ಹಗರಿಬೊಮ್ಮನಹಳ್ಳಿ:
ಏಪ್ರೀಲ್ 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಭಯವಿಲ್ಲದೇ ಎಲ್ಲರೂ ಮತದಾನ ಮಾಡಲು ಮುಂದಾಗಿ ಎಂದು ಎಂಸಿಸಿ ನೋಡಲ್ ಅಧಿಕಾರಿ ತಾ.ಪಂ. ಇ.ಓ. ಮಲ್ಲಾ ನಾಯ್ಕ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಇಂದಿರಾಗಾಂಧಿ ಮಹಿಳಾ ಮಹಾವಿದ್ಯಾಲಯ ಹಾಗೂ ಬಾಲಕೀಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಮ್ಮಿಕೊಂಡಿದ್ದ, ಮತದಾನ ಜನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಯಾವುದೇ ಮೂಲೆಯಲ್ಲಿದ್ದರೂ ಚುನಾವಣೆಯ ದಿನದಂದು ಮತದಾನ ಕೇಂದ್ರಗಳಿಗೆ ತೆರಳಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವುದರ ಮೂಲಕ ದೇಶಕ್ಕೆ ಸಧೃಡ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವ ಪರಮಾಧಿಕಾರ ನಿಮ್ಮದಾಗಿದೆ ಎಂದರು.
ವಿಶೇಷ ನೋಡಲ್ ಅಧಿಕಾರಿ ರಾಜಪ್ಪ ಮಾತನಾಡಿ, ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯಿಂದಲೂ ತಾಲೂಕು ಆಡಳಿತ ಸಜ್ಜಾಗಿ ನಿಂತಿದೆ ಆದ್ದರಿಂದ ಎಲ್ಲರೂ ಮರೆಯದೇ ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಇಂದಿರಾಗಾಂಧಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸರೋಜಿನಿ ಪ್ರಕಾಶ್ ಮಾತನಾಡಿ, ಮತದಾನ ಎಂಬುದು ಎಲ್ಲರ ಹಕ್ಕು ಆಗಿದ್ದು ಯಾರೂ ಇದನ್ನು ನಿರ್ಲಕ್ಷಿಸಬಾರದು, ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ತುಂಬಾ ಪವರ್‍ಫುಲ್ ಅಧಿಕಾರವಾಗಿದ್ದು ಇದನ್ನು ಹೆಮ್ಮೆಯಿಂದ ಚಲಾಯಿಸುವುದರ ಮೂಲಕ ದೇಶಕ್ಕೊಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಬಾಪೂಜಿ ಮಾತನಾಡಿ ನಮ್ಮ ಅಮೂಲ್ಯ ಮತಕ್ಕೆ ಯಾರಿಂದಲೂ ಬೆಲೆಕಟ್ಟಲು ಸಾಧ್ಯವಿಲ್ಲ ಯಾವುದೇ ಕ್ಷಣಿಕ ಆಸೆ ಆಮಿಷಗಳಿಗೆ ಮತವನ್ನು ಮಾರಾಟ ಮಾಡಿಕೊಳ್ಳದೆ ನೈತಿಕವಾಗಿ ಚಲಾಯಿಸೋಣ ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ಸಂಸ್ಥೆಯ ಸಂಸ್ಥಾಪಕ ಕೆ.ಪ್ರಕಾಶ್ ಮಾತನಾಡಿದರು. ಉಪನ್ಯಾಸಕರಾದ ಪುಂಡಲೀಕ, ನಿಂಗಪ್ಪ, ರಮೇಶ, ಕಾಶಿನಾಥ, ಪಕ್ಕೀರೇಶ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ತಾಲೂಕು ಅಧಿಕಾರಿಗಳು ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.