ಮೈಸೂರು:
ಸಾಂಸ್ಕೃತಿಕನಗರಿ ಮೈಸೂರು ರಾಜಕೀಯ ಶಕ್ತಿ ಕೇಂದ್ರವಾಗಿ ಪ್ರಜ್ವಲಿಸಲು ಸಜ್ಜಾಗಿದೆ. ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯಲಿದೆ. ಮೈತ್ರಿ ಪಕ್ಷಗಳ ಪಾದಾಯಾತ್ರೆಗೆ ಪ್ರತಿಯಾಗಿ ಈ ಸಮಾವೇಶ ನಡೆಯುತ್ತಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಒಂದು ತಿಂಗಳಿಗೂ ಹೆಚ್ಚು ಕಾಲ ಎರಡೂ ಕಡೆಯವರು ರಾಜಕೀಯ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗಿನ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಆರಂಭವಾದ ಹಗ್ಗ ಜಗ್ಗಾಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಎನ್‌ಡಿಎ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆಯಾಗಿ ರೂಪುಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಗಂಭೀರ ಆರೋಪಗಳಿಗೆ ತಕ್ಕ ಉತ್ತರ ನೀಡುವ ಜತೆಗೆ, ಬಿಜೆಪಿ–ಜೆಡಿಎಸ್ ಅಧಿಕಾರದ ಅವಧಿಯಲ್ಲಾದ ಹಗರಣಗಳನ್ನು ತೆರೆದಿಡಲು ಮುಂದಾಗಿದ್ದಾರೆ. ಶುಕ್ರವಾರ ಇಲ್ಲಿ ನಡೆಯುವ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶದಲ್ಲಿ ‘ಶಕ್ತಿ’ ಪ್ರದರ್ಶನ ಮಾಡಲಿದ್ದಾರೆ. ಕೆಪಿಸಿಸಿಯಿಂದ ಆಯೋಜಿಸಿರುವ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆದಿದ್ದು, ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದಲ್ಲೇ ತಂಗಿರುವ ಮುಖ್ಯಮಂತ್ರಿ ಸಮಾವೇಶದ ಯಶಸ್ಸಿಗೆ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಿದರು.
ಕಾಂಗ್ರೆಸ್ ಜನಾಂದೋಲನ ಸಮಾವೇಶ ಆಯೋಜಿಸುತ್ತಿರುವ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲೇ ದೋಸ್ತಿ ಪಕ್ಷಗಳ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ. ಒಂದೇ ಮೈದಾನ ಮತ್ತು ಒಂದೇ ವೇದಿಕೆಯಲ್ಲಿ 2 ಕಾರ್ಯಕ್ರಮಗಳು ನಡೆಯಲಿವೆ. ಕೇವಲ ಬ್ಯಾನರ್‌ಗಳು ಮಾತ್ರ ಬದಲಾಗ್ತಿದೆ ಅಷ್ಟೇ, ಇಂದು ಕಾಂಗ್ರೆಸ್‌ನಿಂದ 1 ಲಕ್ಷ ಜನ ಸೇರಿಸೋಕೆ ಪ್ಲಾನ್ ಆಗಿದ್ರೆ, ಆಗಸ್ಟ್ 10 ರಂದು ಬಿಜೆಪಿ-ಜೆಡಿಎಸ್‌ನಿಂದ ಸರ್ಕಾರದ ವಿರುದ್ಧ ಅಷ್ಟೇ ದೊಡ್ಡಮಟ್ಟದಲ್ಲಿ ಜನ ಸೇರಿಸಲಿದ್ದು ಸಿಎಂ ರಾಜೀನಾಮೆಗೂ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.
ಎಸ್‌ಟಿ ಅಭಿವೃದ್ಧಿ ನಿಗಮ ಮತ್ತು ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಗಳಿಗೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಒತ್ತಾಯಿಸುತ್ತಿದೆ. ಮೈಸೂರಿನಲ್ಲಿ ಪಾದಯಾತ್ರೆ ಮುಕ್ತಾಯಗೊಂಡ ನಂತರ ಸಮಸ್ಯೆ ತಣ್ಣಗಾಗಲು ಬಿಡದಂತೆ ದೋಸ್ತಿಗಳು ಪ್ಲಾನ್ ಮಾಡಿದ್ದಾರೆ, ಮತ್ತೊಂದೆಡೆ, ಮುಡಾದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಸಚಿವ ಸಂಪುಟ ಸಲಹೆ ನೀಡಿದೆ. ರಾಜ್ಯಪಾಲರ ಮುಂದಿನ ನಡೆ ಏನು ಎಂಬ ಬಗ್ಗೆ ಕಾಂಗ್ರೆಸ್ ಕಾತರದಿಂದ ಕಾಯುತ್ತಿದೆ.
ಸಿದ್ದರಾಮಯ್ಯ ತವರಿನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ವೈ.ವಿಜಯೇಂದ್ರ, ವಿಧಾನಸಭೆಯಲ್ಲಿ ಆರ್.ಅಶೋಕ, ಪರಿಷತ್ತಿನಲ್ಲಿ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಹಾಗೂ ರಾಜ್ಯ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಎನ್ ಡಿಎ ತನ್ನ ಶಕ್ತಿ ಸಾಬೀತುಪಡಿಸಲು ಬಯಸಿದೆ. ಹಿರಿಯ ಸಮಾಜವಾದಿ ನಾಯಕ ಸಿದ್ದರಾಮಯ್ಯ ಅವರನ್ನು ಕಳಂಕಿತ ಸಿಎಂ ಎಂದು ಬಿಂಬಿಸುವ ರ್ಯಾಲಿಯಲ್ಲಿ ರಾಜ್ಯದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಮತ್ತು ಸಂಸದರಿಗೆ ಹಾಜರಾಗುವಂತೆ ಎನ್ ಡಿಎ ಸೂಚಿಸಿದೆ. ರ್ಯಾಲಿಯಲ್ಲಿ ಭಾಗವಹಿಸುವಂತೆ ಬಿಜೆಪಿ ರಾಜ್ಯ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.
ಮುಂಬರುವ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷಗಳು ತಮ್ಮ ಬಲವನ್ನು ಸಾಬೀತುಪಡಿಸಲು ಬಯಸುತ್ತಿರುವ ಕಾರಣ ಕಾಂಗ್ರೆಸ್ ಮತ್ತು ಎನ್‌ಡಿಎಯ ರ‍್ಯಾಲಿಗಳು ಕರ್ನಾಟಕದಲ್ಲಿ ಭವಿಷ್ಯದ ರಾಜಕೀಯಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ. ಮೈಸೂರಿನಲ್ಲಿರುವ ಹೋಟೆಲ್‌ಗಳಲ್ಲಿ ಬಹುತೇಕ ಕೊಠಡಿಗಳು ರಾಜಕಾರಣಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಕಾಯ್ದಿರಿಸಿರುವುದರಿಂದ ವಾರಾಂತ್ಯವು ಪ್ರವಾಸಿಗರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಸ್ಟಾರ್ ಹೋಟೆಲ್‌ಗಳಲ್ಲಿನ ಕೊಠಡಿಗಳ ಬೆಲೆ ಸುಮಾರು 60% ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಬೇರೆ ಜಿಲ್ಲೆಗಳ ಪಕ್ಷದ ಕಾರ್ಯಕರ್ತರು ಮೈಸೂರಿನ ಹೊರವಲಯದ ಶ್ರೀರಂಗಪಟ್ಟಣ, ಕೆಆರ್‌ಎಸ್, ನಂಜನಗೂಡು ರಸ್ತೆಯ ಹೋಟೆಲ್‌ಗಳಲ್ಲಿ ಕೊಠಡಿ ಕಾಯ್ದಿರಿಸಿದ್ದಾರೆ. ಅಲ್ಲದೆ, ಮಹಾರಾಜ ಕಾಲೇಜು ಮೈದಾನಕ್ಕೆ ಹೋಗುವ ಪ್ರಮುಖ ರಸ್ತೆಗಳಲ್ಲಿ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು, ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುವ ಮೂಲಕ ಟ್ರಾಫಿಕ್ ಜಾಮ್ ಆಗುವ ನಿರೀಕ್ಷೆಯಿದೆ.