ಬೆಂಗಳೂರು
ಸರ್ಕಾರಿ ನೌಕರರ ಪಿಂಚಣಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿ ಕೊಡಲಿರುವ ನೂತನ ಪಿಂಚಣಿ ಯೋಜನೆ(ಎನ್‍ಪಿಎಸ್)ಯನ್ನು ಪ್ರಭಲವಾಗಿ ವಿರೋಧಿಸಬೇಕಾಗಿದೆ ಖ್ಯಾತ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ನಗರದ ಗಾಂಧಿಭವನದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಸೋಮವಾರ ಆಯೋಜಿಸಿದ್ದ ಎನ್‍ಪಿಎಸ್ ರದ್ದತಿ ಮತ್ತು ಹೊರಗುತ್ತಿಗೆ/ದಿನಗೂಲಿ ನೌಕರರ ಸಮಸ್ಯೆ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ನೌಕರರ ವೇತನದಿಂದ ಕಡಿತಗೊಂಡ, ಶೇಕಡ 10 ರಷ್ಟು ಪಿಂಚಣಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಲಾಗುತ್ತಿರುವುದನ್ನು ಆರಂಭದಲ್ಲೇ ವಿರೋಧಿಸಬೇಕೆಂದು ಹೇಳಿದರು.
ನೌಕರರು ಪಿಂಚಣಿಗಾಗಿ ತಮ್ಮ ಸಂಬಳದಿಂದ ಪ್ರತಿ ತಿಂಗಳು ಶೇಕಡ 10ರಷ್ಟು ಹಾಗೂ ಸರ್ಕಾರ ಅದಕ್ಕೆ ಸಮಾನವಾದ ಹಣವನ್ನು ಫಂಡ್ ಮ್ಯಾನೇಜರ್‍ಗಳ ಮೂಲಕ ವಿವಿಧ ಖಾಸಗಿ ಹಣಕಾಸಿನ ಸಮಸ್ಯೆಗಳಿಗೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಲು ನೀಡಲಾಗುತ್ತದೆ.ಅದ್ದರಿಂದ ಬಂದ ಲಾಭದಲ್ಲಿ 30-35 ವರ್ಷಗಳ ನಂತರ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ಮಂಜೂರು ಮಾಡುವುದು ಸರಿಯಲ್ಲ ಎಂದರು
ದೇಶದಲ್ಲಿ ಆರ್ಥಿಕ ಭ್ರಷ್ಟತೆ ಮಾತ್ರವಲ್ಲ, ಬೌದ್ಧಿಕ ಭ್ರಷ್ಟತೆಯೂ ಇದ್ದು, ಈ ವಲಯದ ಭ್ರಷ್ಟತೆಯಲ್ಲಿ ಯಾವುದು ಸತ್ಯ, ಯಾವುದು ಅಸತ್ಯ ಎಂದು ನೋಡದೆ ಬೌದ್ಧಿಕ ಭ್ರಷ್ಟತೆ ತಾಂಡವವಾಡುತ್ತಿದೆ.ಖಾಯಂ ನೌಕರರು, ಹೊರ ಗುತ್ತಿಗೆ ನೌಕರರ ಬಗ್ಗೆ ಅಂತಃಕರಣ ಇಟ್ಟುಕೊಳ್ಳಬೇಕು ಎಂದ ಅವರು, ಉದ್ಯೋಗ ಸಮಸ್ಯೆ ಬಗೆಹರಿಸುವ ಜೊತೆಗೆ, ನೂತನ ಪಿಂಚಣಿ ಯೋಜನೆ ರದ್ದು ಗೊಳಿಸಲು ಹೋರಾಟ ಮುಂದುವರೆಸಬೇಕಿದೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಮಪತಿ ಮಾತನಾಡಿ, ಆರನೇ ವೇತನ ಆಯೋಗದ 2ನೇ ವರದಿಯಲ್ಲಿನ ನೌಕರ ವಿರೋಧಿ ಶಿಫಾರಸ್ಸು ಗಳನ್ನು ಕೈಬಿಡಬೇಕು.ಜೊತೆಗೆ, ದಿನಗೂಲಿ ಹೊರಗುತ್ತಿಗೆ ನೌಕರರನ್ನು ನಿಯಮಾನುಸಾರ ಖಾಯಂಗೊಳಿಸುವುದು ಮತ್ತು ಇನ್ನು ಮುಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹೊರಗುತ್ತಿಗೆ ಉದ್ಯೋಗ ಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ರೇಣುಕಾರಾಧ್ಯ, ರಾಷ್ಟ್ರೀಯ ಉಪಾಧ್ಯಕ್ಷ ಡಿ.ಶಿವಶಂಕರ್, ಕಾರ್ಯಾಧ್ಯಕ್ಷ ಎನ್.ಇ.ನಟರಾಜ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
