ಚಿತ್ರದುರ್ಗ:
ಶಿಕ್ಷಣದ ಜೊತೆ ಸಂಪನ್ಮೂಲಗಳನ್ನು ಬಳಸಿಕೊಂಡಾಗ ಜೀವನಕ್ಕೆ ದಾರಿ ಕಂಡುಕೊಳ್ಳಬಹುದು ಎಂದು ರಂಗ ಕಲಾವಿದ ಗಣೇಶಯ್ಯ ಹೇಳಿದರು.
ನೆಹರು ಯುವ ಕೇಂದ್ರ ಚಿತ್ರದುರ್ಗ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ರಂಗ ಭಂಡಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಬಿ.ಸಿ.ಎಂ.ಹಾಸ್ಟೆಲ್‍ನಲ್ಲಿ ಗುರುವಾರ ನಡೆದ ಮೆಹಂದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನಸ್ಸಿನ ಭಾವನೆಗಳನ್ನು ಕೈಮೇಲೆ ಚಿತ್ರಿಸಿ ಖುಷಿ ಪಡಿಸುವುದು ಮೆಹಂದಿಯ ವಿಶೇಷ. ಅಂತರಂಗದ ಹೊಳಪನ್ನು ಮೆಹಂದಿ ಮೂಲಕ ಕಾಣಬಹುದು. ಮೆಹಂದಿ ಆರೋಗ್ಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆ ತ ಂಪು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಹಾವಳಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನೆಲ್ಲಾ ಹೊರದೇಶದವರು ಬಳಸಿಕೊಳ್ಳುವಂತಾಗಿದೆ. ಸಾಂಸ್ಕತಿಕ ಸಂಪತ್ತನ್ನು ಕ್ರೂಢೀಕರಿಸಿ ಜಾನಪದ ಕಲೆಗಳನ್ನು ಉಳಿಸುವ ಹೊಣೆಗಾರಿಕೆ ಯುವ ಜನಾಂಗದ ಮೇಲಿದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.[
ಎಸ್.ಜೆ.ಎಂ.ಶಾಲೆಯ ಪ್ರಾಂಶುಪಾಲರಾದ ಪರಂಜ್ಯೋತಿ ಮಾತನಾಡುತ್ತ ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ವಿವಿಧ ತರಬೇತಿಯನ್ನು ಬಳಸಿಕೊಂಡು ನೀವು ಕಲಿಯುವ ವಿದ್ಯೆಯನ್ನು ಬೇರೆಯವರಿಗೆ ಹಂಚಿದರೆ ಜ್ಞಾನ ಹೆಚ್ಚಾಗುತ್ತದೆ. ಶಿಕ್ಷಣದ ಜೊತೆ ಕಸೂತಿ, ಕರಕುಶಲತೆ, ಕಂಪ್ಯೂಟರ್ ಕಲಿತರೆ ಒಂದಲ್ಲ ಒಂದು ದಿನ ನಿಮಗೆ ಫಲ ಸಿಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕ ಕೆ.ಎಸ್.ವಿಷ್ಣು ಮಾತನಾಡುತ್ತ ನೆಹರು ಯುವ ಕೇಂದ್ರದಿಂದ ಯುವಕ/ಯುವತಿಯರಿಗಾಗಿ ಅನೇಕ ತರಬೇತಿ ಕಾರ್ಯಕ್ರಮಗಳನ್ನು ನೀಡಲಾಗುವುದು. ಮೆಹಂದಿಗೆ ಎಲ್ಲಾ ಶುಭ ಕಾರ್ಯಗಳಲ್ಲಿ ಅತ್ಯಂತ ಪ್ರಾಮುಖ್ಯತೆಯಿದೆ.
ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಿ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕತ ಶ್ರೀನಿವಾಸ್ ಮಳಲಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು.
ರಂಗನಿರ್ದೇಶಕ ಧೀಮಂತ್, ಬಿ.ಸಿ.ಎಂ.ಹಾಸ್ಟೆಲ್ ವಾರ್ಡ್‍ನ್ ಜಾಹಿದಾ, ರಂಗ ಭಂಡಾರ ಕಲಾಸಂಘದ ಬಿ.ನಿರ್ಮಲ, ಕೌನ್‍ನಯೀನ್ ತಾಜ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
