ಸಿಎಂ ವಿರುದ್ಧ ಪ್ರಾಸಿಕ್ಯೂಷನ್:: ಆ.19ಕ್ಕೆ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕೆಪಿಸಿಸಿ ಸೂಚನೆ

ಬೆಂಗಳೂರು

    ಮುಡಾದಲ್ಲಿ  ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸೂಚನೆ ನೀಡಿದೆ.

    ಸದ್ಯ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ ಖಂಡಿಸಿ ಇದೀಗ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇದೀಗ ಕೆಪಿಸಿಸಿ ಕೂಡ ರಾಜ್ಯಾದ್ಯಂತ ಪ್ರತಿಭಟಿಸಲು ಮುಂದಾಗಿದ್ದು, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲು  ಸೂಚಿಸಲಾಗಿದೆ.

    ಪ್ರಾಸಿಕ್ಯೂಷನ್ ಸಂಬಂಧ ಎಐಸಿಸಿ ನಾಯಕರು ಕೂಡ ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್,‌ ಉಸ್ತುವಾರಿ ಸುರ್ಜೇವಾಲ ಕರೆ ಮಾಡಿದ್ದು, ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದ್ದಾರೆ. ನಿಮ್ಮ ಜತೆ ನಾವಿದ್ದೇವೆ, ಧೈರ್ಯವಾಗಿರಿ. ಏನೇ ಆದರೂ ಕಾನೂನು ಹೋರಾಟ ನಡೆಸೋಣ ಅಂತ ಹೇಳೋ ಮೂಲಕ ರಾಜ್ಯವ್ಯಾಪಿ ಸಮರಕ್ಕೆ ರಣಕಹಳೆ ಮೊಳಗಿಸುವಂತೆ ಸೂಚನೆ ಕೊಟ್ಟಿದ್ದಾರೆ. 

    ರಾಜ್ಯಪಾಲರ ನಡೆ ಖಂಡಿಸಿ ಕಲಬುರಗಿ ಜಿಲ್ಲಾ ಪ್ರದೇಶ ಕುರುಬ ಸಂಘ ಹಾಗೂ ಹಿಂದುಳಿದ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದೆ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್​ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಟೈಟ್​ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಿಂದ ರಾಜ್ಯಪಾಲರನ್ನ ತೊಲಿಗಿಸಿ, ಕೇಂದ್ರ ಕೈಗೊಂಬೆಯಾದ ರಾಜ್ಯಪಾಲರನ್ನ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.

   ಇನ್ನು ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಕೂಡ ಶೋಷಿತ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಗಿದೆ. ಡಿವೈಎಸ್​ಪಿ ದಿನಕರ್ ಜತೆ ಅಹಿಂದ ಮುಖಂಡ ಬಿ.ಟಿ ಜಗದೀಶ್ ಮತ್ತಿತರರು ವಾಗ್ವಾದ ಮಾಡಿದ್ದಾರೆ. ಗವರ್ನರ್ ಗೋಬ್ಯಾಕ್‌ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಭಾಗಿ ಆಗಿದ್ದರು.

   ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಕಾಂಗ್ರೆಸ್​ನಿಂದ ಪ್ರತಿಭಟನೆ ಮಾಡಿದ್ದು, ಗೋ ಬ್ಯಾಕ್ ಚಳುವಳಿ ಮೂಲಕ ರಾಜ್ಯಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ದವು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತವಾಗಿದೆ.ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ. ಷಡ್ಯಂತರ ಮಾಡಿ ಸಿಎಂ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ. ಕಾಂಗ್ರೆಸ್ ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap