ಹಾನಗಲ್ಲ :
ಭಾರತೀಯ ಜನತಾ ಪಕ್ಷದ ಮಹಾ ಸಂಪರ್ಕ ಅಭಿಯಾನಕ್ಕೆ ಸಂಸದ ಶಿವಕುಮಾರ ಉದಾಸಿ ಗೌಳಿಗಲ್ಲಿಯ ತಮ್ಮ ನಿವಾಸದ ಮೇಲೆ ರವಿವಾರ ಬಿಜೆಪಿ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.
ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ದೇಶಾದ್ಯಂತ ಭಾರತೀಯ ಜನತಾ ಪಾರ್ಟಿ ಮಹಾಸಂಪರ್ಕ ಅಭಿಯಾನ ಆಚರಿಸುತ್ತಿದೆ, ಈ ಮೂಲಕ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳ ಅರಿವು ಮೂಡಿಸಲಾಗುತ್ತದೆ, ಮಹಾಸಂಪರ್ಕ ಅಭಿಯಾನವು ಮಾರ್ಚ 2 ತನಕ ನಡೆಯಲಿದ್ದು, ಪ್ರತಿ ಬೂತ್‍ನ ಕನಿಷ್ಟ 50 ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಬಾವುಟ ಸ್ಥಾಪಿಸಲಾಗುತ್ತದೆ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ನಿಂಗಪ್ಪ ಗೊಬ್ಬೇರ ಮಾತನಾಡಿ, ತಾಲೂಕಿನಲ್ಲಿ ಉಜ್ವಲಾ ಯೋಜನೆಯಲ್ಲಿ ಭಾಗಿಯಾದ ಕುಟುಂಬಗಳ ಮನೆ ಮುಂದೆ ಕಮಲ ಜ್ಯೋತಿ ಅಭಿಯಾನವನ್ನು ಮಾಡಲಾಗುತ್ತದೆ, ಆ ಮೂಲಕ ಜನರಲ್ಲಿ ಕೇಂದ್ರ ಸರಕಾರದ ಯೋಜನೆಗಳ ಮಹತ್ವ ತಿಳಿಸಲಾಗುತ್ತದೆ ಎಂದರು.