ದಾವಣಗೆರೆ:
ತಾಲೂಕಿನ 21 ಗ್ರಾಮಗಳಲ್ಲಿ ಸ್ಮಶಾನ ಇಲ್ಲದೇ, ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ತಹಸೀಲ್ದಾರ್ ಸಂತೋಷ ಕುಮಾರ ತಿಳಿಸಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 21 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಸರ್ಕಾರಿ ಭೂಮಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಖಾಸಗಿಯವರು ಜಮೀನು ಮಾರಾಟಕ್ಕೆ ಮುಂದೆ ಬರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ತಾ.ಪಂ. ಸದಸ್ಯ ಸಂಗಜ್ಜನಗೌಡ ಮಾತನಾಡಿ, ತಾಲೂಕಿನಲ್ಲಿರುವ ಸ್ಮಶಾನದ ಭೂಮಿಗೆ ಹದ್ದುಬಸ್ತು ಮಾಡಬೇಕು. ಸ್ಮಶಾನ ಇಲ್ಲದಿರುವ ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ತಾಪಂ ಸದಸ್ಯರಾದ ಆಲೂರು ನಿಂಗರಾಜ, ಆಶಾ ಕಾಡಜ್ಜಿ, ಮಂಜಪ್ಪ ಮತ್ತಿತರರು, ನಮ್ಮ ಕ್ಷೇತ್ರದ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲವಾಗಿದೆ. ಯಾರಾದರೂ ಊರಿನಲ್ಲಿ ಮೃತಪಟ್ಟರೆ ಅಂತ್ಯಕ್ರಿಯೆಗೆ ಜಾಗವೇ ಇಲ್ಲ. ಪ್ರತಿ ಸಲ ಯಾರಾದರೂ ಸಾವನ್ನಪ್ಪಿದಾಗ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಉಮೇಶ್ ನಾಯ್ಕ ಮಾತನಾಡಿ, ನಮ್ಮ ಕ್ಷೇತ್ರ ವ್ಯಾಪ್ತಿಯ ತಾಂಡವೊಂದರಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಸರ್ವೇ ನಂಬರ್‍ನಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ. ಇವುಗಳನ್ನು ತೆರೆವುಗೊಳಿಸುವುದಕ್ಕೆ ಅಧಿಕಾರಿಗಳು ಇತ್ತೀಚೆಗೆ ಬಂದಿದ್ದು, ಅವರು ಏನು ಮಾಡಬೇಕೆಂದು ಪ್ರಶ್ನಿಸಿದರು.
ಈ ವೇಳೆ ತಹಶೀಲ್ದಾರ್ ಸಂತೋಷಕುಮಾರ್ ಮಾತನಾಡಿ, ಸ್ಮಶಾನದ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ ಭೂ ಸ್ವಾಧೀನಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಶೀಘ್ರವೇ ಅಂತಹ ಗ್ರಾಮಗಳಿಗೆ ಸ್ಮಶಾನ ಭೂಮಿ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ಆಲೂರು ನಿಂಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ರೈತರು ಬೆಳೆವಿಮೆಗೆ ಸಂಬಂಸಿದಂತೆ 120 ಕೋಟಿ ರೂ. ಕಟ್ಟಿದ್ದು, ಇದರಲ್ಲಿ 11 ಕೋಟಿ ಮಾತ್ರ ಬಂದಿದೆ. ಉಳಿದ ಹಣವೇ ಬಂದಿಲ್ಲ. ಸರ್ಕಾರ ಮತ್ತು ವಿಮೆ ಕಂಪನಿ ಜತೆ ಸೇರಿಕೊಂಡು ರೈತರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮಾತನಾಡಿ, ತಾಲೂಕಿನ 13 ಸೊಸೈಟಿಗಳಲ್ಲಿ ಭತ್ತ ಸೇರಿದಂತೆ ವಿವಿಧ ಧಾನ್ಯಗಳ ಬೀಜಗಳನ್ನು ನಾಳೆಯಿಂದ ರೈತರಿಗೆ ವಿತರಣೆ ಮಾಡಲಾಗುತ್ತದೆ. ತೋಟಗಾರಿಕೆ ಬೆಳೆಗಳ ಕುರಿತು ಗ್ರಾಮಗಳಲ್ಲಿ ನಕಲಿ ವೈದ್ಯರು ಬರುತ್ತಿದ್ದು, ಅವರ ಬಗ್ಗೆ ಕುರಿತು ಪರಿಶೀಲನೆ ನಡೆಸಲಾಗುವುದು. ರೈತರು ಕೌಂಟರ್‍ಗಳಲ್ಲಿ ಬಿಟ್ಟು ಗ್ರಾಮೀಣ ಭಾಗಕ್ಕೆ ಬಂದು ಮಾರಾಟ ಮಾಡುವವರ ಬಳಿ ಔಷಧಿ ಪಡೆಯಬಾರದು ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತೆಗಾಗಿ 76 ಸಾವಿರ ಹಿರಿಯ ನಾಗರಿಕರು ಪಿಂಚಣಿ ಪಡೆಯಲಾಗುತ್ತಿದೆ. ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳು 60 ವರ್ಷ ಮೇಲ್ಟಟ್ಟವರನ್ನು ಪಿಂಚಣಿಗೆ ಒಳಪಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಪ್ರತ್ಯೇಕ 50 ಲಕ್ಷ ರೂ.ಬಂದಿದೆ ಎಂದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್.ನಾಗರಾಜ ಮಾತನಾಡಿ, ದಾವಣಗೆರೆಯನ್ನು ಬರಪೀಡಿತ ತಾಲೂಕೆಂದು ಘೋಷಿಸಿದ್ದರೂ, ರೈತರಿಗೆ ಬೆಳೆ ನಷ್ಟ ಪರಿಹಾರ ಯಾಕೆ ದಕ್ಕುತ್ತಿಲ್ಲ? ಬೆಳೆ ಪರಿಹಾರದ ಹಣ ಬರದಿರಲು ಕಾರಣವಾದರೂ ಏನು? ಎಂದು ಪ್ರಶ್ನಿಸಿದರು. ಆಲೂರು ನಿಂಗರಾಜ ಮಾತನಾಡಿ, ರೈತರ ಆತ್ಮಹತ್ಯೆ ತಡೆಯಲೆಂದೇ ಬೆಳೆ ವಿಮೆ ಯೋಜನೆ ಜಾರಿಯಾಗಿದೆ. ಈಗ ಅದೇ ಯೋಜನೆಯ ಪರಿಹಾರದ ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಪಂ ಇಓ ಪ್ರಭುದೇವ್ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಬಯಲು ಶೌಚಾ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು, ಈಗ ಗ್ರಾಮಗಳಲ್ಲಿ ಕಸ ಮುಕ್ತಕ್ಕೆ ಮುಂದಾಗಿದೆ. ತ್ಯಾಜ್ಯದಿಂದ ಗ್ಯಾಸ್ ಮತ್ತು ವಿದ್ಯುತ್ ಉತ್ಪಾದನೆ ಮಾಡಬಹುದು. ಆವರಗೊಳ್ಳ ಮತ್ತು ಶಿರಮಗೊಂಡನಹಳ್ಳಿ ಬಳಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸಿದ್ಧತೆ ನಡೆದಿದೆ.
ಕೈದಾಳೆ ಗ್ರಾಮಗಳಲ್ಲಿ ಹಸಿ ಮತ್ತು ಘನ ತ್ಯಾಜ್ಯ ವಿಂಗಡಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಪಂಗಳಲ್ಲಿಯೂ ಇದಕ್ಕೆ ಸಹಕಾರ ನೀಡಬೇಕು ಎಂದರು.ತಾಪಂ ಉಪಾಧ್ಯಕ್ಷ ಹೆಚ್.ಆರ್.ಮರುಳಸಿದ್ದಪ್ಪ, ಇಓ ಎಲ್.ಎಸ್.ಪ್ರಭುದೇವ್ ಹಾಗೂ ತಾಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
