ಬೆಂಗಳೂರು :
ಕಾಂಗ್ರೆಸ್ ನವರು ಬುರ್ಖಾ ಹಾಕಿಕೊಂಡು ಜನರ ಬಳಿ ಮತ ಕೇಳುವ ಪರಿಸ್ಥಿತಿ ಬಂದೊದಗಿಗಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.
ಅವರು ಇಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವೀರಾಂಜನೇಯ ದೇವಸ್ಥಾನದ ಸಮೀಪ ಮಂಗಳವಾರ ಬೆಳಿಗ್ಗೆ ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವೇಳೆ ಮೋದಿ ಮುಖವಾಡ ಹಾಕಿಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಸದಾನಂದಗೌಡರು, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ನಾವು ಮತ ಯಾಚಿಸುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸಿಗರು ಬುರ್ಖಾ ಹಾಕಿಕೊಂಡು ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರೇಳಿಕೊಂಡು ಮತಯಾಚಿಸಲಿ ಎಂದು ವ್ಯಂಗ್ಯವಾಡಿದರು.
ಕ್ಷೇತ್ರಕ್ಕೆ ನಾನು ಮಾಡಿದ ಕೆಲಸಗಳು ಮತ್ತು ನರೇಂದ್ರ ಮೋದಿಯವರು ಮಾಡಿದ ಅಭಿವೃದ್ಧಿ ಹೆಸರಿನಲ್ಲಿ ನಾವು ಮತ ಯಾಚಿಸುತ್ತೇವೆ. ಆದರೆ ಕಾಂಗ್ರೆಸಿಗರು ಯಾವುದೇ ವಿಷಯಗಳಿಲ್ಲದಿರುವುದರಿಂದ ಟೀಕೆ ಮಾಡುವುದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇದನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ