ಶ್ರೀನಗರ
ಜಮ್ಮು ಕಾಶ್ಮೀರದ ಬೇಸಿಗೆ ರಾಜಧಾನಿ ಕಾಶ್ಮೀರ ಕಣಿವೆಯಲ್ಲಿ ನಾಳೆಯಿಂದ ಕಾರ್ಯನಿರ್ವಹಿಸಲಿರುವ ಸರ್ಕಾರಿ ಕಾರ್ಯಾಲಯಗಳಿಗೆ ಭೇಟಿ ನೀಡಿದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಕಚೇರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಪ್ರತಿ ಆರು ತಿಂಗಳಿಗೊಮ್ಮೆ ಜಮ್ಮು ಕಾಶ್ಮೀರದ ರಾಜಧಾನಿ ಬದಲಾಗುತ್ತಿದ್ದು, ಚಳಿಗಾಲದಲ್ಲಿ ಜಮ್ಮು ಹಾಗೂ ಬೇಸಿಗೆಯಲ್ಲಿ ಕಾಶ್ಮೀ ರ ರಾಜಧಾನಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ರಾಜಧಾನಿಯಿಂದ ಇನ್ನೊಂದು ರಾಜಧಾನಿ ಕಾರ್ಯಾಲಯಗಳಿಗೆ ವರ್ಗಾವಣೆಗೊಳ್ಳುವುದನ್ನು ‘ದರ್ಬಾರ್ ಪಯಣ’ ಎಂದು ಕರೆಯಲಾಗುತ್ತದೆ.
ನಾಗರಿಕ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ರಾಜ್ಯಪಾಲರು ಕಾರ್ಯಾಲಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಜನರಿಗೆ ಅಗತ್ಯ ವಿದ್ಯುತ್, ನೀರು ಪೂರೈಕೆ ಹಾಗೂ ಸೆಹ್ರಿ ಹಾಗೂ ಇಫ್ತಾರ್ ಸಮಯದಲ್ಲಿ ಅಗತ್ಯ ವಸ್ತುಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು. ರಸ್ತೆಗಳ ಸ್ವಚ್ಛತೆ, ಸಾಮೂಹಿಕ ಪ್ರಾರ್ಥನೆಗಳು ನಡೆಯುವ ಸ್ಥಳದಲ್ಲಿ ಬೀದಿ ದೀಪಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಂಚಾರಿ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಅಧಿಕಾರಿಗಳಿಗೆ ಬಯೋ ಮೆಟ್ರಿಕ್ ಹಾಜರಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ, ಜನರ ಹಾಗೂ ಪೊಲೀಸ್ ಸಿಬ್ಬಂದಿಯ ಕಷ್ಟಗಳನ್ನು ಆಲಿಸಿ, ಅದಕ್ಕೆ ತಕ್ಕನಾದ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಎಲ್ಲಾ ಶಾಲೆಗಳಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳು, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಆಶಾ ಕಾರ್ಯಕರ್ತರ ನೇಮಕ ಮತ್ತಿತರ ಅಗತ್ಯ ಯೋಜನೆಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ ಕೆಲ ತಿಂಗಳಲ್ಲಿ ನಡೆದ ರಾಜಕೀಯ ನಾಯಕರು ಹಾಗೂ ಪೊಲೀಸ್ ಸಿಬ್ಬಂದಿಯ ಹತ್ಯೆ ಕುರಿತು ಆತಂಕ ವ್ಯಕ್ತಪಡಿಸಿದ ರಾಜ್ಯಪಾಲರು, ರಾಜಕೀಯ ವ್ಯಕ್ತಿಗಳು ಹಾಗೂ ಪೊಲೀಸರಿಗೆ ಭದ್ರತೆ ಒದಗಿಸುವ ಕುರಿತು ಉನ್ನತ ಮಟ್ಟದ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
