ಬೆಂಗಳೂರು:
ಅಂಬರೀಷ್ ಅವರ ಆಸೆಯಂತೆ ಮೈಸೂರಿನಲ್ಲಿ ‘ಫಿಲ್ಮಂಸಿಟಿ’ ಆಗಬೇಕು. ಅದಕ್ಕೆ ಅಂಬರೀಷ್ ಅವರ ಹೆಸರನ್ನೆ ಇಡಬೇಕು’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಫಿಲಂ ಚೇಂಬರ್ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲೇ ಎಚ್‍ಡಿಕೆಯಲ್ಲಿ ಮನವಿ ಮಾಡಿಕೊಂಡರು. ಮೈಸೂರಿನಲ್ಲೇ ಫಿಲಂ ಸಿಟಿ ಮಾಡುವ ಸಿದ್ದರಾಮಯ್ಯ ಅವರ ಮನವಿಯನ್ನು ಎಚ್‍ಡಿಕೆ ಸ್ವೀಕರಿಸಿದ್ದಾರೆ. ಮೈಸೂರಿನಲ್ಲೇ ಫಿಲಂ ಸಿಟಿ ಮಾಡುವುದಾಗಿ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ.
ಅಂಬರೀಶ್ ನನಗೆ ಸುದೀರ್ಘ ಕಾಲದ ಗೆಳೆಯ. ಅವರ ಮಾತು ಒರಟಾದರೂ, ಹೃದಯದಿಂದ ಶ್ರೀಮಂತರಾಗಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ, ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಶಿವಣ್ಣ, ಅಪ್ಪು, ಯಶ್, ದರ್ಶನ್, ಸುದೀಪ್, ಜೈಜಗದೀಶ್, ದೊಡ್ಡಣ್ಣ ಸೇರಿದಂತೆ ಇಡೀ ಚಿತ್ರರಂಗವೇ ಪಾಲ್ಗೊಂಡಿದೆ. ಜೊತೆಗೆ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿ. ಸೋಮಣ್ಣ ಸೇರಿದಂತೆ ಹಲವು ಶಾಸಕರು ಭಾಗಿ ಆಗಿದ್ದಾರೆ. ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರು ಅಂಬಿ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅಗಲಿದ ರೆಬೆಲ್‍ಸ್ಟಾರ್‍ಗೆ ನುಡಿ ನಮನ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
