ಬೆಂಗಳೂರು
ಯಲಹಂಕದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಬಾರಿಯೂ ಕೂಡಾ ವಿವಿಧ ಬೆಳೆ, ದೇಸಿ ಹಸು, ಕುರಿ, ಕೋಳಿ, ಅತ್ಯಾಧುನಿಕ ಯಂತ್ರೋಪಕರಣಗಳು, ಬೀಜಗಳು, ಸಾವಯವ ಗೊಬ್ಬರ ಇತ್ಯಾದಿಗಳು ಮೇಳೈಸಿವೆ.
ಮೇಳಕ್ಕೆ ಆಗಮಿಸುವವರನ್ನು ವಿವಿಧ ಜಾತಿ ದೇಶಿ ವಿದೇಶಿ ತಳಿಯ ಹಸುಗಳು ಜಾನುವಾರುಗಳು ರೈತ ಉಪಕರಣಗಳು ಬೇಸಾಯದ ಪದ್ದತಿ ಸೂಜಿಗಲ್ಲಿನಂತೆ ಸೆಳೆಯುತ್ತಿವೆ
ದೇಶಿ ತಳಿಗಳ ಕಲರವ
ವಿಶೇಷವೆಂದರೆ ಗ್ರೀನ್‍ಅರ್ಥ್ ಫೌಂಡೇಷನ್‍ನ ಸ್ವರ್ಣಭೂಮಿ ಗೋಶಾಲೆಯ ಮಳಿಗೆಯಲ್ಲಿ ಹಳ್ಳಿಕಾರ್, ಮಲೆನಾಡು ಗಿಡ್ಡ, ಅಮೃತ್‍ಮಹಲ್ ತಳಿಗಳ ರಾಸುಗಳ ಪ್ರದರ್ಶನ ಇತ್ತು. ಅಲ್ಲದೇ ದೇಸಿ ತುಪ್ಪ, ಬೆರಣಿ, ಜೀವಾಮೃತ, ಘನ ಜೀವಾಮೃತ, ಎ-2 ಹಾಲು ಮಾರಾಟವಿತ್ತು. ಜತೆಗೆ ಬೆರಣಿ, ಗೋಬರ್ ಗಣಪತಿ, ಪೂಜಾ ಗೋಮೂತ್ರ, ಕೀಟ ನಿಯಂತ್ರಕ, ತಳಸಿ ಆರ್ಕ, ಮಧುವಟ್ಟಿ, ಮಜ್ಜಿಗೆ ಕಡಿಯುವ ಯಂತ್ರ, ಗೋ ಸ್ವಚ್ ಇತ್ಯಾದಿ ಸುಮಾರು 41ಕ್ಕೂ ಹೆಚ್ಚು ಗೋ ಉತ್ಪನ್ನಗಳನ್ನು ಕೃಷಿ ಮೇಳದ ಪ್ರಯುಕ್ತ ರಿಯಾಯಿತಿ ಮಾರಾಟಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇಳದಲ್ಲಿ ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಬಿತ್ತನೆ ಬೀಜ, ಕಸಿ ಮಾಡಿದ ಸಸಿಗಳು, ಹೈನುಗಾರಿಕೆ ಹಾಗೂ ಮೀನು ಸಾಕಣಿಕೆ ಕುರಿತ ಮಳಿಗೆಗಳು ಸೇರಿದಂತೆ ಇತ್ಯಾದಿ ಮಳಿಗೆಗಳು ರೈತರನ್ನು ಸೆಳೆದವು.
ಮೊಲ ಸಾಕಾಣಿಕೆ
ಸಿಂಚನಾ ಮೇಕೆ ಮತ್ತು ಕುರಿ ಫಾರಂನ ಬೀಟಲ್, ಬೋಯರ್, ಜಮುನಾಪಾರಿವಾಸಿ, ತಲಚೇರಿ, ಯಳಗ ಇತ್ಯಾದಿ ಮೇಕೆ ಮತ್ತು ಕುರಿ ತಳಿಗಳು ಗಮನ ಸೆಳೆದವು. ರ?ಯಾಬಿಟ್ ಪ್ಯಾರಡೈಸ್ ಸಂಸ್ಥೆ ಮೊಲ ಸಾಕಾಣಿಕೆ ಕುರಿತು ಮಾಹಿತಿ ನೀಡಿದ್ದಲ್ಲದೇ, ಪ್ರದರ್ಶನ ಏರ್ಪಡಿಸಿತ್ತು. ಮೆಟ್ರೋ ಫಾರಂನ ಸಾನಿಯಾನ್, ಡಾರ್‍ಫರ್,ಜಕ್ರಾನ, ಬೀಟಲ್ ಕುರಿಗಳು ಇಷ್ಟವಾದವು. ಪಶುವೈದ್ಯಕೀಯ ಮಹಾವಿದ್ಯಾಲಯದ ಕುಕ್ಕುಟ ವಿಜ್ಞಾನ ವಿಭಾಗದ ಗಿರಿರಾಜ ಕೋಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ರೈತರು ಹೆಚ್ಚು ಆಸಕ್ತಿ ವ್ಯಕ್ತಪಡಿಸಿದ್ದು ಕಂಡು ಬಂತು. ಬಣ್ಣ ಬಣ್ಣದ ದೈತ್ಯ ಗಿರಿರಾಜ ಕೋಳಿಗಳು ಮತ್ತು ಈ ಕೋಳಿಯ ಮೊಟ್ಟೆಗಳ ಮಾರಾಟ ಉತ್ತಮವಾಗಿತ್ತು.
ಗಿರ್ ಹೋರಿ
ಗುಜರಾತ್‍ನಿಂದ ಕರೆ ತರಲಾದ ಗಿರ್ ತಳಿಯ ಹೋರಿ ನೋಡಲು ಕಾತುರರಾದ ರೈತರು ಗುರುವಾರ ದೈತ್ಯ ಹೋರಿಯನ್ನು ಕಣ್ಣುತುಂಬಿಕೊಂಡರು. ಈ ಹೋರಿ ಒಂದು ಸಾವಿರ ಕೆಜಿ ತೂಕವಿದೆ ಎಂಬುದನ್ನು ಕೇಳಿಯೇ ಜನ ಆಶ್ಚರ್ಯ ವ್ಯಕ್ತಪಡಿಸಿದರು. ಹೋರಿ ನೋಡಲು ಬಂದ ಅನೇಕ ಮಹಿಳೆಯರು ಗಿರ್ ತಳಿಯ ಹಾಲು ಸಿಗುತ್ತದೆಯೇ ಎಂದು ವಿಚಾರಿಸುತ್ತಿದ್ದದ್ದು ಕಂಡು ಬಂತು. ವಿಶೇಷವೆಂದರೆ ಗಿರ್ ತಳಿಯ ಹಸುಗಳ ಒಂದು ಲೀಟರ್ ಹಾಲಿಗೆ 80 ರೂ.ಇದ್ದರೆ, ಕೆಜಿ ತುಪ್ಪಕ್ಕೆ 1600(ಮೇಳದ ಹೊರಗೆ ಕೆಜಿಗೆ ರೂ.2000) ರೂ.ಇದ್ದರೆ, ಅರ್ಧ ಕೆಜಿಗೆ 800 ರೂ.ಇತ್ತು. ಗಿರ್ ತಳಿಯ ಸೆಮೆನ್ ಒಂದು ಡೋಸ್‍ಗೆ 1200 ರು.ಗಳನ್ನು ನಿಗದಿಪಡಿಸಲಾಗಿತ್ತು. ಪ್ರಸ್ತುತ ಈ ಹೋರಿಯ ಬೆಲೆ 24 ಲಕ್ಷ ರೂ. ಇದೆ.
ಕಡಕನಾಥ್ ಕೋಳಿಗೆ ಕ್ಯೂ
ಕಡಕನಾಥ್ ಆರ್ಗಾನಿಕ್ ಎಂಬ ಸಂಸ್ಥೆಯೊಂದು ಮೇಳದಲ್ಲಿ ಕಡಕನಾಥ್ ಕೋಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಈ ಕೋಳಿ ಕೆಜಿಗೆ 600 ರೂ.ಇದ್ದು, 2 ತಿಂಗಳ ಜೋಡಿ ಕೋಳಿ ಮರಿಗಳಿಗೆ 500 ರು.ನಿಗದಿಪಡಿಸಲಾಗಿತ್ತು. ಈ ಕೋಳಿ ವಿಶೇಷವೆಂದರೆ ಕಪ್ಪು ರಕ್ತ ಮತ್ತು ಕಪ್ಪು ಮಾಂಸ ಹೊಂದಿದ್ದು, ಆರು ತಿಂಗಳಿಗೆ ಕೇವಲ ಒಂದೂವರೆ ಕೆಜಿಯಷ್ಟೇ ತೂಕ ಬರುತ್ತದೆ. ಹಲವು ರೈತರು ಇದರ ಬಗ್ಗೆ ವಿಚಾರಿಸಿದರೂ ಖರೀದಿ ಮಾಡಿದ್ದು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ.
ನಾರಿ ಸುವರ್ಣ ಕುರಿ:
ಡೆಕ್ಕನಿ, ಗೆರೋಲ್ ತಳಿಯ ಸಂಯುಕ್ತ ತಳಿಯೇ ನಾರಿ ಸುವರ್ಣ ಕುರಿ. ಒಂದು ವರ್ಷದಲ್ಲಿ ಬೆದೆಗೆ ಬರುವ ಈ ಕುರಿ 8ರಿಂದ 10 ತಿಂಗಳಲ್ಲಿಯೇ ಎರಡ್ಮೂರು ಕುರಿಗಳಿಗೆ ಜನ್ಮ ನೀಡುತ್ತದೆ. ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಮರಿಗಳನ್ನು ಹಾಕುವ ತಳಿ ಇದಾಗಿದೆ. ನೂರಕ್ಕೆ ನೂರಾ ಅರವತ್ತರಷ್ಟು ವಂಶಾಭಿವೃದ್ಧಿ, ರೋಗ ನಿರೋಧಕ ಶಕ್ತಿ ಹೊಂದಿದೆ. ರುಚಿಕರ ಮಾಂಸ, ಟಗರುಗಳಿಂದ ನಾಟಿ ಕುರಿಗಳ ವಂಶ ಸಂವರ್ಧನೆಗೆ ಸೂಕ್ತ ತಳಿಯದ್ದಾಗಿರುವ ಇದು ವಂಶಾಭಿವೃದ್ಧಿಯ ಬಿ ಜೀನ್ ಹೊಂದಿದೆ. ಅನೇಕ ರೈತರು ಈ ಕುರಿಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದು, ಕೆಲವರು ಬುಕ್ಕಿಂಗ್ ಕೂಡ ಮಾಡಿದ್ದಾರೆ. ಹೆಣ್ಣು ಕುರಿಗೆ 35 ಸಾವಿರ, ಗಂಡು ಕುರಿಗೆ 40 ಸಾವಿರ ರೂ.ಗಳು ಇದೆ ಎನ್ನುತ್ತಾರೆ ಸಿಂಚನ ಕುರಿ ಮತ್ತು ಮೇಕೆ ಫಾರಂ ಸತೀಶ್.
ಗಿಡ-ಬೀಜಕ್ಕೂ ಬೇಡಿಕೆ
ಕೃಷಿ ಮೇಳಕ್ಕೆ ಬಂದ ಬಹುತೇಕ ಜನರು ವಿವಿಧ ಜಾತಿಯ ಹೂವಿನ ಗಿಡಗಳ ಕಡೆಗೆ ಹೆಚ್ಚು ಆಕರ್ಷಿತರಾದಂತೆ ಕಂಡು ಬಂತು. ಹಲವು ಗುಲಾಬಿ, ಬಟನ್ಸ್, ಸೇವಂತಿಗೆ ಇತ್ಯಾದಿ ಸಣ್ಣ ಹೂವಿನ ತಳಿಗಳನ್ನು ನಗರವಾಸಿಗಳು ಖರೀದಿಸಿದರೆ, ರೈತರು ಹೊಲ, ಗದ್ದೆಗಳಲ್ಲಿ ನೆಡಲು ಮಾವು, ನಿಂಬೆ, ಸಫೆÇೀಟ ಸೇರಿದಂತೆ ಇತರ ಹಣ್ಣಿನ ಗಿಡಗಳನ್ನು ಖರೀದಿ ಮಾಡುತ್ತಿದ್ದರು. ಇನ್ನು ಹಲವರು ವಿವಿಧ ತಳಿಯ ಬೀಜಗಳನ್ನು ಖರೀದಿಸಿದ್ದರೆ, ರಿಯಾಯಿತಿ ನೀಡಲು ಮಳಿಗೆಗಳು ಹೆಚ್ಚು ಆಸಕ್ತಿ ವಹಿಸಿರಲಿಲ್ಲ .
ತರಹೇವಾರಿ ಊಟ:
ಬಗೆ ಬಗೆಯ ಸಸ್ಯಹಾರಿ, ಮಾಂಸಹಾರಿ ಊಟದ ಮಳಿಗೆಗಳನ್ನು ತೆರೆಯಲಾಗಿದೆ. ಫುಡ್ ಕೋರ್ಟ್‍ನಲ್ಲಿ ಸುಮಾರು 50ರಿಂದ 70ಕ್ಕೂ ಹೆಚ್ಚು ಮಳಿಗೆಗಳಿದ್ದು, ಚಿಕನ್, ಮಟನ್ ಬಿರಿಯಾನಿ, ಕಬಾಬ್, ಚಿಕನ್ 65, ಪೆಪ್ಪರ್ ಚಿಕನ್ ಹೀಗೆ ವಿವಿಧ ಮಾಂಸಹಾರಿ ಖಾದ್ಯಗಳು ಬಾಯಲ್ಲಿ ನೀರೂರಿಸಿದ್ದವು. ಒಂದೆಡೆ ಚಿಕನ್, ಮಟನ್, ಮೀನು ಖಾದ್ಯಗಳ ಮಳಿಗೆಗಳಿದ್ದರೆ, ಇನ್ನೊಂದೆಡೆ ಹಂದಿ ಮಾಂಸದ ಖಾದ್ಯದ ಮಳಿಗೆಗಳನ್ನು ತೆರೆಯಲಾಗಿದೆ.ಮತ್ತೊಂದೆಡೆ ಉತ್ತರ ಕರ್ನಾಟಕ ಶೈಲಿನ ಜೋಳದ ರೊಟ್ಟಿ, ಚಿಟ್ನಿಪುಡಿ, ಗಿರ್‍ಮಿಟ್, ಎಣ್ಗಾಯಿ, ಕಾಳು ಪಲ್ಯಗಳ ಊಟಗಳು ಜನರನ್ನು ಆಕರ್ಷಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
