ಶ್ರೀನಗರ:
ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿನ್ನೆ ಭಾನುವಾರ ಸಂಜೆ ನಡೆದ ಉಗ್ರರ ದಾಳಿ ಕಣಿವೆ ರಾಜ್ಯದಲ್ಲಿ ಜನರ ಸುರಕ್ಷತೆ ಬಗ್ಗೆ ಮತ್ತೆ ಆತಂಕವನ್ನುಂಟುಮಾಡಿದೆ.
ಒಂದೆಡೆ ರಾಷ್ಟ್ರಪತಿ ಭವನದಲ್ಲಿ ನಿನ್ನೆ ಸಾಯಂಕಾಲ ನರೇಂದ್ರ ಮೋದಿ ಹಾಗೂ ಸಚಿವರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದರೆ ಇನ್ನೊಂದೆಡೆ ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಈ ಭಯೋತ್ಪಾದಕ ದಾಳಿ ನಡೆದಿದ್ದು, ಶಿವಖೋಡಿಯಿಂದ ಕತ್ರಾಗೆ ತೆರಳುತ್ತಿದ್ದ ಬಸ್ ಮೇಲೆ ಉಗ್ರರು ಸುಮಾರು 30ರಿಂದ 40 ಸುತ್ತು ಗುಂಡು ಹಾರಿಸಿದ್ದಾರೆ.
ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಬಸ್ ಚಾಲಕನಿಗೆ ಬುಲೆಟ್ ತಗುಲಿದ್ದು, ಇದರ ಪರಿಣಾಮ ಚಾಲಕ ವಾಹನದ ಮೇಲೆ ಸಮತೋಲನ ಕಳೆದುಕೊಂಡು ಬಸ್ ಆಳವಾದ ಕಂದಕಕ್ಕೆ ಬಿದ್ದಿದೆ. ಬಸ್ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಯಾತ್ರಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ನಾರಾಯಣ ಆಸ್ಪತ್ರೆ ಮತ್ತು ರಿಯಾಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.
ನಿನ್ನೆ ಭಯೋತ್ಪಾದಕರು ಬಸ್ ಮೇಲೆ ದಾಳಿ ಮಾಡಿದ ನಂತರ ಭಾರತೀಯ ಸೇನೆಯು ರಿಯಾಸಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಉಗ್ರರು ಪಾಕಿಸ್ತಾನ ಮೂಲದವರಾಗಿದ್ದಾರೆ ಎಂಬುದು ತಿಳಿದುಬಂದಿದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಕೂಡ ಸ್ಥಳಕ್ಕೆ ಆಗಮಿಸಿದೆರಿಯಾಸಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದು ಉಗ್ರರ ಕುಕೃತ್ಯವಾಗಿರುವುದರಿಂದ ಬಸ್ ಮೇಲೆ ದಾಳಿ ನಡೆಸಿದ ಸ್ಥಳಕ್ಕೆ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ಆಗಮಿಸಿದೆ. ಈಗ ಡ್ರೋನ್ ಮೂಲಕ ಇಡೀ ಕಾಡನ್ನು ಸುತ್ತುವರೆಯಲಾಗಿದೆ, ಅಲ್ಲಿ ಎಲ್ಲಾದರೂ ಉಗ್ರರ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ಲಭ್ಯವಾಗುತ್ತದೆ. ಅಪಘಾತಕ್ಕೀಡಾದ ಬಸ್ ಶಿವ ಖೋಡಿಯಿಂದ ಹಿಂತಿರುಗುತ್ತಿತ್ತು. ಯಾತ್ರಾರ್ಥಿಗಳು ಶಿವಖೋಡಿಯಲ್ಲಿ ಭೋಲೆ ಬಾಬಾನ ದರ್ಶನ ಪಡೆದು ಕತ್ರಾಗೆ ಹಿಂತಿರುಗುತ್ತಿದ್ದರು.
ಉತ್ತರ ಪ್ರದೇಶದ ಹತ್ರಾಸ್‌ನಿಂದ ಬಂದ ಬಸ್‌ನೊಂದು ರಸ್ತೆಯಿಂದ ಹೊರಬಿದ್ದು ನೆರೆಯ ಅಖ್ನೂರ್ ಜಿಲ್ಲೆಯಲ್ಲಿ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಒಂಬತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 22 ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡು 57 ಮಂದಿ ಗಾಯಗೊಂಡ 10 ದಿನಗಳ ನಂತರ ಈ ಘಟನೆ ನಡೆದಿದೆ.
ಯಾತ್ರಿಕರ ಮೇಲೆ ಉಗ್ರರ ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ನಡೆದ ಭಯೋತ್ಪಾದಕರ ದಾಳಿಯಿಂದ ನಾನು ದುಃಖಿತನಾಗಿದ್ದೇನೆ. ಈ ಕ್ರೂರ ಕೃತ್ಯವು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಮತ್ತು ಇದನ್ನು ಪ್ರಬಲ ಪದಗಳಲ್ಲಿ ಖಂಡಿಸಬೇಕು. ಸಂತ್ರಸ್ತರ ಕುಟುಂಬಗಳೊಂದಿಗೆ ರಾಷ್ಟ್ರ ನಿಂತಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
