ತುಮಕೂರು :
ಗೃಹೋಪಯೋಗಿ ಅಗತ್ಯ ವಸ್ತುಗಳೂ ಸೇರಿದಂತೆ ಜನಜೀವನಕ್ಕೆ ಬೇಕಾದ ವಸ್ತುಗಳೆಲ್ಲಾ ತುಟ್ಟಿಯಾಗುತ್ತಿವೆ. ಅಂಗಡಿಗಳಲ್ಲಿ ಸಾಮಾನು ಸರಂಜಾಮು ಕೊಳ್ಳಲು ಹೋದವರು ದರ ಏರಿಕೆ ಬಗ್ಗೆ ಪ್ರಶ್ನಿಸಿದರೆ ಏನು ಮಾಡುವುದು ಪೆಟ್ರೋಲ್ ರೇಟ್ ಜಾಸ್ತಿಯಾಗಿದೆಯಲ್ಲ ಎಂಬ ಸಿದ್ಧ ಉತ್ತರ ಸಿಗುತ್ತದೆ.
ಹಾಗಾದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದಾಕ್ಷಣ ಇತರೆ ವಸ್ತುಗಳ ಬೆಲೆಯೂ ಏರಿಕೆಯಾಗು ವುದೇಕೆ? ಇದರಲ್ಲೇನಾದರೂ ವಾಸ್ತವಿಕತೆ ಇದೆಯಾ? ಅವಲೋಕನ ಮಾಡಿ ನೋಡಿದರೆ ಇದೆಲ್ಲ ವ್ಯಾಪಾರ ವಹಿವಾಟಿನ ಒಂದು ಲಕ್ಷಣ ಎಂಬುದು ಸ್ಪಷ್ಟವಾಗುತ್ತದೆ. ಇಷ್ಟಾದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುವುದಾದರೂ ಎಷ್ಟು? ಇದನ್ನೇ ನೆಪ ಮಾಡಿಕೊಂಡು ರೂಪಾಯಿಗಳ ಲೆಕ್ಕದಲ್ಲಿ ಇತರೆ ವಸ್ತುಗಳ ಧಾರಣೆಯನ್ನು ಏರಿಕೆ ಮಾಡುತ್ತಿರುವುದು ಏಕೆ..? ಈ ಪ್ರಶ್ನೆಗಳಿಗೆ ಉತ್ತರವಿಲ್ಲ.
ಎಲ್ಲರೂ ಹೇಳುವುದು ಒಂದೇ ಮಾತು. ಪೆಟ್ರೋಲ್ ಬೆಲೆ ಜಾಸ್ತಿಯಾಗುತ್ತಿದೆ. ಹೀಗಾಗಿ ಇತರೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ ಎಂದು. ಇರಬಹುದು. ಈ ಮಾತಿನಲ್ಲಿ ಸತ್ಯಾಂಶ ಅಡಗಿದ್ದರೂ ಆ ಸತ್ಯ ಎಷ್ಟರ ಪ್ರಮಾಣದಲ್ಲಿದೆ?
ಮೇ ತಿಂಗಳಿನಿಂದ ಈವರೆಗಿನ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿರುವುದನ್ನು ಒಮ್ಮೆ ಗಮನಿಸೋಣ. ಮೇ 6 ರಿಂದ 7ರವರೆಗೆ ಸತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಏರಿಕೆ ಮಾಡಿತ್ತು. ಮೇ 5 ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6 ರಂದು ಲೀಟರ್ ಪೆಟ್ರೋಲ್‍ಗೆ 18 ಪೈಸೆ, ಡೀಸೆಲ್‍ಗೆ 31 ಪೈಸೆ, ಮೇ 7ರಂದು ಪೆಟ್ರೋಲ್‍ಗೆ 25 ಪೈಸೆ, ಡೀಸೆಲ್‍ಗೆ 33 ಪೈಸೆ ಹೆಚ್ಚಳ ಮಾಡಿತ್ತು. ಮೇ 10 ರಂದು ಪೆಟ್ರೋಲ್‍ಗೆ 26 ಪೈಸೆ, ಡೀಸೆಲ್‍ಗೆ 33 ಪೈಸೆ ಹೆಚ್ಚಳ ಮಾಡಿತ್ತು.
ಇತ್ತೀಚಿನ ಅಂದರೆ, ಜೂನ್ 7ರಂದು ಪೆಟ್ರೋಲ್ ಬೆಲೆ 28 ಪೈಸೆ, ಡೀಸೆಲ್ ಬೆಲೆ 27 ಪೈಸೆ ಹೆಚ್ಚಳವಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರ ಗಡಿ ದಾಟಿದೆ. 2020ರ ಕೊರೊನಾ ಲಾಕ್‍ಡೌನ್ ಸಂದರ್ಭದಿಂದ ಹಿಡಿದು 2021ರ ಎರಡನೇ ಅಲೆಯ ಲಾಕ್‍ಡೌನ್‍ವರೆಗೂ ತೈಲಬೆಲೆ ಹೆಚ್ಚಳವಾಗುತ್ತಲೇ ಇದೆ. 2021ರ ಮೇ ತಿಂಗಳಲ್ಲಿ ಒಟ್ಟು 16 ಬಾರಿ ದರ ಏರಿಕೆಯಾಗಿದೆ. ಕೆಲವೇ ರಾಜ್ಯಗಳಲ್ಲಿ 100 ರ ಗಡಿ ದಾಟಿರುವ ಪೆಟ್ರೋಲ್ ದರ ಇತರೆ ರಾಜ್ಯಗಳಲ್ಲಿಯೂ ಜಾರಿಯಾಗಬಹುದು.
2018ರ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.36 ರೂ. ಇತ್ತು. ಬೆಂಗಳೂರಿನಲ್ಲಿ 77.36 ರೂ.ಗಳಷ್ಟಿತ್ತು. ಕಳೆದ 2-3 ವರ್ಷಗಳ ಅವಧಿಯಲ್ಲಿ ತೈಲ ಬೆಲೆ ಯಾವ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ಅವಲೋಕಿಸಬಹುದು.
ಮೇಲಿನ ಅಂಕಿ ಅಂಶಗಳನ್ನು ಗಮನಿಸುತ್ತಾ ಹೋದರೆ ವರ್ಷ ವರ್ಷಕ್ಕೂ ತೈಲಬೆಲೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದೊಡನೆಯೇ ಇತರೆ ದರಗಳು ದಿಢೀರ್ ಏರಿಕೆಯಾಗುತ್ತವೆ. ಇವೆಲ್ಲವೂ ವ್ಯಾಪಾರಿ ವಲಯದ ಒಂದು ವರ್ತುಲವಿದ್ದಂತೆ.
ಪೈಸೆಗಳ ಲೆಕ್ಕಾಚಾರದಲ್ಲಿ ಪೆಟ್ರೋಲ್ ದರ ಹೆಚ್ಚಳವಾಗುತ್ತದೆ. ಆದರೆ ಇತರೆ ವಸ್ತುಗಳ ಬೆಲೆ ರೂಪಾಯಿಗಳ ಲೆಕ್ಕದಲ್ಲಿ ಏರಿಕೆಯಾಗುತ್ತದೆ. ಯಾವುದೇ ವೈಜ್ಞಾನಿಕ ಸತ್ಯಗಳಿಲ್ಲದ ರೀತಿಯಲ್ಲಿ ಇತರೆ ವಸ್ತುಗಳ ಬೆಲೆ ಹೆಚ್ಚಳವಾಗುವುದಾದರೂ ಏಕೆ..? ಸಾಮಾನು -ಸರಂಜಾಮು ಸಾಗಾಣಿಕೆಗೆ ಹೆಚ್ಚು ವೆಚ್ಚ ಖರ್ಚಾಗುತ್ತದೆ ಎಂಬ ಉದಾಹರಣೆ ನೀಡಬಹುದು. ಆದರೆ ಸಮಗ್ರವಾಗಿ ನೋಡಿದಾಗ ಈ ಹೊರೆ ಒಟ್ಟು ಪದಾರ್ಥಗಳ ಮೇಲೆ ಬೀಳಲಿದೆ. ಚಿಲ್ಲರೆಯಾಗಿ ಅಥವಾ ಕೆ.ಜಿ. ರೂಪದಲ್ಲಿ ಖರೀದಿಸುವಾತನ ಮೇಲೆ ರೂಪಾಯಿಗಟ್ಟಲೆ ಹೊರೆ ಹೇರುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರವಿಲ್ಲ.
ಅಗತ್ಯ ವಸ್ತುಗಳಿರಲಿ ಅಥವಾ ಬೇರೆ ಯಾವುದೇ ಸರಕುಗಳಿರಲಿ. ಎಲ್ಲದರ ಮೇಲೆಯೂ ದರ ಹೆಚ್ಚಳವಾಗುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಒಂದು ವ್ಯವಸ್ಥೆ ಬೇಡವೆ.? ಅಗತ್ಯ ವಸ್ತುಗಳ ಬೆಲೆ ದಿನೆ ದಿನೆ ಏರಿಕೆಯಾಗುತ್ತಲೇ ಇದ್ದರೆ ಜನರ ಬದುಕು ನಿರ್ವಹಣೆ ಹೇಗೆ? ಸರ್ಕಾರಗಳು ಈ ನಿಟ್ಟಿನಲ್ಲಿ ಯೋಚಿಸಬೇಕಲ್ಲವೆ..?
ಬೆಲೆ ಏರಿಕೆಯಿಂದ ಹೈರಾಣು :
ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಸಾಮಾನ್ಯ ವರ್ಗ ಒಂದು ವರ್ಷದಿಂದಲೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪರಿಸ್ಥಿತಿ ಚಿಂತಾಜನಕವಾಗಿರುವಾಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದರೆ ಬದುಕಿನ ನಿರ್ವಹಣೆ ಹೇಗೆ ಎಂಬ ಚಿಂತೆ ಆ ವರ್ಗವನ್ನು ಕಾಡುತ್ತಿದೆ. ಮಧ್ಯಮ ವರ್ಗವಂತೂ ಹಣಕಾಸಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಹಸಪಡುತ್ತಿದೆ. ಬೆಲೆ ನಿಯಂತ್ರಣದ ವ್ಯವಸ್ಥೆ ಸರ್ಕಾರದ ಮಟ್ಟದಲ್ಲಿ ಜಾರಿಯಾಗದೆ ಹೋದರೆ ಅಥವಾ ಅಗತ್ಯ ವಸ್ತುಗಳ ಧಾರಣೆ ನಿಯಂತ್ರಣವಾಗದೆ ಹೋದರೆ ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಲಿದೆ.
ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಹೊಡೆತ :
ತನ್ನ ಜೀವಮಾನದಲ್ಲಿ ಒಂದು ಸೂರು ಕಟ್ಟಿಕೊಳ್ಳಬೇಕು ಎಂಬುದು ಎಲ್ಲರ ಅಪೇಕ್ಷೆ. ಇದನ್ನು ನನಸು ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳು ಸಾಗುತ್ತವೆ. ಆದರೆ ಬೆಚ್ಚಿಬೀಳಿಸುವಂತಹ ದರಗಳು ಏರಿಕೆಯಾಗುತ್ತಿದ್ದರೆ ಕನಸನನ್ನು ಈಡೇರಿಸಿಕೊಳ್ಳಲು ಸಾಧ್ಯವೆ..? ಇಟ್ಟಿಗೆ, ಮರಳು, ಕಬ್ಬಿಣ, ಸಿಮೆಂಟ್ ಇತ್ಯಾದಿ ಗೃಹೋಪಯೋಗಿ ನಿರ್ಮಾಣಕ್ಕೆ ಬೇಕಿರುವ ವಸ್ತುಗಳ ದರ ದಿಢೀರ್ ಏರಿಕೆಯಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದ ಹಿಂದೆಯೇ ಈ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿರುವ ಹಿಂದೆ ವ್ಯಾಪಾರಿ ಮನೋಭಾವದ ವ್ಯವಸ್ಥಿತ ಹುನ್ನಾರಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ