ಬೆಂಗಳೂರು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ವೇಳೆ ರಾಜಕೀಯ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಸೋಮವಾರ ಸ್ಪಷ್ಟಪಡಿಸಿದರು.ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ರಾಜಕೀಯದ ಹೊರತಾಗಿ, ಅವರು ನನಗೆ ಅಣ್ಣನಂತೆ. ನಾನು ಅವರನ್ನು ಆಗಾಗ್ಗೆ ಭೇಟಿಯಾಗುತ್ತೇನೆಂದು ಹೇಳಿದರು.
ಭೇಟಿ ಸಯದಲ್ಲಿ ನಾವು ಕುಟುಂಬದ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಪ್ರತಿ ಬಾರಿ ಭೇಟಿಯಾದಾಗಲೂ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ನಿನ್ನೆಯ ಭೇಟಿ ವೇಳೆಯೂ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ನಾವು ಅನೇಕ ಕುಟುಂಬ ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಅದನ್ನು ಹೆಚ್ಚು ಅರ್ಥೈಸುವ ಅಗತ್ಯವಿಲ್ಲ. ನಾನು ರಾಜಕೀಯದ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.
ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೀರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ವಿಚಾರದಲ್ಲಿ ಮುಚ್ಚುಮರೆ ಏನಿದೆ?. ರಾಜಕೀಯ ಚರ್ಚೆ ಮಾಡಿದ್ದರೆ, ಮಾಡಿರುವುದಾಗಿ ಹೇಳುತ್ತಿದ್ದೆ. ಏನು ಚರ್ಚೆ ಮಾಡಿದ್ದೇನೆ ಅಂತ ಹೇಳುತ್ತಿದ್ದೆ? ನಾನು ರಾಜಕೀಯ ಚರ್ಚೆ ಮಾಡಿಲ್ಲ. ಒಂದು ವೇಳೆ ಚರ್ಚೆ ಮಾಡಿದ್ದರೆ ಏನು ಎಂಬುದನ್ನು ನಿಮ್ಮ ಮುಂದೆ ಹೇಳುತ್ತಿರಲಿಲ್ಲ ಎಂದು ಹೇಳಿದರು.
ರಾಜ್ಯದ ತೆರಿಗೆ ಪಾಲು ಕೇಳಿದರೆ ಸಣ್ಣತನ ಎಂದಿರುವ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರಿಗೆ ನಾಚಿಕೆಯಾಗಬೇಕು. ಈ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ. ಸ್ವಲ್ಪ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಿಕೊಂಡರೆ ಒಳ್ಳೆಯದು. ಫೆಡರಲ್ ವ್ಯವಸ್ಥೆಯಲ್ಲಿ ತೆರಿಗೆ ಪಾಲು ಯಾವ ರೀತಿ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ನಿಯಮ ಮಾಡಿಟ್ಟಿದ್ದಾರೆ. ಹೆಚ್ಚು ತೆರಿಗೆ ಕಟ್ಟುತ್ತಿರುವ ಕರ್ನಾಟಕದವರಿಗೆ ಹೆಚ್ಚು ಪಾಲು ನೀಡುವಂತೆ ಕೇಳುತ್ತಿದ್ದೇವೆ.
ಅದಕ್ಕೆ ಗೋಯೆಲ್ ಅವರು ಸಣ್ಣತನ ಅಂತ ಹೇಳುತ್ತಾರೆ. ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ದಿವಾಳಿ ಆಗಿದೆ ಎಂದು ಹೇಳುತ್ತಾರೆ. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಆ ರೀತಿ ಮಾತನಾಡಬಾರದು. ಇದೆಲ್ಲ ರಾಜಕಾರಣದಲ್ಲಿ ಸರಿಯಲ್ಲ. ಒಂದು ವ್ಯವಸ್ಥೆ ಮಾಡಿಟ್ಟಿದ್ದಾರೆ. ಆ ವ್ಯವಸ್ಥೆಯಲ್ಲಿ ನಾವೆಲ್ಲ ಹೋಗಬೇಕು. ವ್ಯವಸ್ಥೆ ಬದಲಾವಣೆ ಮಾಡಿಕೊಳ್ಳಲಿ. ಕೇಂದ್ರಕ್ಕೆ ಬಂದಿರುವ ತೆರಿಗೆ ಯಾರಿಗೂ ಕೊಡುವುದಿಲ್ಲ ಎಂದು ನಿಯಮ ಮಾಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದರು
