ತುಮಕೂರು
ಮುಂಬರುವ ಜೂನ್ 5ರ ವಿಶ್ವ ಪರಿಸರ ದಿನದಂದು ತುಮಕೂರು ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ನೆಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸ್ಥಾಪಿಸುವ ಸಂಬಂಧ ಸಾರ್ವಜನಿಕರೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ರೂಪಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ “ಕೋಟಿ ನಾಟಿ” ಹಸಿರೀಕರಣದ ಜನಾಂದೋಲನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕೋಟಿ ಸಸಿಗಳನ್ನು ತುಮಕೂರು ಜಿಲ್ಲೆಯಲ್ಲಿ ನೆಡಬೇಕು. ರೋಟರಿ ಸಂಸ್ಥೆ ತುಮಕೂರು ತಾಲ್ಲೂಕಿನಲ್ಲಿ 1 ಕೋಟಿ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲ್ಲೂಕಿನಲ್ಲಿ 10 ಲಕ್ಷ ಸಸಿಗಳಂತೆ ಜಿಲ್ಲೆಯಲ್ಲಿ 1 ಕೋಟಿ ಸಸಿ ನೆಡಲು ಮುಂದಾಗಬೇಕು.
ಇದಕ್ಕಾಗಿ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಮುಂಬರುವ ಜೂನ್ 5 ರಂದು ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ನೆಟ್ಟು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನ್ನು ಸ್ಥಾಪನೆ ಮಾಡಬೇಕು. ಇದಕ್ಕಾಗಿ ಸಾರ್ವಜನಿಕರ ಸಹಕಾರವು ಅತಿ ಮುಖ್ಯ, ಇದಕ್ಕಾಗಿ ಚರ್ಚಿಸಿ ಕಾರ್ಯಕ್ರಮ ರೂಪಿಸಿ ಎಂದರು.
ತುಮಕೂರು ಜಿಲ್ಲೆ ಕಲ್ಪತರು ನಾಡು ಎಂದು ಪ್ರಸಿದ್ಧಿಯಾಗಿದ್ದು, ಆದರೆ ಜಿಲ್ಲೆಯು ಬರಪೀಡಿತ ನಾಡಾಗಿದೆ. ಇದನ್ನು ಹಸಿರು ತುಮಕೂರು ಮಾಡಲು ಎಲ್ಲರೂ ಕೈಜೋಡಿಸಬೇಕು. ನರೇಗಾ ಮತ್ತು ಜಲಾಮೃತ ಯೋಜನೆಯಡಿ ಗಿಡಗಳನ್ನು ನೆಡಲು ಅವಕಾಶವಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸ್ವಸಹಾಯ ಸಂಸ್ಥೆಗಳು, ಸಂಘ ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಸಮುದಾಯದ ಎಲ್ಲಾ ಜನರ ಸಹಕಾರ ಅತಿ ಮುಖ್ಯ ಎಂದು ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ರೋಟರಿ “ಕೋಟಿ-ನಾಟಿ” ಅಧ್ಯಕ್ಷರಾದ ಅಮರ ನಾರಾಯಣ ಐಎಎಸ್(ನಿ) ಅವರು ಪೊಲಿಯೋವನ್ನು ಮುಕ್ತಗೊಳಿಸಿದಂತೆ ಭೂ ಮಾತೆಗೆ ಅಂಟಿಕೊಂಡಿರುವ ಮಾಲಿನ್ಯವನ್ನು ಗಿಡ-ಸಸಿಗಳನ್ನು ನೆಡುವ ಮೂಲಕ ಹೋಗಲಾಡಿಸಬೇಕು. ತುಮಕೂರು ಜಿಲ್ಲೆಯಲ್ಲಿ ಶೇ.6.58ರಷ್ಟು ಅರಣ್ಯ ಪ್ರದೇಶ ಮಾತ್ರವಿದೆ. ತುಮಕೂರು ಜಿಲ್ಲೆಯ 10 ತಾಲ್ಲೂಕುಗಳು ವೈವಿದ್ಯಮಯದಿಂದ ಕೂಡಿವೆ. ಒಂದೆಡೆ ಶಿರಾ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಮರಗಳ ಸಂಖ್ಯೆ ಕಡಿಮೆ ಇದೆ ಎಂದು ಅವರು ತಿಳಿಸಿದರು.
ಜಿಲ್ಲೆಯು 10,64,755 ಹೆಕ್ಟೇರ್ ಭೌಗೋಳಿಕ ಪ್ರದೇಶವನ್ನು ಹೊಂದಿದು, 67,539 ಹೆಕ್ಟೇರ್ ಬಂಜರುಭೂಮಿ ಹಾಗೂ 2,35,101 ಹೆಕ್ಟೇರ್ ಬೀಳುಭೂಮಿಯನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಹಸಿರುಮಯವನ್ನಾಗಿ ಮಾಡಬೇಕು. ಪ್ರತಿ ಮನುಷ್ಯ 28 ಮರಗಳನ್ನು ಹಾಕಬೇಕು. ಜಿಲ್ಲೆಯು 26ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿಯೊಬ್ಬರು 28 ಸಸಿಗಳನ್ನು ಹಾಕಿದರೆ ಒಟ್ಟು 7.50 ಕೋಟಿ ಸಸಿಗಳನ್ನು ನೆಡಬಹುದಾಗಿದೆ ಎಂದು ಅವರು ತಿಳಿಸಿದರು.
ರಸ್ತೆ, ಕೆರೆದಂಡೆ, ವಸತಿ ಪ್ರದೇಶಗಳಲ್ಲಿ ಸಸಿ ನೆಡಲು ಅವಕಾಶವಿದ್ದು, ಈ ಬಗ್ಗೆ ಪಿಡಿಓಗಳು ಕ್ರಮಕೈಗೊಳ್ಳಬೇಕು. ಪ್ರಾರಂಭದಲ್ಲಿ ತುಮಕೂರು ತಾಲ್ಲೂಕಿನಲ್ಲಿ ಸಸಿ ನೆಡುವ ಕಾರ್ಯಕ್ರಮವಿದ್ದು, 28.34ಲಕ್ಷ ಗುಂಡಿಗಳನ್ನು ತೆಗೆಸಿ ಸಿದ್ಧವಾಗಿ ಇಟ್ಟುಕೊಳ್ಳುವಂತೆ ಪಿಡಿಓಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಶುಭಾಕಲ್ಯಾಣ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಶೋಭಾರಾಣಿ, ರೋಟರಿ ಕೋಟಿ ನಾಟಿ ಯೋಜನೆಯ ಸಹ ಅಧ್ಯಕ್ಷ ನೀಲ್ ಮೈಕಲ್ ಜೋಸೆಫ್, ಕೆ.ಪಿ. ನಾಗೇಶ್, ಆಶಾ ಪ್ರಸನ್ನಕುಮಾರ್, ರೋಟರಿ ರವಿಶಂಕರ್ ಸೇರಿದಂತೆ ತಾಲ್ಲೂಕು ಪಂಚಾಯತ್ ಇಓ, ಪಿಡಿಓಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ “ಕೋಟಿನಾಟಿ” ಹಸಿರೀಕರಣದ ಒಡಂಬಡಿಕೆಗೆ ಸಹಿ ಮಾಡಲಾಯಿತು.