ಪಾವಗಡ :
ದೇಶದಾದ್ಯಂತ ಎಲ್ಲಾ ಖಾಸಗಿ ಕಂಪನಿಗಳ ಲಾಭಾಂಶದ ಶೇ. 2 ರಷ್ಟು ಸಮಾಜದ ಅಭಿವೃದ್ದಿಗೆ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರದ ಆದೇಶವಾದ ನಂತರ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗೆ ಈ ಹಣವನ್ನು ಉಪಯೋಗಿಸಲಾಗುತ್ತಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸದರು.
ಅವರು ಗುರುವಾರ ಪಟ್ಟಣದಲ್ಲಿ 1.20 ಕೋಟಿ ವೆಚ್ಚದ ಬೆಸ್ಕಾಂ ಕಛೇರಿಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಹಾಗೂ ಸೋಲಾರ್ ಪಾರ್ಕ್ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ರಂಗಸಮುದ್ರ, ಲಿಂಗದಹಳ್ಳಿ, ಚಿಕ್ಕಜಾಲೋಡು ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ನೂತನ ಶಾಲಾ ಕಟ್ಟಡಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ರಂಗಸಮುದ್ರ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸೋಲಾರ್ ಸಿಎಸ್‍ಆರ್ ಹಣವನ್ನು ಹೀಗೆ ವ್ಯಾಪ್ತಿ ಮೀರಿ ಬಳಕೆ ಮಾಡಲಾಗು ತ್ತಿದ್ದು, ಶಾಲಾಭಿವೃದ್ದಿ, ಕುಡಿಯುವ ನೀರು, ರಸ್ತೆ ಅಭಿವೃದ್ದಿ, ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಎಲ್ಲಾ ಇಲಾಖೆಗಳಿಗೂ ಅನುದಾನ ನೀಡುತ್ತಿದೆ. ದಲಿತ ಮತ್ತು ಹಿಂದುಳಿದ ವರ್ಗದ ಅಭಿವೃದ್ದಿಗೆ ಒತ್ತು ನೀಡಲಾಗು ತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾವಾರು ಕೌಶಲ್ಯ ತರಬೇತಿ ನೀಡಿ ಉದ್ಯೋಗಗಳನ್ನು ನೀಡಲಾಗುವುದು. ದೇಶದಲ್ಲಿ ಶೂನ್ಯ ಬಡ್ಡಿದರಲ್ಲಿ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಪಡುತ್ತೇನೆ. ವಿಶೇಷಚೇತನ ಮತ್ತು ವೃದ್ದಾಶ್ರಮಗಳ ಬಗ್ಗೆ ಗಮನ ಹರಿಸಲಾಗು ವುದು ಮತ್ತು ತುಮಕೂರು- ದಾವಣಗೆರೆ ರೈಲ್ವೆ ಕಾಮಗಾರಿಗೆ 1200 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಮುಂದಿನ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಕಛೇರಿಯನ್ನು ಆರಂಭಿಸ ಲಾಗುವುದು. ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಭದ್ರಾಮೇಲ್ದಂಡೆ ಯೋಜನೆಗೆ ಬೇಕಾದ ಅನುದಾನವನ್ನು ಮಂಜೂರು ಮಾಡಿಸಲಾಗುವುದು. ಚಿತ್ರದುರ್ಗ ಜಿಲ್ಲೆಯವನು ಫ್ಲೋರೈಡ್ ಮುಕ್ತವಾಗಿಸಲು ಪ್ರಯತ್ನಪಡುತ್ತೇನೆ. ವಿಶೇಷವಾಗಿ ಪಾವಗಡ ತಾಲ್ಲೂಕಿಗೆ ಸಿಸಿ ರಸ್ತೆ ಮತ್ತು ಸಿಎಸ್‍ಆರ್ ಹಣದಿಂದ ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲಾಗುವುದು ಎಂದು ತಿಳಿಸಿದರು.
ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಮಾತನಾಡಿ, ಅಮೇರಿಕಾದಲ್ಲಿ ಕಂಪನಿಗಳ ಲಾಭಾಂಶವನ್ನು ಮೊದಲಿಗೆ ಸ್ಥಳೀಯ ಅಭಿವೃದ್ದಿಗೆ ನೀಡಲಾಗುತ್ತಿದೆ. ನಮ್ಮಲ್ಲಿ ಶಾಸನದಲ್ಲಿ ಆದೇಶವಾದ ನಂತರ ಕಂಪನಿಗಳ ಲಾಭಾಂಶವನ್ನು ಸಮಾಜದ ಅಭಿವೃದ್ದಿಗೆ ಉಪಯೋಗಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಸೋಲಾರ್‍ನ ಸಿಎಸ್‍ಆರ್ ಫಂಡ್‍ನಿಂದ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮಾಂತರ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳಂತೆ ಹೆಚ್ಚು ಜ್ಞಾನಾರ್ಜನೆ ಹೊಂದಲು ಶಿಕ್ಷಕರು ಶ್ರಮ ವಹಿಸಬೇಕು. ವಿದ್ಯಾರ್ಥಿ ಗಳು ಸ್ವಾಭಿಮಾನಿಗಳಾಗಿ ಬದುಕುವ ಕಲೆಯನ್ನು ಶಿಕ್ಷಕರು ಕಲಿಸಬೇಕು ಎಂದು ತಿಳಿಸಿದರು.
ಶಾಸಕ ವೆಂಕಟರವಣಪ್ಪ ಮಾತನಾಡಿ, ಸೋಲಾರ್ ಸಿಎಸ್‍ಆರ್‍ನ 1 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗು ತ್ತಿದೆ. ಅಲ್ಲದೆ 251 ಶಾಲೆಗಳಲ್ಲಿ ಫ್ಯಾನ್ ಮತ್ತು ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. 2000 ರೈತರ ತ್ಯಾಗದ ಫಲದಿಂದ ಇಂದು ಸೋಲಾ ರ್ ಪಾರ್ಕ್ ನಿರ್ಮಾಣವಾಗಿದೆ. ಕಳೆದೆರಡು ವರ್ಷಗಳಿಂದ ತಾಲ್ಲೂ ಕಿಗೆ ಲೋಕೋಪಯೋಗಿ ಇಲಾಖೆಯಿಂದ ಹಾಗೂ ಜಿಲ್ಲಾ ಪಂಚಾ ಯತ್‍ನಿಂದ ನಯಾಪೈಸೆ ಮಂಜೂರಾಗಿಲ್ಲ. ತಾಲ್ಲೂಕು ಬರಪೀಡಿತ ವಾಗಿದ್ದು, ಚೆಕ್‍ಡ್ಯಾಂ ನಿರ್ಮಾಣ ಮತ್ತು ಕೊಳವೆ ಬಾವಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಮಾಧುಸ್ವಾಮಿಯವರು ಮತ್ತು ಭದ್ರಾ ಮೇಲ್ಧಂಡೆ ಯೋಜನೆಗೆ 200 ಕೋಟಿ ಅನುಧಾನವನ್ನು ಎ. ನಾರಾಯಣಸ್ವಾಮಿ ಮಂಜೂರು ಮಾಡಿಸಬೇಕು ಮತ್ತು ರೈತರ ಮಕ್ಕಳು ಉದ್ಯೋಗಕ್ಕಾಗಿ ಗಾರ್ಮೆಂಟ್‍ಗಳಿಗೆ ವಲಸೆ ಹೋಗುತ್ತಿದ್ದು, ಉದ್ಯೋಗಾವಕಾಶಕ್ಕಾಗಿ ಗುಡಿ ಕೈಗಾರಿಕೆಗಳನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಒ ಡಾ.ವಿದ್ಯಾ ಕುಮಾರಿ, ಎಪಿಎಂಸಿ ಅಧ್ಯಕ್ಷ ಮಾರಣ್ಣ, ಜಿಪಂ ಮಾಜಿ ಸದಸ್ಯ ಎಚ್.ವಿ.ವೆಂಕಟೇಶ್, ಸಿದ್ದಾಪುರ ಗ್ರಾಪಂ ಅಧ್ಯಕ್ಷ ನಾಗಣ್ಣ, ವದನಕಲ್ ಗ್ರಾಪಂ ಅಧ್ಯಕ್ಷೆ ನಾಗಮಣಿ, ಸೋಲಾರ್ ಸಿಇಓ ಶ್ರೀನಿವಾಸ್, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಮಧುಗಿರಿ ಎಸಿ ಸೋಮಪ್ಪ ಕಡಕೋಳ್ ಮತ್ತಿತರರು ಹಾಜರಿದ್ದರು.
ಕೇಂದ್ರ ಸಚಿವರಾಗಿ ಮೊದಲಬಾರಿಗೆ ಪಾವಗಡಕ್ಕೆ ಬಂದ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು. ಗುರುವಾರ ಬೆಳಗ್ಗೆ 11 ಘಂಟೆಗೆ ಶನಿಮಹಾತ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಶನಿಮಹಾತ್ಮ ಸರ್ಕಲ್‍ನಿಂದ ತೆರೆದ ವಾಹನದಲ್ಲಿ ಬಳ್ಳಾರಿ ರಸ್ತೆಯ ಮಾರ್ಗದಲ್ಲಿ ಪಟ್ಟಣದ ಟೋಲ್‍ಗೇಟ್‍ವರೆಗೂ ಮೆರವಣಿಗೆ ನಡೆಸಲಾಯಿತು. ಟೋಲ್‍ಗೇಟ್‍ನಲ್ಲಿರುವ ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
