ತುಮಕೂರು:
ಹಾಡಹಗಲೇ ಕಡಿದು ಸಾಗಿಸುತ್ತಿದ್ದರೂ ಇಲಾಖೆಗಳ ಜಾಣಮೌನ
ಕಳೆದ ಮೂರು ದಿನಗಳಿಂದ ತುಮಕೂರು ಆದರ್ಶನಗರ, ಕುವೆಂಪುನಗರ, ಹನುಮಂತಪುರ ಬಳಿ ಬೆಳೆದು ನಿಂತ ಬೃಹತ್ ಗಾತ್ರದ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಹಾಡಹಗಲೇ ಮರಗಳಿಗೆ ಕೊಡಲಿ ಏಟು ಬೀಳುತ್ತಿದ್ದರೂ ಈ ಬಗ್ಗೆ ಪ್ರಶ್ನಿಸುವವರೇ ಇಲ್ಲದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಅದಕ್ಕೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಹಾಗಾದರೆ ಈ ಬೃಹತ್ ಗಾತ್ರದ, ಸಾರ್ವಜನಿಕರಿಗೆ ನಿರುಪದ್ರವಿಗಳಾದ ಈ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಅನುಮತಿ ಕೊಟ್ಟವರ್ಯಾರು?
ಆದರ್ಶನಗರದಲ್ಲಿ ಮೂರನೇ ಕ್ರಾಸ್ ಆಸುಪಾಸಿನಲ್ಲಿ ಮೂರು ಮರಗಳನ್ನು ಕಡಿಯಲಾಗಿದೆ. ಹನುಮಂತಪುರ- ಕುವೆಂಪುನಗರ ಸಂಪರ್ಕಿಸುವ ಮುಖ್ಯ ರಸ್ತೆಯ ಬದಿಯಲ್ಲಿದ್ದ ಏಳು ಮರಗಳನ್ನು ಕಟಾವು ಮಾಡಲಾಗಿದೆ. ಒಟ್ಟು ಒಂಭತ್ತು ಮರಗಳು ಮೂರು ದಿನಗಳ ಅಂತರದಲ್ಲಿ ನೆಲಕ್ಕುರುಳಿವೆ.
ಮಹಾಘನಿ, ಸ್ಪಾತೋಡಿಯಾ, ಮಳೆಮರ ಸೇರಿದಂತೆ ಇತರೆ ಜಾತಿಯ ಮರಗಳು ಬಲಿಯಾಗಿವೆ. ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಮರಗಳಿವು. ಸಾರ್ವಜನಿಕರಿಗೆ ಅಥವಾ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದಲ್ಲಿ ಅಂತಹ ಮರಗಳನ್ನು ಕಡಿಯಲು ಯಾರದೆ ಅಭ್ಯಂತರವಿಲ್ಲ. ಆದರೆ ಯಾರಿಗೂ ತೊಂದರೆಯಾಗದ ಮರಗಳನ್ನು ಕಡಿಯಲು ಅನುಮತಿ ನೀಡಿದವರು ಯಾರು ಎನ್ನುತ್ತಾರೆ ಪ್ರಜ್ಞಾವಂತರು.
ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಬಿ.ಎಚ್.ರಸ್ತೆಯ ಸಿದ್ಧಗಂಗಾ ಬಸ್ ನಿಲ್ದಾಣ ಬಳಿಯ ರಸ್ತೆ ಡಿವೈಡರ್ ನಡುವೆ ಏಳೆಂಟು ಬೇವಿನ ಮರಗಳನ್ನು ಕಡಿದು ಹಾಕಲಾಗಿತ್ತು. ರಾತ್ರೋರಾತ್ರಿ ಕಳ್ಳತನದ ರೀತಿಯಲ್ಲಿ ಈ ಮರಗಳು ಕೊಡಲಿಗೆ ಬಲಿಯಾಗಿದ್ದವು. ಪ್ರಜಾಪ್ರಗತಿ ಸಿಬ್ಬಂದಿ ಗಮನಿಸಿ ಇನ್ನೂ ಹೆಚ್ಚಿನ ಮರಗಳು ಕಟಾವು ಆಗುವುದನ್ನು ತಡೆದಿದ್ದರು. ಪ್ರಜಾಪ್ರಗತಿ ರಾತ್ರಿ ಪಾಳಿಯ ಸಿಬ್ಬಂದಿ ಗುಂಪುಗೂಡುತ್ತಿದ್ದಂತೆ ಅಂದು ಮರ ಕಟಾವು ಮಾಡುತ್ತಿದ್ದ ಸಿಬ್ಬಂದಿ ಕಾಲ್ಕಿತ್ತಿದ್ದರು.
ಹೀಗೆ ನಗರದ ವಿವಿಧೆಡೆಗಳಲ್ಲಿ ಮರ ಕಡಿಯುವ ಪ್ರಕರಣಗಳು ನಡೆಯುತ್ತಲೇ ಇವೆ. ದುರಂತವೆಂದರೆ ಮರಗಳ ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಾತನಾಡುವ ಕೆಲವು ಸಾರ್ವಜನಿಕರು ತಮ್ಮ ಕಣ್ಣೆದುರಿಗೆ ಮರಗಳ ಮಾರಣ ಹೋಮವಾಗುತ್ತಿದ್ದರೂ ಪ್ರಶ್ನಿಸುತ್ತಿಲ್ಲ. ಭಾಷಣ ಮಾಡುವವರು, ಪರಿಸರದ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುವವರು ಮರಗಳನ್ನು ಕಡಿಯುತ್ತಿರುವ ಉದ್ದೇಶದ ಬಗ್ಗೆ ಕೇಳುತ್ತಿಲ್ಲ.
ಹಳೆಯ ಮರಗಳನ್ನು, ಉಪದ್ರವಿ ಮರಗಳನ್ನು ಕಡಿಯಲು ಇಲಾಖೆಯಲ್ಲಿಯೇ ಕೆಲವು ನೀತಿ ನಿಯಮಗಳಿವೆ. ಅದನ್ನು ಪಾಲಿಸಿ ಮರ ಕಡಿಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಪರಿಸರಕ್ಕೆ ಯಾವುದೇ ಹಾನಿ ಉಂಟು ಮಾಡದ ಮರಗಳನ್ನು ಕಡಿಯುತ್ತಿರುವುದು ವೃಕ್ಷಮಿತ್ರದ ಮುಖ್ಯಸ್ಥ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದಪ್ಪ ಮತ್ತಿತರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಬೆಳೆದು ನಿಂತ ಮರಗಳನ್ನು ಕಡಿಯಲಾಗಿದೆ, ಇವುಗಳನ್ನು ಕಡಿಯುತ್ತಿರುವವರು ಯಾರು? ಮತ್ತು ಯಾವ ಉದ್ದೇಶಕ್ಕೆ ಎನ್ನುವುದು ಕೂಡಾ ತಿಳಿಯದಾಗಿದೆ. ಕಳೆದ 20 ವರ್ಷಗಳಿಂದ ಕಷ್ಟಪಟ್ಟು ಮರಗಳನ್ನು ಬೆಳೆಸಲಾಗಿದೆ. ಈಗ ಏಕಾಏಕಿ ಮರಗಳನ್ನು ಕಡಿಯುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
https://prajapragathi.com/medical-seat-scam-for-ineligible-students/
ಲಾರಿ ಹತ್ತಿಸಲು ಬಂದರು !
ಆದರ್ಶನಗರದಲ್ಲಿ ಬೆಳೆದು ನಿಂತಿದ್ದ ರಸ್ತೆಯ ಬದಿಯಲ್ಲಿ ಇದ್ದ ಮರಗಳನ್ನು ಕಡಿಯಲು ಮುಂದಾದಾಗ ನಾನು ಅದನ್ನು ತೀವ್ರವಾಗಿ ಪ್ರಶ್ನಿಸಿದೆ. ಆಗಾಗಲೇ ಎರಡು ಮರಗಳು ನೆಲಕ್ಕುರುಳಿದ್ದವು. ಇನ್ನೂ ಎರಡು ಮರಗಳನ್ನು ಕಡಿಯಲು ಮುಂದಾಗಿದ್ದರು. ಮರಗಳನ್ನು ತಬ್ಬಿ ಲಾರಿ ಇತ್ತ ಬರದಂತೆ ಅಡ್ಡ ನಿಂತೆ. ಆದರೆ ಲಾರಿಯನ್ನೇ ನನ್ನ ಮೇಲೆ ಹತ್ತಿಸಲು ಬಂದರು.
ಮರಗಳನ್ನು ಕಡಿಸಿ ಸಾಗಿಸುತ್ತಿದ್ದ ವ್ಯಕ್ತಿ ಇದನ್ನು ಕೇಳಲು ನೀನು ಯಾರು ಎಂದು ನನ್ನನ್ನೇ ಪ್ರಶ್ನಿಸಿದ. ಇಲಾಖೆಯವರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಹಾಗಾದರೆ ಈ ಮರಗಳನ್ನು ಯಾರ ಅನುಮತಿಯ ಮೇರೆಗೆ ಕಡಿಯಲಾಗುತ್ತಿದೆ?
-ಪ್ರೊ.ಸಿದ್ದಪ್ಪ, ವೃಕ್ಷಮಿತ್ರ ಮುಖ್ಯಸ್ಥರು, ನಿವೃತ್ತ ಪ್ರಾಧ್ಯಾಪಕರು.
ಲಾಖೆಗಳ ಗಮನಕ್ಕೆ ಬರುವುದಿಲ್ಲವೆ?
ಯಾರಾದರು ಮನೆ ಕಟ್ಟಿಕೊಳ್ಳುವವರು ಗೃಹೋಪಯೋಗಿ ಮರಮುಟ್ಟುಗಳನ್ನು ತಮ್ಮ ಊರಿನಿಂದ ಸಾಗಿಸಿ ತರುವಾಗ ಅದನ್ನು ಪ್ರಶ್ನಿಸುವವರು ಇಲಾಖೆಯಲ್ಲಿ ಬಹಳ ಮಂದಿ ಇದ್ದಾರೆ. ನಿಯಮಾನುಸಾರ ಅನುಮತಿ ಪಡೆದು ತರಬೇಕು ಇತ್ಯಾದಿ ಪ್ರಶ್ನೆಗಳ ಸುರಿಮಳೆಗೈದು ದಂಡ ಹಾಕಲಾಗುತ್ತದೆ.
ದಂಡಕ್ಕಿಂತ ಹೆಚ್ಚಾಗಿ ಲಂಚ ವಸೂಲಿ ಮಾಡಲಾಗುತ್ತದೆ. ಇಂತಹ ಸಣ್ಣಪುಟ್ಟ ಪ್ರಕರಣಗಳು ಇಲಾಖೆಯ ಗಮನಕ್ಕೆ ಬರುತ್ತವೆಂದಾದರೆ ಹಾಡಹಗಲೇ ದೊಡ್ಡ ದೊಡ್ಡ ಮರಗಳನ್ನೇ ಕಡಿದು ಸಾಗಿಸುವಾಗ ಇಲಾಖೆಗಳ ಗಮನಕ್ಕೆ ಬರುವುದಿಲ್ಲವೆ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
