ತುಮಕೂರು
ನೀರಿನ ಸಮಸ್ಯೆ ರಾಷ್ಟ್ರಾದ್ಯಂತ ಭೀಕರವಾಗುತ್ತಿದೆ. ಪ್ರಮುಖ ನಗರಗಳು ನೀರಿಲ್ಲದೆ ನರಳುತ್ತಿವೆ. ಚನೈನಲ್ಲಿ ನೀರಿಗಾಗಿ ಉಂಟಾಗಿರುವ ಹಾಹಾಕಾರ ಎಷ್ಟು ತೀವ್ರತೆ ಪಡೆದಿದೆ ಎಂಬುದನ್ನು ಮನಗಾಣಬೇಕು. ಅಂತಹ ಪರಿಸ್ಥಿತಿ ಇಲ್ಲಿಗೆ ಬರುವುದಕ್ಕಿಂತ ಮುನ್ನ ನಾವೆಲ್ಲರು ಎಚ್ಚೆತ್ತುಕೊಳ್ಳಬೇಕು. ಇರುವ ನೀರನ್ನು ಮಿತವಾಗಿ ಬಳಸಬೇಕು. ವಿನಾಕಾರಣ ನೀರು ಅಪವ್ಯಯ ಮಾಡುವವರಿಗೆ ಎಚ್ಚರಿಕೆ ನೀಡಬೇಕು. ಇದು ಪ್ರತಿಯೊಂದು ಮನೆಯಲ್ಲಿಯೂ ಆರಂಭವಾಗಬೇಕು.
ನೀರಿನ ಬಗ್ಗೆ ಜಾಗೃತಿ ಮೂಡಿಸುವುದು ಕೇವಲ ಸಂಬಂಧಿಸಿದ ಇಲಾಖೆಗಳ ಕೆಲಸವಲ್ಲ. ಇಲಾಖೆಗಳಿಂದ ಇದು ಸಾಧ್ಯವೂ ಇಲ್ಲ. ಸರ್ಕಾರದ ಒಂದಷ್ಟು ಹಣ ಖರ್ಚಾಗುತ್ತದೆಯೇ ಹೊರೆತು ವಾಸ್ತವವಾಗಿ ಜಾಗೃತಿ ಮೂಡುವುದಿಲ್ಲ. ಇದಕ್ಕೆ ಬದಲಾಗಿ ಸಂಘ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ನಾಗರೀಕ ಸಮೂಹದಿಂದಲೇ ನೀರಿನ ಜಾಗೃತಿ ಉಂಟಾಗಬೇಕು. ಇದಕ್ಕಾಗಿ ಶಾಲಾ ಕಾಲೇಜುಗಳನ್ನು ಬಳಕೆ ಮಾಡಿಕೊಳ್ಳಬೇಕು.
ಪ್ರತಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀರಿನ ಬಗ್ಗೆ ಅರಿವು ಮೂಡಿಸಿದರೆ ಶೇಕಡಾ 50ರಷ್ಟು ಸಾಧನೆ ಫಲಪ್ರದವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ವಿದ್ಯಾರ್ಥಿಗಳು ಇಂತಹ ವಿಷಯಗಳನ್ನು ತಿಳಿದುಕೊಂಡು ಅದರ ಆಚರಣೆಗೆ ಮುಂದಾಗುತ್ತಾರೆ. ತಮ್ಮ ಮನೆಯಲ್ಲಿಯೂ ಅನುಷ್ಠಾನಕ್ಕೆ ಮುಂದಾಗುತ್ತಾರೆ.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸಂಬಂಧಿಸಿದ ಶಿಕ್ಷಣ ಇಲಾಖೆಗಳು ಹೆಚ್ಚು ಶ್ರಮ ವಹಿಸಬೇಕು. ಆಯಾ ಶಾಲಾ ಕಾಲೇಜುಗಳೇ ಇದಕ್ಕಾಗಿ ಮುತುವರ್ಜಿ ವಹಿಸಬಹುದು. ಪಾಠ ಪ್ರವಚನದ ಸಂದರ್ಭದಲ್ಲಿ ಅಥವಾ ಒಂದು ಗಂಟೆ ಇದಕ್ಕಾಗಿಯೇ ಸಮಯ ಮೀಸಲಿರಿಸಿ, ನೀರಿನ ಬಗ್ಗೆ ಅಧ್ಯಯನ ನೀಡುವ ವ್ಯಕ್ತಿಯೊಬ್ಬರನ್ನು ಕರೆಯಿಸಿ ಬೋಧನೆ ಮಾಡಿಸಬಹುದು ಅಥವಾ ಶಿಕ್ಷಕರೇ ಕೆಲಸ ಮಾಡಿಸಬಹುದು. ಇದರ ಜೊತೆಗೆ ಸಂಘ ಸಂಸ್ಥೆಗಳು ನೀರಿನ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡರೆ ಮತ್ತೊಷ್ಟು ಅನುಕೂಲವಾಗುತ್ತದೆ.
ಪ್ರಸ್ತುತ ಆರಂಭಿಕ ಹಂತದಲ್ಲಿ ನೀರಿನ ಮಿತ ಬಳಕೆಯ ಬಗ್ಗೆ ಎಲ್ಲರಿಗೂ ತಿಳಿಸಿಕೊಡಬೇಕು. ಆ ನಂತರ ಮಳೆಯ ಸಂದರ್ಭದಲ್ಲಿ ಮಳೆ ನೀರನ್ನು ಸಂರಕ್ಷಿಸುವ ಬಗ್ಗೆ ಹೇಳಬೇಕು. ಬರಗಾಲದ ಸಂದರ್ಭದಲ್ಲಿ ಹಾಗೂ ಮಳೆಗಾಲದ ಸಂದರ್ಭದಲ್ಲಿ ನೀರಿನ ಸಂರಕ್ಷಣೆಯ ವಿಧಾನಗಳನ್ನು ತಿಳಿಸಿಕೊಡಬೇಕು. ಮಳೆ ಬಂದ ಕೂಡಲೇ ನೀರಿನ ಸಮಸ್ಯೆ ನಿಂತು ಹೋಯಿತು ಎಂದು ಬಹಳಷ್ಟು ಜನ ಅಂದುಕೊಳ್ಳುತ್ತಾರೆ.
ಆದರೆ ಮುಂದಿನ ದಿನಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಬೇಸಿಗೆ ದಿನಗಳು ಬಂದಾಗ ಎಲ್ಲರೂ ಪರಿತಪಿಸುತ್ತಾರೆ. ಅದಕ್ಕೆ ಬದಲು ಮಳೆಗಾಲದ ಸಂದರ್ಭದಲ್ಲಿ ನೀರಿನ ಸಂರಕ್ಷಣೆ ಹೇಗಿರಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡವರ ತನಕ ಮಾಹಿತಿ ನೀಡುವ ಕೆಲಸ ಕೈಗೊಳ್ಳಬೇಕು. ವಿಶೇಷವಾಗಿ ರೈತಾಪಿ ವರ್ಗಕ್ಕೆ ಮಾಹಿತಿ ನೀಡಬೇಕು. ಏಕೆಂದರೆ ನೀರನ್ನು ಖರ್ಚು ಮಾಡುವ ವಿಧಾನಗಳು ಅವರಿಗೆ ತಿಳಿದಿಲ್ಲ. ಪಟ್ಟಣಗಳಲ್ಲಿ ತಿಳಿದಿದ್ದರೂ ನೀರಿನ ಮಿತ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ.