ಮಂಗಳೂರು: ಅನರ್ಹ ಶಾಸಕರು ಬಿಜೆಪಿ ಸದಸ್ಯತ್ವ ಪಡೆದ ಬಳಿಕ ಅವರಿಗೆ ಉಪ ಚುಣಾವಣೆಯ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಯಾರೂ ಇಲ್ಲಿವರೆಗೆ ಬಿಜೆಪಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿಲ್ಲ. ಅವರು ಬಿಜೆಪಿ ಸದಸ್ಯತ್ವ ಪಡೆದ ಬಳಿಕ ಅವರಿಗೆ ಉಪ ಚುಣಾವಣೆಯ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹೇಳಿದರು.
ಪಕ್ಷದ ಸಿದ್ಧಾಂತ ಪ್ರಕಾರ ಅಭ್ಯರ್ಥಿ ಆಯ್ಕೆ ಕುರಿತು ಕ್ಷೇತ್ರದ ಕಾರ್ಯಕರ್ತರ ಮಟ್ಟದಲ್ಲಿ ಚರ್ಚೆ ನಡೆದು ರಾಜ್ಯ ಸಮಿತಿಗೆ ಶಿಫಾರಸು ಕಳುಹಿಸಬೇಕು. ಬಳಿಕ ಕೇಂದ್ರ ಸಮಿತಿಯಿಂದ ಅಂತಿಮವಾಗಿ ಹೆಸರು ಘೋಷಿಸಲ್ಪಡುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಉಪ ಚುನಾವಣೆ ನಡೆಯುವ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 70 ವರ್ಷಗಳಿಂದ ಕಾಶ್ಮೀರದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ಜನರಿಗೆ ಮೀಸಲಾತಿ ನಿರಾಕರಿಸಲಾಗಿತ್ತು. ಈ ಮೂರು ವರ್ಗಗಳಲ್ಲಿ ಒಳಪಡುವ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಕಾಶ್ಮೀರದಲ್ಲಿ ಇದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370 ನೇ ವಿಧಿ ರದ್ದುಪಡಿಸುವ ಮೂಲಕ ಅಲ್ಲಿನ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ವಿಭಾಗದ ಜನರಿಗೆ ಮೀಸಲಾತಿ ಸೌಲಭ್ಯ ದೊರೆಯಲಿದೆ. ಕಾಶ್ಮೀರದಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದು, ಮುಂಜಾಗರೂಕತಾ ಕ್ರಮವಾಗಿ ಬಂಧಿಸಲಾಗಿದ್ದ ಸುಮಾರು ನಾಲ್ಕು ಸಾವಿರ ಜನರಲ್ಲಿ 3500 ಜನರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್, ಕಮ್ಯೂನಿಸ್ಟ್ ಮುಖಂಡರು ಕಾಶ್ಮೀರದ ಕುರಿತು ಜಗತ್ತಿಗೆ ಋಣಾತ್ಮಕ ಚಿತ್ರಗಳನ್ನು ತೋರಿಸಲು ಯತ್ನಿಸುತ್ತಿದ್ದಾರೆ ಎಂದು ಮುರಳೀಧರ ರಾವ್ ಟೀಕಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ