ಬೆಂಗಳೂರು :
ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯ ಕಾರಣದಿಂದ ಕೆಂಗೇರಿ ಮೋರಿ ತಡೆಗೋಡೆ ಕುಸಿದು ರಸ್ತೆಯೆಲ್ಲಾ ನದಿಯಂತಾಗಿದೆ.
ಬೆಂಗಳೂರಿನ, ಕಾರ್ಪೊರೇಷನ್, ಶಿವಾಜಿನಗರ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಆರ್. ಮಾರುಕಟ್ಟೆ , ಮೆಜೆಸ್ಟಿಕ್, ಕತ್ರಿಗುಪ್ಪೆ, ಉತ್ತರಹಳ್ಳಿ, ಶಂಕರ ಮಠ, ಮೈಸೂರ್ ರೋಡ್, ಕೆಂಗೇರಿ ಸೇರಿದಂತೆ ನಗರದ ಹಲವು ಕಡೆ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಪ್ರಯಾಣಿಕರು, ರಸ್ತೆ ಬದಿ, ಮರಗಳಡಿ ನಿಂತು ಆಶ್ರಯ ಪಡೆಯುವಂತಾಗಿದೆ.
ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಂಗೇರಿ ಉಪನಗರ ರಸ್ತೆಯ ಮೂಲಕ ಬೆಂಗಳೂರು ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೈಸೂರಿಗೆ ತೆರಳುವ ವಾಹನಗಳು ನಾಯಂಡಳ್ಳಿ ತಿರುವು ಪಡೆದು ನೈಸ್ ರಸ್ತೆ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ನೀರಿನ ಹರಿವು ಕಡಿಮೆಯಾಗದೇ ದುರಸ್ಥಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾತ್ರಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈಗ ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ.
ರಾಜ್ಯದಲ್ಲಿ 5 ದಿನ ಭಾರೀ ಮಳೆಯಾಗುತ್ತದೆ ಎಂದು ಮೊನ್ನೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅದರಂತೆ, ನಿನ್ನೆ ಇವತ್ತು ಬೆಂಗಳೂರಿನಲ್ಲಿ ಮಳೆಯಾಗಿದೆ. ಮುಂದಿನ ಮೂರು ದಿನಗಳೂ ಸಹ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ