ಬೆಂಗಳೂರು :
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಖಾಸಗೀ ಕಾರ್ಯಕ್ರಮದ ನಿಮಿತ್ತ 10 ದಿನಗಳ ಕಾಲ ಅಮೇರಿಕಾಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು, ಇದು ಖಾಸಗಿ ಪ್ರವಾಸವಾಗಿರುವುದಾಗಿ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.
ಜೂನ್ 30 ರಂದು ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಆದಿಚುಂಚನಗಿರಿಯ ಮಠದ ಶಾಖಾ ಮಠದಲ್ಲಿ ನಿರ್ಮಿಸಿರುವ ಕಾಲಭೈರವೇಶ್ವರ ದೇವಸ್ಥಾನದ ದೇಗುಲ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಮಂತ್ರಣ ನೀಡಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ಸಿಎಂ ಶುಕ್ರವಾರ ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿದ್ದಾರೆ.
ಇದಾದ ಬಳಿಕ ಜುಲೈ 4ರಂದು ಅಮೆರಿಕ ಒಕ್ಕಲಿಗರ ಪರಿಷತ್ತಿನ ಸಮಾವೇಶ ಕೂಡ ನಡೆಯಲಿದ್ದು, ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳನ್ನು ಮುಗಿಸಿ, ಜುಲೈ 7ಕ್ಕೆ ಅಮೇರಿಕಾದಿಂದ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ. ಜೊತೆಗೆ ಇದು ಖಾಸಗಿ ಪ್ರವಾಸ ಎಂದು ಸಹ ಮೂಲಗಳಿಂದ ತಿಳಿದು ಬಂದಿದೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮುಗಿಸಿದ ಬಳಿಕ, ಇಂದಿನಿಂದ 10 ದಿನಗಳ ಕಾಲ ಅಮೇರಿಕಾಕ್ಕೆ ಖಾಸಗಿ ಪ್ರವಾಸ ಕೈಗೊಳ್ಳಲಿದ್ದಾರೆ.