ನಾವೆಲ್ಲರೂ ಹೆಚ್ಚಾಗಿ ತ್ವಚೆಯ ಆರೈಕೆಯೆಂದರೆ ಅದು ಮುಖದ ಅಂದ ಎಂದು ಅಂದುಕೊಂಡಿರುತ್ತೇವೆ. ಆದರೆ ತ್ವಚೆ ಎಂದರೆ ಕೇವಲ ಮುಖ ಮಾತ್ರವಲ್ಲ. ನಮ್ಮ ದೇಹದ ಸಂಪೂರ್ಣ ಚರ್ಮವನ್ನು ಒಳಗೊಂಡಿದೆ. ನಮ್ಮ ಸೌಂದರ್ಯದಲ್ಲಿ ಎದ್ದು ಕಾಣುವುದು ಮುಖವಾದರೂ ದೇಹದ ಬೇರೆ ಭಾಗಗಳ ಬಗ್ಗೆ ಕೂಡ ಗಮನಹರಿಸುವುದು ಅತೀ ಅಗತ್ಯವಾಗಿರುವುದು. ಕೈ ಹಾಗೂ ಕಾಲುಗಳ ಕಡೆ ಕೂಡ ಗಮನ ನೀಡಬೇಕು. ಯಾಕೆಂದರೆ ಹೆಚ್ಚಾಗಿ ಬಿಸಿಲಿಗೆ ಒಡ್ಡಲ್ಪಡುವುದು ಕೈಗಳು. ಇಷ್ಟು ಮಾತ್ರವಲ್ಲದೆ ಮಹಿಳೆಯರು ಬಟ್ಟೆ ಒಗೆಯುವಾಗ, ಮನೆಯನ್ನು ಸ್ವಚ್ಛಗೊಳಿಸುವಾಗ ಮತ್ತು ಅಡುಗೆ ಇತ್ಯಾದಿ ಕೆಲಸಗಳನ್ನು ಮಾಡುವಾಗ ಕೂಡ ಕೈಗಳು ಪ್ರಮುಖ ಪಾತ್ರ ವಹಿಸುವುದು. ಇದರಿಂದಾಗಿ ಕೆಲವೊಂದು ಸಲ ಕೈಗಳ ಚರ್ಮವು ಒಣಗುವುದು ಹಾಗೂ ಗಡುಸಾಗಿ, ಬಿರುಕು ಬಿಡುವುದು ಮತ್ತು ಒಡೆದುಹೋಗುವುದು.
ಒಣ ಹಾಗೂ ಬಿರುಕು ಬಿಟ್ಟ ಕೈಗಳು ತುಂಬಾ ನಿಸ್ತೇಜವಾಗಿ ಕಾಣೀಸುವುದು ಮತ್ತು ಇದು ನಿಮ್ಮ ಸಂಪೂರ್ಣ ದೇಹದ ಸೌಂದರ್ಯದ ಮೇಲೆ ಪರಿಣಾಮ ಬೀರುವುದು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೀವು ಪ್ರಯತ್ನಿಸಿರಬಹುದು. ಇದಕ್ಕಾಗಿ ಈ ಲೇಖನದಲ್ಲಿ ಸರಳವಾಗಿ ಮನೆಮದ್ದನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ.
ಗುಲಾಬಿ ಮತ್ತು ಲಿಂಬೆ ಕ್ರೀಮ್:
ಇದಕ್ಕೆ ಬೇಕಾಗಿರುವಂತಹ ಸಾಮಗ್ರಿಯೆಂದರೆ ಕೆಲವು ತಾಜಾ ಗುಲಾಬಿ ದಳಗಳು ಮತ್ತು ಲಿಂಬೆ ಸಿಪ್ಪೆ. ಒಂದು ಕಪ್ ಆಲಿವ್ ತೈಲವನ್ನು ಗಾಜಿನ ಜಾರ್ ಗೆ ಹಾಕಿ. ಇದಕ್ಕೆ ಗುಲಾಬಿ ದಳಗಳನ್ನು ಹಾಗೂ ಲಿಂಬೆ ಸಿಪ್ಪೆಯನ್ನು ಹಾಕಿ ಸುಮಾರು ಒಂದು ವಾರ ತನಕ ನೀವು ಇದನ್ನು ತುಂಬಾ ತಣ್ಣಗಿನ ಜಾಗದಲ್ಲಿ ಇಡಿ. ಒಂದು ವಾರ ಬಳಿಕ ಎಣ್ಣೆಯನ್ನು ಸೋಸಿಕೊಳ್ಳಿ. ಪ್ರತಿನಿತ್ಯ ನೀವು ಕೈಗಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸವು ಕಂಡುಬರುವುದು.
ಅಡುಗೆ ಸೋಡಾ ಮತ್ತು ತೆಂಗಿನೆಣ್ಣೆ ಸ್ಕ್ರಬ್ :
ಕೈಗಳು ತುಂಬಾ ನಿಸ್ತೇಜ ಹಾಗೂ ಕಪ್ಪಾಗಿ ಕಾಣುವಂತಹ ಚರ್ಮದ ಸತ್ತ ಕೋಶಗಳನ್ನು ತೆಗೆಯುವಲ್ಲಿ ಅಡುಗೆ ಸೋಡಾವು ಪ್ರಮುಖ ಪಾತ್ರ ವಹಿಸುವುದು. ತೆಂಗಿನೆಣ್ಣೆಯು ಆಳವಾಗಿ ಪೋಷಣೆ ಹಾಗೂ ಮೊಶ್ಚಿರೈಸ್ ಮಾಡುವುದು. ಒಂದು ಪಿಂಗಾಣಿಯಲ್ಲಿ ¼ ಕಪ್ ಅಡುಗೆ ಸೋಡಾ ಮತ್ತು ½ ಕಪ್ ತೆಂಗಿನೆಣ್ಣೆ ಹಾಕಿಕೊಳ್ಳಿ. ತೆಂಗಿನೆಣ್ಣೆಯು ದ್ರವ ರೂಪದಲ್ಲಿದ್ದರೆ ಇದನ್ನು ಸ್ವಲ್ಪ ಬಿಸಿ ಮಾಡಿ ಬಳಸಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರ ಮಾಡಿ. ಇದನ್ನು ಕೈಗಳಿಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಸ್ಕ್ರಬ್ ಮಾಡಿಕೊಳ್ಳಿ. ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ. ಅಂತಿಮವಾಗಿ ಉಗುರುಬೆಚ್ಚಗಿನ ನೀರು ಬಳಸಿಕೊಂಡು ಸ್ಕ್ರಬ್ ಮಾಡಿಕೊಳ್ಳಿ.
ಕಾಫಿ ಮತ್ತು ದ್ರಾಕ್ಷಿಬೀಜದ ಎಣ್ಣೆ :
ಕಾಫಿಯು ನೈಸರ್ಗಿಕವಾಗಿ ಕಿತ್ತೊಗೆಯುವ ಗುಣವನ್ನು ಹೊಂದಿದ್ದು. ಇದು ಚರ್ಮದ ಸತ್ತ ಕೋಶಗಳನ್ನು ಕಿತ್ತು ಹಾಕಿ ಚರ್ಮದ ಕಾಂತಿ ಹೆಚ್ಚಿಸುವುದು. ಅದೇ ರೀತಿಯಲ್ಲಿ ದ್ರಾಕ್ಷಿ ಬೀಜದ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡಾಗ ಇದು ಚರ್ಮವನ್ನು ತುಂಬಾ ನಯ ಹಾಗೂ ಸುಂದರವಾಗಿಸುವುದು.
ಮೂರು ಚಮಚ ಕಾಫಿ ಹುಡಿ ಮತ್ತು ಒಂದು ಚಮಚ ದ್ರಾಕ್ಷಿಬೀಜದ ಎಣ್ಣೆಯನ್ನು ಒಂದು ಪಿಂಗಾಣಿಗೆ ಹಾಕಿ. ಇದನ್ನು ಒಣ ಹಾಗೂ ಒಡೆ ಕೈಗಳಿಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. 2-3 ನಿಮಿಷ ಕಾಲ ಕೈಬೆರಳುಗಳನ್ನು ಬಳಸಿಕೊಂಡು ಮಸಾಜ್ ಮಾಡಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.
ಕಲ್ಲುಪ್ಪು ಮತ್ತು ಜೊಜೊಬಾ ಎಣ್ಣೆ :
ಒಣ ಹಾಗೂ ಒಡೆದ ಚರ್ಮಕ್ಕೆ ಕಲ್ಲುಪ್ಪು ಅತ್ಯಂತ ಉತ್ತಮವಾಗಿರುವ ಪರಿಹಾರವಾಗಿದೆ. ಇದು ಚರ್ಮಕ್ಕೆ ಶಮನ ನೀಡುವುದು ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ½ ಕಪ್ ಕಲ್ಲುಪ್ಪಿಗೆ ¼ ಕಪ್ ಜೊಜೊಬಾ ಎಣ್ಣೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೈಗಳಿಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ತೊಳೆಯಿರಿ. ಉಗುರುಬೆಚ್ಚಗಿನ ನೀರು ಬಳಸಿಕೊಂಡು ನೀವು ಕೈಗಳನ್ನು ತೊಳೆಯಿರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ