ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆಯಾಗಬೇಕು : ಡಿ ಕೆ ಶಿವಕುಮಾರ್‌

ಬೆಂಗಳೂರು

    ಚುನಾವಣೆ ಸಮಯದಲ್ಲಿ ಜನರನ್ನು ದಾರಿತಪ್ಪಿಸಲು ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಜನದ್ರೋಹಿ ತೀರ್ಮಾನಗಳನ್ನು ಕೈಗೊಂಡಿದೆ. ಅವರ ಈ ತೀರ್ಮಾನಗಳು ಕಾರ್ಯಸಾಧುವಾಗುವುದಿಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಜನದ್ರೋಹಿ ತೀರ್ಮಾನಗಳನ್ನು ರದ್ದು ಮಾಡುತ್ತೇವೆ. ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ ಪಂಗಡ, ಅಲ್ಪಸಂಖ್ಯಾತರಿಗೆ ಸಿಗಬೇಕಾದ ನ್ಯಾಯವನ್ನು ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಈ ಧೋರಣೆಯನ್ನು ಜನ ಧಿಕ್ಕರಿಸಿ ಹೋರಾಟ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಪ್ರತಿನಿತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ದಿನಗಳಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳೆರಡೂ ಸೇರಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿವೆ ಎಂದಿದ್ದಾರೆ.

    75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮಿಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಯಾವುದೇ ಆಯೋಗಗಳು ಅಂತಿಮ ವರದಿ ನೀಡುವ ಮುನ್ನವೇ ಒಂದು ಚೀಟಿಯಲ್ಲಿ ಇವರಿಗೆ ಇಂತಿಷ್ಟು ಮೀಸಲಾತಿ ಎಂದು ಬರೆದು ಹಂಚಲು ಮುಂದಾಗಿದ್ದಾರೆ. ಈ ರೀತಿ ಹಂಚಲು ಮೀಸಲಾತಿ ಏನು ಅವರ ಮನೆ ಆಸ್ತಿಯೇ? ಎಂದು ಪ್ರಶ್ನಿಸಿದರು.

    ಈ ಸರ್ಕಾರಕ್ಕೆ ದಲಿತರು, ಅಲ್ಪಸಂಖ್ಯಾತರನ್ನು ಕಂಡರೆ ಇಷ್ಟೊಂದು ತಿರಸ್ಕಾರ ಯಾಕೆ? ಅವರು ಮನುಷ್ಯರಲ್ಲವೇ? ಲಿಂಗಾಯತ, ಒಕ್ಕಲಿಗರಲ್ಲಿ ಯಾರಾದರೂ ಅಲ್ಪಸಂಖ್ಯಾತ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಕೇಳಿದ್ದರೇ? ಈಗಿರುವ ಶೇ.56ರಷ್ಟು ಮೀಸಲಾತಿಯ ಜತೆಗೆ ಮೀಸಲಾತಿ ಮಿತಿಯನ್ನು ವಿಸ್ತರಣೆ ಮಾಡಿ ಈ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ನೀಡಬೇಕಿತ್ತು ಎಂದರು. 

    ಆಂಧ್ರ ಪ್ರದೇಶ, ದೆಹಲಿಯಲ್ಲಿ ಮಧ್ಯಂತರ ವರದಿ ಆಧಾರದ ಮೇಲೆ ನೀಡಿದ ಮೀಸಲಾತಿ ಕುರಿತು ಕೋರ್ಟ್ ಗಳಲ್ಲಿ ಏನು ತೀರ್ಪು ಬಂದಿದೆ? ಎಂದು ಈ ಸರ್ಕಾರ ಗಮನಿಸಿದೆಯಾ?. ನಿಮ್ಮಲ್ಲಿ ಕಾನೂನು ವಿಭಾಗ ಇದೆಯಾ? ನಿಮಗೆ ಬೇಕಾದ ಮೂರ್ನಾಲ್ಕು ಜನ ಕೂತು ಹಂಚಿಕೆ ಮಾಡಲು ಇದೇನು ನಿಮ್ಮ ಸ್ವಂತ ಆಸ್ತಿಯೇ?. ಈ ಮೀಸಲಾತಿ ಹಂಚಿಕೆಯನ್ನು ಯಾವ ವರದಿ, ಅಂಕಿ ಅಂಶಗಳ ಆಧಾರದ ಮೇಲೆ ಮಾಡಲಾಗಿದೆ?.

     ತಮಗೆ ಬೇಕಾದಂತೆ ತೀರ್ಮಾನ ಮಾಡಿ, ಅದನ್ನು ಒಪ್ಪಿಕೊಳ್ಳುವಂತೆ ಸ್ವಾಮೀಜಿಗಳನ್ನು ಬೆದರಿಸಿ ಒತ್ತಡ ಹಾಕುತ್ತಿದ್ದಾರೆ. ನಿಮ್ಮ ಈ ಭಿಕ್ಷೆಯನ್ನು ಪಡೆಯಲು ಇಲ್ಲಿ ಯಾರೂ ಭಿಕ್ಷುಕರಿಲ್ಲ. ನಿಮ್ಮ ಈ ತೀರ್ಮಾನವನ್ನು ನಾವು ವಿರೋಧ ಮಾಡುತ್ತೇವೆ. ಈ ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆಯಾಗಬೇಕು. ಕಾಂಗ್ರೆಸ್ ಪಕ್ಷ ಇದಕ್ಕೆ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ