ನವದೆಹಲಿ:
ಲಡಾಖ್ ನಲ್ಲಿ ನಡೆದ ಇಂಡೋ-ಚೀನಾ ಸೈನಿಕರ ಸಂಘರ್ಷಕ್ಕೆ ಭಾರತೀಯ ಸೈನಿಕರೇ ನೇರಹೊಣೆ ಎಂದು ಹೇಳಿರುವ ಚೀನಾ ಸರ್ಕಾರ, ತಾನು ಯಾವುದೇ ಕಾರಣಕ್ಕೂ ತನ್ನ ಗಡಿಯ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಲು ಸಿದ್ಧನಿಲ್ಲ ಎಂದು ಹೇಳಿದೆ.ರಷ್ಯಾದಲ್ಲಿ ನಡೆದ ಚೀನಾ ಮತ್ತು ಭಾರತ ವಿದೇಶಾಂಗ ಸಚಿವರ ಭೇಟಿ ಬಳಿಕ ಇದೇ ಮೊದಲ ಬಾರಿಗೆ ಚೀನಾ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಇಡೀ ಲಡಾಖ್ ಪ್ರಹಸನಕ್ಕೆ ಭಾರತ ಸೇನೆಯೇ ಸಂಪೂರ್ಣ ಕಾರಣ. ಆದರೆ ನಾವು ಒಂದು ಅಂಶವನ್ನು ಸ್ಪಷ್ಟಪಡಿಸುತ್ತೇವೆ. ನಮ್ಮ ಗಡಿಯ ಒಂದಿಂಚು ಭೂಮಿಯನ್ನೂ ನಾನು ಬಿಟ್ಟುಕೊಡುವುದಿಲ್ಲ.
ಚೀನಾ ಸೇನೆ ತನ್ನ ಸರಹದ್ದು ರಕ್ಷಿಸಿಕೊಳ್ಳಲು ಸಮರ್ಥ ಮತ್ತು ಸಶಕ್ತವಾಗಿದೆ. ಅಂತೆಯೇ ಸಂಘರ್ಷ ಸ್ಥಗಿತಗೊಳಿಸಿ, ಗಡಿಯಲ್ಲಿ ಶಾಂತಿ ಸ್ಥಾಪಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಿದ್ಧರಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶಾಂತಿ ಸ್ಥಾಪನೆಗೆ ಸಿದ್ಧರಿದ್ದು, ಉಭಯ ನಾಯಕರೂ ಪರಸ್ಪರ ಶಾಂತಿಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಚೀನಾ ಸರ್ಕಾರ ತನ್ನ ಹೇಳಿಕೆಯಲ್ಲಿ ಹೇಳಿದೆ.