ಮುಂಬೈ:
ಸೋಮವಾರ ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದ್ದು, ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸದ್ಯ ಪೊಲೀಸರು 60 ಜನ ಗಲಭೆಕೋರರನ್ನು ಬಂಧಿಸಿದ್ದಾರೆ. ಗಲಭೆಯ ಬಗ್ಗೆ ಸಾರ್ವಜನಿಕರು ಮಾತನಾಡಿದ್ದು, ಹಿಂಸಾಚಾರದ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. ನಾಗ್ಪುರ ನಿವಾಸಿ ವಂಶ್ ಕಾವ್ಲೆ ಈ ಬಗ್ಗೆ ಮಾತನಾಡಿದ್ದು, ಏಕಾಏಕಿ ಒಂದು ಗುಂಪು ಗಲಾಟೆಯನ್ನು ಪ್ರಾರಂಭಿಸಿತು. ಗಲಭೆಕೋರರು ತಮ್ಮ ಮುಖವನ್ನು ಮುಚ್ಚಿಕೊಂಡು ಬಂದಿದ್ದರು, ಅವರು ಸಿಸಿಟಿವಿಗೆ ಮೊದಲು ಹಾನಿ ಮಾಡಿದರು ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ನಿವಾಸಿ ಐವತ್ತು ವರ್ಷದ ಶರದ್ ಗುಪ್ತಾ ಅವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ರಾತ್ರಿ 10.30 ರಿಂದ 11.30 ರ ನಡುವೆ ಗುಂಪೊಂದು ಸುಟ್ಟುಹಾಕಿದೆ ಎಂದು ಹೇಳಿದ್ದಾರೆ. ಉದ್ರಿಕ್ತ ಗುಂಪು ಕಲ್ಲುಗಳನ್ನು ಎಸೆದು ಇತರ ಹಲವು ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ಗುಪ್ತಾ ಹೇಳಿದರು. ದಾಳಿಯಲ್ಲಿ ಗುಪ್ತಾ ಗಾಯಗೊಂಡಿದ್ದಾರೆ.
ರಾಮನವಮಿ ಶೋಭಾ ಯಾತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ನಿವಾಸಿ ಚಂದ್ರಕಾಂತ್ ಕಾವ್ಡೆ ಮಾತನಾಡಿ, ಗಲಭೆಕೋರರ ಗುಂಪು ತನ್ನ ಎಲ್ಲಾ ಅಲಂಕಾರ ಸಾಮಗ್ರಿಗಳನ್ನು ಸುಟ್ಟುಹಾಕಿದೆ. ಗಲಭೇಕೋರರು ಹಲವು ಮನೆಗಳ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ ಎಂದು ಅವರು ಹೇಳಿದ್ದಾರೆ. ನಾಗ್ಪುರದ ಹಿಂಸಾಚಾರ ಪೀಡಿತ ಹಂಸಪುರಿ ಪ್ರದೇಶದ ಸ್ಥಳೀಯ ಅಂಗಡಿಯವರೊಬ್ಬರು ಮಾತನಾಡಿ, ರಾತ್ರಿ 10.30ರ ಸಮಯಕ್ಕೆ ನಾನು ನನ್ನ ಅಂಗಡಿಯನ್ನು ಮುಚ್ಚಿದೆ. ಇದ್ದಕ್ಕಿದ್ದಂತೆ, ಜನರು ವಾಹನಗಳಿಗೆ ಬೆಂಕಿ ಹಚ್ಚುವುದನ್ನು ನಾನು ನೋಡಿದೆ. ನಾನು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದಾಗ, ನನಗೆ ಕಲ್ಲಿನಿಂದ ಹೊಡೆದರು ಎಂದು ಅವರು ಆರೋಪಿಸಿದ್ದಾರೆ.
ನಗರದಲ್ಲಿ ಪ್ರಸ್ತುತ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ಡಾ. ರವೀಂದರ್ ಸಿಂಘಾಲ್ ಹೇಳಿದ್ದಾರೆ. ರಾತ್ರಿ 8 ರಿಂದ 8:30 ರ ಸುಮಾರಿಗೆ ಹಿಂಸಾಚಾರ ನಡೆದಿದ್ದು, ಈ ಸಂದರ್ಭದಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಭಾಗಿಯಾಗಿರುವವರನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
