ಬೆಂಗಳೂರು :

ಹೆದ್ದಾರಿಗಳಲ್ಲಿ ಟೋಲ್ ಹೆಸರಿನಲ್ಲಿ ಸುಲಿಗೆ ನಡೆಯುತ್ತಿದೆ. ಇದನ್ನು ತಕ್ಷಣ ತಡೆಗಟ್ಟಿ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ ಬೆಳವಣಿಗೆ ವಿಧಾನಸಭೆಯಲ್ಲಿಂದು ನಡೆಯಿತು.
ಶೂನ್ಯ ವೇಳೆಯಲ್ಲಿ ಶಾಸಕರಾದ ಇಟ್ನಾಳ್,ಜಿ.ಪರಮೇಶ್ವರ್,ಯು.ಟಿ.ಖಾದರ್,ವೆಂಕಟರಾವ್ ನಾಡಗೌಡ ಸೇರಿದಂತೆ ಹಲವರು ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಅವರನ್ನು ಬೆಂಬಲಿಸಿ ಸಿದ್ಧರಾಮಯ್ಯ ಮಾತನಾಡಿದರು.
ನಿಯಮಾವಳಿಯ ಪ್ರಕಾರ ಒಂದು ಟೋಲ್ ಪ್ಲಾಜಾ ಹಾಗೂ ಮತ್ತೊಂದು ಟೋಲ್ ಪ್ಲಾಜಾ ನಡುವೆ ಕನಿಷ್ಟ ಅರವತ್ತು ಕಿಲೋಮೀಟರುಗಳ ಅಂತರವಿರಬೇಕು ಎಂದರು. ಆದರೆ ಈಗ ಪರಿಸ್ಥಿತಿ ಹೇಗಿದೆ ಎಂದರೆ ಕೆಲವು ಕಡೆ ಏಳು ಕಿಲೋಮೀಟರು ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳು ಇವೆ. ಕೆಲವು ಕಡೆ ಹನ್ನೊಂದು, ಇಪ್ಪತ್ಮೂರು ಕಿಲೋಮೀಟರುಗಳ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳಿವೆ.
ಹೀಗೆ ನಿಯಮಗಳನ್ನು ಮೀರಿ ಅಗತ್ಯಕ್ಕಿಂತ ಹೆಚ್ಚು ಟೋಲ್ ಸಂಗ್ರಹಿಸುವುದು ಸರಿಯಲ್ಲ. ರಸ್ತೆಗಳನ್ನು ನಿರ್ವಹಿಸಲು ಟೋಲ್ ಪಡೆಯಬೇಕು ನಿಜ. ಆದರೆ ಅದು ಸುಲಿಗೆಯಾಗಬಾರದು. ಈ ಸದನದಲ್ಲಿ ಎಲ್ಲರೂ ವ್ಯಕ್ತಪಡಿಸುತ್ತಿರುವ ಆಕ್ರೋಶವನ್ನು ನೋಡಿದರೆ ಸುಲಿಗೆ ನಡೆಯುತ್ತಿದೆ ಎಂಬುದು ನಿಶ್ಚಿತವಾಗಿದೆ ಎಂದರು.
ಈ ಹಂತದಲ್ಲಿ ಪರಮೇಶ್ವರ್ ಅವರು ಮಾತನಾಡಿ, ನೀವು ವಾಹನಗಳಿಗೆ ಅಜೀವ ತೆರಿಗೆ ಪಡೆಯುತ್ತೀರಿ. ಹೆದ್ದಾರಿಗಳಲ್ಲೂ ಶುಲ್ಕ ಪಡೆಯುತ್ತೀರಿ. ಹೀಗೆ ಎರಡೆರಡು ಸಲ ವಾಹನಗಳಿಂದ ತೆರಿಗೆ ಪಡೆಯುವುದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದರು.
ಇದಕ್ಕುತ್ತರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ : ಹೆದ್ದಾರಿಗಳನ್ನು ನಿರ್ಮಿಸಲು ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿವಿಧ ಮೂಲಗಳಿಂದ ಸಾಲ ಪಡೆಯಲಾಗಿದೆ. ಈಗ ಆ ಸಾಲ ಮರುಪಾವತಿ ಮಾಡಲು ಜನರಿಂದಲೇ ಹಣ ಪಡೆಯಬೇಕು ಎಂದು ಸಮರ್ಥಿಸಿಕೊಂಡರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








