ಬೆಂಗಳೂರು:
ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರದಿಂದ ವಿಶ್ರಾಂತಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಿರಂತರ ಸಭೆಗಳನ್ನು ನಡೆಸುವ ಮೂಲಕ ಪ್ರಸಕ್ತ ಸಾಲಿನ ರಾಜ್ಯ ಬಜೆಟ್’ಗೆ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ತಮ್ಮ 16ನೇ ಬಜೆಟ್ ಅನ್ನು ಮಂಡಿಸಲು ಸಜ್ಜಾಗಿರುವ ಸಿದ್ದರಾಮಯ್ಯ ಅವರು, ಗುರುವಾರ 13 ಇಲಾಖೆಗಳೊಂದಿಗೆ ದಿನವಿಡೀ ಸಭೆಗಳನ್ನು ನಡೆಸಿದರು,
ತಮ್ಮ ಅಧಿಕೃತ ನಿವಾಸದಲ್ಲಿ, ಸಿದ್ದರಾಮಯ್ಯ ಅವರು ಬೆಳಿಗ್ಗೆ 11.15 ರಿಂದ ಸಂಜೆ 7.45 ರವರೆಗೆ ಗೃಹ ಇಲಾಖೆ, ಬೃಹತ್ ಮತ್ತು ಸಣ್ಣ ಕೈಗಾರಿಕೆಗಳು, ಮೂಲಸೌಕರ್ಯ, ಇಂಧನ, ಪಿಡಬ್ಲ್ಯೂಡಿ, ಕಾರ್ಮಿಕ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಹಕಾರ, ರೇಷ್ಮೆ ಮತ್ತು ಪಶುಸಂಗೋಪನೆ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ವರ್ಷ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆಯಿದ್ದು, ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಮುಂದುವರಿಸಲು ಹೆಚ್ಚಿನ ಅನುದಾನವನ್ನು ಮೀಸಲಿಡಬೇಕಾಗಿದೆ.
ಕಳೆದ ವರ್ಷ ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಿಸದ ಕಾರಣ, ಈ ಬಾರಿ ಈ ಕುರಿತಂತೆಯೂ ಸರ್ಕಾರ ಘೋಷಣೆಗಳನ್ನು ಮಾಡುವ ನಿರೀಕ್ಷೆಗಳಿವೆ. ಹೆಚ್ಚುವರಿ ಆದಾಯವನ್ನು ಸಂಗ್ರಹಿಸಲು ಸರ್ಕಾರವು ಕೆಲವು ವರ್ಗಗಳ ತೆರಿಗೆಗಳನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕರು ಒತ್ತಡ ಹೇರುತ್ತಿದ್ದು, ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಮೀಸಲಿಡುವ ಒತ್ತಡ ಮಖ್ಯಮಂತ್ರಿಗಳ ಮೇಲಿದೆ. ಹೀಗಾಗಿ ಸಿದ್ಧತೆಗಳನ್ನು ಆರಂಭಿಸಿರುವ ಸಿದ್ದರಾಮಯ್ಯ ಅವರು, ಗುರುವಾರದಿಂದ ಬಜೆಟ್ ಪೂರ್ವ ಸಭೆ ಆರಂಭಿಸಿದ್ದು, ಫೆಬ್ರವರಿ 14 ರವರೆಗೆ ಸಭೆಗಳನ್ನು ನಡೆಯಲಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ತಮ್ಮ ಇಲಾಖೆಗೆ ಹೆಚ್ಚಿನ ಅನುದಾನವನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.ಹೊಸ ಯೋಜನೆಗಳಿಗೆ ಪ್ರಸ್ತಾವನೆ ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮತ್ತು ಅವರ ಇಲಾಖೆಯ ಅಧಿಕಾರಿಗಳು ಪ್ರಸ್ತಾವಿತ ಯೋಜನೆಗಳ ಬಗ್ಗೆ ಸಿಎಂಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆಂದು ತಿಳಿಸಿದರು.ಬಜೆಟ್ ಮಂಡನೆ ಮಾರ್ಚ್ 7 ರಂದು ನಡೆಯುವ ಸಾಧ್ಯತೆಯಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಮಾಹಿತಿ ನೀಡಿದೆ
