದ್ದ ನಾನಾ ನಮೂನೆಯ ನಾಟಕೀಯ ಬೆಳವಣಿಗೆ ಮತ್ತು ರಗಳೆಗಳಿಗೆ ಗುರುವಾರ ಕೊನೆಗೂ ತೆರೆ ಬಿದ್ದಿದೆ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ದ ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿದ್ದು, ಕೇಲವ ಒರ್ವ ಸದಸ್ಯನ ಬೆಂಬಲ ಪಡೆದು ಅಧ್ಯಕ್ಷರು ಬಾರೀ ಮುಖಭಂಗ ಅನುಭವಿಸಿ ಅಧಿಕಾರದಿಂದ ನಿರ್ಗಮಿಸಿದ್ದಾರೆ.

         ಅಧ್ಯಕ್ಷರ ಕಾರ್ಯವೈಖರಿಯಿಂದ ಬೆಸೆತ್ತ ಸದಸ್ಯರು ಅವರ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೋರಿ ಡಿಸೆಂಬರ್ 26ರಂದು ಮನವಿ ಸಲ್ಲಿಸಿದ್ದರು. ಈ ಮನವಿ ಪತ್ರಕ್ಕೆ ಒಟ್ಟು 31 ಮಂದಿ ಸದಸ್ಯರು ಸಹಿ ಹಾಕಿದ್ದರು.ಅಧ್ಯಕ್ಷರು ವಿಶೇಷ ಸಭೆಯನ್ನು ಕರೆಯದಿದ್ದಾಗ ಮತ್ತೆ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಿಗೂ ಸದಸ್ಯರು ಮನವಿ ಸಲ್ಲಿಸಿದ್ದರು. ಹೀಗಾಗಿ ಗುರುವಾರ ವಿಶೇಷ ಸಭೆಯನ್ನು ನಿಗಧಿ ಮಾಡಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಿದ್ದು, ಒಟ್ಟು 25 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಅಧ್ಯಕ್ಷರು ಅಧಿಕಾರ ಕಳೆದುಕೊಂಡರು.

       ಒಟ್ಟು 37 ಜನ ಸದಸ್ಯರನ್ನು ಹೊಂದಿರುವ ಜಿಲ್ಲಾ ಪಂಚಾಯತ್ ನಲ್ಲಿ 21 ಮಂದಿ ಕಾಂಗ್ರೆಸ್, 2 ಮಂದಿ ಬಿಜೆಪಿ ಹಾಗೂ 2 ಜೆಡಿಎಸ್ ಸದಸ್ಯರು ಸೇರಿ 25 ಜನ ಸದಸ್ಯರು ಕೈ ಎತ್ತುವ ಮೂಲಕ ಹಾಲಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ದ ಅವಿಶ್ವಾಸ ಮಂಡನೆ ಮಾಡಿದರು.

        ಅಧ್ಯಕ್ಷರ ಪರವಾಗಿ ಕೇವಲ ಒಬ್ಬರು ಮಾತ್ರ ಬೆಂಬಲಕ್ಕೆ ನಿಂತರು. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲೇಬೇಕು ಎನ್ನುವ ಹಠಕ್ಕೆ ಬಿದ್ದ ಅಧ್ಯಕ್ಷರು ಬಿಜೆಪಿಯ ಹಿರಿಯ ಮುಖಂಡ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನೂ ಬೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು. ಅತ್ತ ಶ್ರೀರಾಮುಲು ಸೇರಿದಂತೆ ಬಿಜೆಪಿಯ ರಾಜ್ಯ ನಾಯಕರನ್ನೂ ಬೇಟಿ ಮಾಡಿದ್ದರೆನ್ನಲಾಗಿದೆ. ಅವರ ಯಾವ ಪ್ರಯತ್ನವೂ ಫಲ ಕೊಡದ ಕಾರಣ ಅಧಿಕಾರದಿಂದ ನಿರ್ಗಮಿಸಬೇಕಾಯಿತು.

       ಜಿಲ್ಲಾ ಪಂಚಾಯಿತಿ ಅಸ್ಥಿತ್ವಕ್ಕೆ ಬಂದಾಗ ಒಡಂಬಡಿಕೆಯ ಪ್ರಕಾರ ಮೊದಲು 15 ತಿಂಗಳ ಅವಧಿಗೆ ಸೌಭಾಗ್ಯ ಬಸವರಾಜನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ವರಿಷ್ಟರು ತೀರ್ಮಾನ ಕೈಗೊಂಡಿದ್ದರು. ಅವರ ಅವಧಿ ಮುಕ್ತಾಯವಾದ ಬಳಿಕ ಅಧಿಕಾರ ತ್ಯಜಿಸಲು ನಿರಾಕರಿಸಿ ಮುಂದುವರೆದಿದ್ದರು. ಪಕ್ಷದ ಹಿರಿಯ ನಾಯಕರ ಮಾತಿಗೂ ಮನ್ನಣೆ ಕೊಡದಿದ್ದರಿಂದ ಅವರನ್ನು ಕಾಂಗ್ರೆಸ್‍ನಿಂದ ಉಚ್ಚಾಟಿಸಲಾಗಿತ್ತು.

     ಹೀಗಾಗಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ರಾಜಕೀಯ ವೈರತ್ವ ದಿನದಿಂದ ದಿನಕ್ಕೆ ಇನ್ನಷ್ಟು ಬೆಳೆಯುತ್ತಲೇ ಇತ್ತು. ಅಧ್ಯಕ್ಷರು ಕರೆದ ಪ್ರತಿ ಸಭೆಗೂ ಗೈರು ಹಾಜರಾಗುವ ಮೂಲಕ ಮುಖಭಂಗ ಅನುಭವಿಸುವಂತೆ ಮಾಡಿದ್ದರು. ಅವಿಶ್ವಾಸ ಗೊತ್ತುವಳಿ ಸಭೆಗೆ ಮನವಿ ಸಲ್ಲಿಸಿದ ಬಳಿಕ ಸದಸ್ಯರಲ್ಲಿ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು
ಗುರುವಾರ ಸಭೆ ಆರಂಭಕ್ಕೆ ಅರ್ಧಗಂಟೆ ಮುಂಚಿತವಾಗಿ ಎಲ್ಲಾ 25 ಮಂದಿ ಸದಸ್ಯರು ಸಭಾಂಗಣ ಪ್ರವೇಶ ಮಾಡಿದರು. ಅದೇ ಹೊತ್ತಿಗೆ ಸೌಭಾಗ್ಯ ಬಸವರಾಜನ್ ಅವರೂ ಆಗಮಿಸಿದರು. ಬಿಜೆಪಿ ಸದಸ್ಯರ ಬೆಂಬಲದ ನಿರೀಕ್ಷೆಯಲ್ಲಿದ್ದ ಅಧ್ಯಕ್ಷರಿಗೆ ಕೊನೆಗೆ ನಿರಾಸೆ ಕಾದಿತ್ತು. ಕೇವಲ ಒಬ್ಬರು ಸದಸ್ಯರು ಮಾತ್ರ ಅವರ ಬೆಂಬಲಕ್ಕೆ ನಿಂತರು.ಸಭೆಯಲ್ಲಿ ಅವಿಶ್ವಾಸದ ನಿರ್ಣಯಕ್ಕೆ ಗೆಲುವು ಸಿಕ್ಕ ತಕ್ಷಣವೇ ಸೌಭಾಗ್ಯ ಬಸವರಾಜನ್ ಏಕಾಂಗಿಯಾಗಿ ನಿರ್ಗಮಿಸಿದರು.

     ಅವಿಶ್ವಾಸ ಮಂಡನೆಗೆ ಬಿಜೆಪಿಯ ಗುರುಮೂರ್ತಿ,ಗೌರಮ್ಮ, ಜೆಡಿಎಸ್‍ನ ತಿಪ್ಪಮ್ಮ, ಮುತ್ತುರಾಜ್, ಕಾಂಗ್ರಸ್‍ನ ಪ್ರಕಾಶಮೂರ್ತಿ, ಅನಂತ್, ನರಸಿಂಹರಾಜು, ನಾಗೇಂದ್ರ ನಾಯ್ಕ, ಪಾಪಣ್ಣ, ಚಂದ್ರಿಕಾ ಶ್ರೀನಿವಾಸ್, ಸವಿತಾ ರಘು, ಚೇತನಾ ಪ್ರಸಾದ್, ಮಮತಾ ಕುಮಾರಸ್ವಾಮಿ, ಶಶಿಕಲಾ ಸದಾಶಿವ ವಿಜಯಲಕ್ಷ್ಮಿ, ಗೀತಾ ನಾಗಕುಮಾರ್, ವಿಶಾಲಾಕ್ಷಿ ನಟರಾಜ್, ಸುಶಿಲಮ್ಮ, ಮುಂಡರಗಿ ನಾಗರಾಜ್, ಯೋಗೀಶ್ ಬಾಬು, ತಿಪ್ಪೇಸ್ವಾಮಿ, ಕೌಶಲ್ಯ, ಕೃಷ್ಣಮೂರ್ತಿ ಹಾಗೂ ಸುಧಾರವಿಕುಮಾರ್ ಇವರುಗಳು ಕೈ ಎತ್ತುವ ಮೂಲಕ ಅವಿಶ್ವಾಸ ಮಂಡನೆ ಮಾಡಿದರು.ಅವಿಶ್ವಾಸದ ವಿರುದ್ದವಾಗಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್ ಮತ್ತು ಬಿಜೆಪಿಯ ಅಜ್ಜಪ್ಪ ಮತ ಚಲಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap