ಕೊರಟಗೆರೆ : ಆಧಾರ್ ಕಾರ್ಡ್‍ಗಾಗಿ ಜನತೆಯ ಪರದಾಟ!

 ಕೊರಟಗೆರೆ:

      ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಯಾವುದೇ ಯೋಜನೆಯ ಸವಲತ್ತು ಪಡೆಯಬೇಕಾದರೆ ಸರ್ಕಾರ ಆಧಾರ್‍ಕಾರ್ಡ್ ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ ಆಧಾರ್‍ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿಗೆ ಕೊರಟಗೆರೆ ತಾಲ್ಲೂಕಿನಲ್ಲಿ ಒಂದೇ ಕೇಂದ್ರ ನಿಯೋಜನೆ ಗೊಳಿಸಿರುವುದು ನೂರಾರು ಜನ ಆಧಾರ್ ತಿದ್ದುಪಡಿಗಾಗಿ ರಾತ್ರಿ-ಹಗಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ಜನತೆಗೆ ತೊಂದರೆಯಾಗಿದೆ.

      ಕೊರಟಗೆರೆ ತಾಲ್ಲೂಕಿನಲ್ಲಿ ಆಧಾರ್‍ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿಗೆ ಎಸ್‍ಬಿಐ ಕೇಂದ್ರವೊಂದಕ್ಕೆ ಮಾತ್ರ ನೇಮಿಸಿರುವುದು ತಲೆನೋವಾಗಿ ಪರಿಣಮಿಸಿದೆ. ಒಂದೇ ಕೇಂದ್ರದಲ್ಲಿ ಸಾವಿರಾರು ಜನರಿಗೆ ಆಧಾರ್ ತಿದ್ದುಪಡಿ ಹಾಗೂ ನೋಂದಣಿಗೆ ಒಬ್ಬ ಮನುಷ್ಯ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಾತ್ರಿ-ಹಗಲು ಎನ್ನದೆ ವಾರಗಟ್ಟಲೆ ಕಾಲ ಎಣಗಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕೊರಟಗೆರೆ ಜನತೆಯ ದೌರ್ಭಾಗ್ಯ ಎನ್ನಬಹುದಾಗಿದೆ.      

      ಕೊರಟಗೆರೆ ತಾಲ್ಲೂಕು ಜಿಲ್ಲೆಯಲ್ಲಿಯೇ ಅತಿ ಚಿಕ್ಕದಾದ ತಾಲ್ಲೂಕಾಗಿದ್ದು, 4 ಹೋಬಳಿ, 24 ಗ್ರಾಪಂಗಳ ವ್ಯಾಪ್ತಿ ಹೊಂದಿದೆ. ಒಟ್ಟು 251 ಹಳ್ಳಿಗಳಿದ್ದು, ಇದರಲ್ಲಿ 1,67,591 ಜನಸಂಖ್ಯೆ ಇದೆ. ಇದರಲ್ಲಿ ಪುರುಷರು 84,349 ಮತ್ತು ಮಹಿಳೆಯರು 83242 ಇದ್ದಾರೆ. 1,67,591 ಒಟ್ಟು ಜನ ಸಂಖ್ಯೆ ಹೊಂದಿರುವ ತಾಲ್ಲೂಕಿಗೆ ಕಡ್ಡಾಯವಾಗಿ ಕೇಳುವ ಆಧಾರ್‍ಕಾರ್ಡ್‍ನ ನೋಂದಣಿ ಮತ್ತು ತಿದ್ದುಪಡಿಗೆ ಒಂದು ಕೇಂದ್ರ ಮಾತ್ರ ತೆರೆದರೆ ಆಗಬಹುದಾದ ತೊಂದರೆಯ ಅರಿವು ಇಲ್ಲದೆ ಒಂದೆ ಕೇಂದ್ರದಲ್ಲೇ ಜನರನ್ನು ವಾರಗಟ್ಟಲೆ ಅಲೆದಾಡಿಸುತ್ತ್ತಿರುವುದು ಸಾರ್ವಜನಿಕರ ತಾಳ್ಮೆ ಕಟ್ಟೆ ಒಡೆಯುವ ಹಂತಕ್ಕೆ ತಲುಪಿದೆ ಎನ್ನಬಹುದಾಗಿದೆ.

      ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿಗೆ ಈ ಹಿಂದೆ ಗ್ರಾ.ಪಂ, ನಾಡಕಚೇರಿ, ತಹಸೀಲ್ದಾರ್ ಕಚೇರಿ ಗಳಲ್ಲಿ ಅವಕಾಶವಿತ್ತು. ಆ ಸಂದರ್ಭದಲ್ಲಿ ಗ್ರಾ.ಪಂನಿಂದ ಹೆಸರು, ವಿಳಾಸ, ಮೊಬೈಲ್ ನಂಬರ್‍ಗಳ ತಿದ್ದುಪಡಿ ನಡೆಯುತ್ತಿತ್ತು. ಜೊತೆಗೆ ನಾಡಕಚೇರಿಯಲ್ಲಿ ಎಲ್ಲಾ ತರಹದ ತಿದ್ದುಪಡಿ, ಬೆರಳಚ್ಚು ಬದಲಾವಣೆ, ಹೊಸ ಸೇರ್ಪಡೆ, ವಿಳಾಸ ಬದಲಾವಣೆಗಳು ನಡೆಯುತ್ತಿತ್ತು. ತಾಲ್ಲೂಕು ಕಚೇರಿಯಲ್ಲಿ ಆನ್‍ಲೈನ್ ಮೂಲಕ ಎಲ್ಲಾ ತಿದ್ದುಪಡಿ ನೋಂದಣಿ ಕಾರ್ಯ ನಡೆಯುತ್ತಿದೆ. ಇದ್ದಕ್ಕಿದ್ದಂತೆ ಕಂಪ್ಯೂಟರ್ ಹಾಗೂ ಇನ್ನಿತರೆ ತಾಂತ್ರಿಕ ತೊಂದರೆಯಿಂದ, ಹಳೆ ವರ್ಷನ್ ಇರುವುದರಿಂದ ಹೊಸ ವರ್ಷನ್‍ಗೆ ಬದಲಾಗದೆ ಅಥವಾ ಅವಕಾಶವಿಲ್ಲದೆ ಗ್ರಾ.ಪಂ, ನಾಡಕಚೇರಿ, ತಹಸೀಲ್ದಾರ್ ಕಚೇರಿಗಳು ಆಧಾರ್‍ಕಾರ್ಡ್ ತಿದ್ದುಪಡಿ, ನೋಂದಣಿ ಕಾರ್ಯಗಳಿಂದ ದೂರವಿವೆ. ಎಸ್‍ಬಿಐನಲ್ಲಿ ಮಾತ್ರ ಹೊಸ ವರ್ಷನ್‍ಗೆ ಬದಲಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಡೀ ತಾಲ್ಲೂಕಿನ ಸಾವಿರಾರು ಜನ ಆಧಾರ್‍ಕಾರ್ಡ್‍ನ ತಿದ್ದುಪಡಿ ಹಾಗೂ ಹೊಸ ನೋಂದಣಿಗೆ ಪರಿತಪಿಸುತ್ತಿದ್ದಾರೆ.

      ತಾಲ್ಲೂಕಿನಲ್ಲಿ ಒಂದುಲಕ್ಷ,ಅರವತ್ತೇಳು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ಇದರಲ್ಲಿ ಶೈಕ್ಷಣಿಕ ದೃಷ್ಟಿಯಿಂದ ಪ್ರತಿವರ್ಷ 240 ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿವೆ. 15-20 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ, ಬ್ಯಾಂಕ್ ಪಾಸ್‍ಬುಕ್, ಅಡ್ಮಿಷನ್‍ಟಿಕೆಟ್ ಸೇರಿದಂತೆ ಇನ್ನಿತರ ವ್ಯವಹಾರಕ್ಕಾಗಿ ಆಧಾರ್‍ಕಾರ್ಡ್ ಕಡ್ಡಾಯವಿದ್ದು, ಇದರ ಸಣ್ಣಪುಟ್ಟ ತಿದ್ದುಪಡಿ ಹಾಗೂ ನೋಂದಣಿಗೆ ಎಸ್‍ಬಿಐ ಕೊರಟಗೆರೆ ಶಾಖೆ ಮುಂದೆ ಪ್ರತಿದಿನ ನೂರಾರು ಜನ ಸರದಿ ಸಾಲಿನಲ್ಲಿ ನಿಂತಿರುತ್ತಾರೆ. ಆದರೂ ಮೊದಲು ಬಂದು ಯಾರು ಟೋಕನ್ ಪಡೆದಿರುತ್ತಾರೊ ಅವರಿಗೆ ಮಾತ್ರ ಅವಕಾಶವಿದ್ದು, ಒಂದು ದಿನಕ್ಕೆ 24 ಜನರಿಗೆ ಮಾತ್ರ ತಿದ್ದುಪಡಿ ಹಾಗೂ ನೋಂದಣಿಗೆ ಅವಕಾಶವಿದೆ. ಹೀಗಿರುವ್ಯದರಿಂದ ತಾಲ್ಲೂಕಿನ ಸಾವಿರಾರು ಜನರ ಪಾಡೇನು? ದಿನಂ ಪ್ರತಿ 24 ಜನರಿಗೆ ಅವಕಾಶವಿದ್ದರೆ ಇತರೆ ಸಾವಿರಾರು ಜನರ ಗತಿಯೇನು? ಇದಕ್ಕಾಗಿ ಪ್ರತಿದಿನ ಟೋಕನ್‍ಗಾಗಿ ಎಸ್‍ಬಿಐ ಬ್ಯಾಂಕಿನ ಮುಂದೆ ರಾತ್ರಿಯಿಡಿ ಕೊರೆವ ಚಳಿಯಲ್ಲಿ ಹೆಂಗಸರು, ಮಕ್ಕಳು ಎನ್ನದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿಯಾಗಿದೆ.

ಕಣ್ಮುಚ್ಚಿ ಕುಳಿತ ತಾಲ್ಲೂಕು ಆಡಳಿತ:

      ಆಧಾರ್‍ಕಾರ್ಡ್‍ಗಾಗಿ ಇಷ್ಟೆಲ್ಲಾ ಸಮಸ್ಯೆಗಳು ತಲೆದೋರಿ ಒಂದೆ ಕೇಂದ್ರದ ಮುಂದೆ ನೂರಾರು ಜನ ಕಾಯುತ್ತಿರುವುದು ಕೆಲವು ಜನ ವಾರಾನುಗಟ್ಟಲೆ ಟೋಕನ್‍ಗಾಗಿ ಕಾದುಕಾದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಜನ 2-3 ದಿನ ಹಗಲು, ರಾತ್ರಿ ಎನ್ನದೆ ಇಲ್ಲಿನ ಹೋಟೆಲ್‍ಗಳಲ್ಲಿ ಊಟ ತಿಂಡಿ ತಿಂದು, ಆಧಾರ್‍ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿರುವುದರ ಬಗ್ಗೆ ಹಲವು ಜನ ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ. ಆದರೂ ನನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಕಂದಾಯ ಇಲಾಖೆ ವರ್ತಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದೇ ವಾತಾವರಣ ಮುಂದುವರೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರ ಎಚ್ಚರಿಕೆಯ ನಡುವೆಯೂ ತಾಲ್ಲೂಕು ಆಡಳಿತ ಎಚ್ಚರ ವಹಿಸದಿರುವುದು ಕೊರಟಗೆರೆ ಜನತೆಯ ದುರಂತ ಎನ್ನಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜನರ ವಾಸ್ತವ್ಯ ವೈರಲ್:

      ಆಧಾರ್‍ಕಾರ್ಡ್ ಸಮಸ್ಯೆಯ ಜೊತೆಗೆ ಆಧಾರ್‍ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಸಾರ್ವಜನಿಕರ ಹರಸಾಹಸಕ್ಕೆ ಸಾರ್ವಜನಿಕರ ವಲಯದಿಂದಲೂ ಟೀಕೆ ಕೇಳಿ ಬಂದಿದ್ದು, ತಾಲ್ಲೂಕು ಆಡಳಿತ ಜೀವಂತವಾಗಿದೆಯೆ? ನೂರಾರು ಜನ ಎಸ್‍ಬಿಐ ಕೇಂದ್ರದ ಬಳಿ ಚಾಪೆ, ಹೊದಿಕೆ ತಂದು ಕೊರೆವ ಚಳಿಯಲ್ಲಿ ಚಿಕ್ಕ ಮಕ್ಕಳೊಂದಿಗೆ ಟೋಕನ್‍ಗಾಗಿ ಹಗಲು ರಾತಿ ಎನ್ನದೆ ಕಾಯುತ್ತಿದ್ದಾರೆ ಎಂದರೆ ಇದರ ಅರ್ಥವೇನು? ಇದನ್ನು ಮನಗಂಡ ಕೆಲವು ಯುವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ವಿರುದ್ದ ಸಾಮಾಜಿಕ ಜಾಲತಾಣಗಳಾದ ವಾಟ್ಸ್‍ಆಪ್, ಫೇಸ್‍ಬುಕ್‍ಗಳಲ್ಲಿ ನೂರಾರು ಜನ ರಾತ್ರಿ ಚಾಪೆ ಹೊದಿಕೆ ತಂದು ಮಲಗಿ ಅವರ ಸಮಸ್ಯೆ ಹೇಳುತ್ತಿರುವುದನ್ನು ವೈರಲ್ ಮಾಡಿದ್ದಾರೆ. ಇದೆಲ್ಲಾ ನಡೆದೂ ವ್ಯವಸ್ಥೆ ಬದಲಾಗದೆ ಅದೇ ವ್ಯವಸ್ಥೆ ಇದ್ದರೆ ಅಧಿಕಾರಿಗಳು ಇನ್ನು ಎಷ್ಟರ ಮಟ್ಟಿಗೆ ಜಡ್ಡು ಹಿಡಿದಿದ್ದಾರೆ ಎಂಬುದು ಕಾಣಬಹುದಾಗಿದೆ.

ಕೊರಟಗೆರೆತಾಲ್ಲೂಕಿನಲ್ಲಿ ಸಾವಿರಾರುಜನರಿಗೆಆಧಾರ್‍ಕಾರ್ಡ್ ನೊಂದಣಿಅಥವಾತಿದ್ದುಪಡಿ ಸಮಸ್ಯೆಗಳಿದ್ದು, ಒಂದೆಕೇಂದ್ರದಲ್ಲಿ ಕೆಲಸವಾಗುತ್ತಿರುವುದರಿಂದ ಈ ಸಮಸ್ಯೆ ಮತ್ತಷ್ಟುಉದ್ಬಣವಾಗಲುಕಾರಣವಾಗಿದೆ. ದಿನಂ ಪ್ರತಿ 24 ಜನರಿಗೆ ಮಾತ್ರಅವಕಾಶವಿದ್ದು, ಉಳಿಕೆ ಜನಆಧಾರ್‍ಕಾರ್ಡ್‍ತಿದ್ದುಪಡಿ ನೊಂದಣಿ ಮಾಡಿಸಿಕೊಳ್ಳಲು ಸಾದ್ಯವಾಗದೇ ಪ್ರತಿದಿನ ಬಂದು ಸರದಿ ಸಾಲಿನಲ್ಲಿ ನಿಂತು, 24 ಟೋಕನ್ ನಂತರ ವಾಪಾಸ್ಸು ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಬೇಸರಗೊಳಗಾದ ಜನ ಈ ಅವ್ಯವಸ್ಥೆ ವಿರುದ್ದಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾಡಕಛೇರಿ, ಗ್ರಾ.ಪಂ, ತಹಶೀಲ್ದಾರ್ ಕಛೇರಿ, ಅಂಚೆ ಕಛೇರಿಗಳಲ್ಲಿಯೂ ಅವಕಾಶವಿದ್ದರೂ ಆ ಸ್ಥಳಗಳಲ್ಲಿ ಕೆಲಸಗಳು ಜರುಗದೆಒಂದೆಕೇಂದ್ರಕ್ಕೆ ಹೆಚ್ಚು ಜನ ಬರುವುದರಿಂದ ಸಾರ್ವಜನಿಕರಿಗೆತೊಂದರೆಯಾಗುತ್ತಿದೆ, ಅಧಿಕಾರಿಗಳು ಸಂಬಂಧಪಟ್ಟವರ ಗಮನಕ್ಕೆ ತಂದು ಶೀಘ್ರ ಸಮಸ್ಯೆಗೆ ಪರಿಹಾರಕಲ್ಪಿಸಬೇಕುಇಲ್ಲವಾದರೆ ಈ ವ್ಯವಸ್ಥೆ ವಿರುದ್ದ ಪ್ರತಿಭಟನೆ ನಡೆಸಲಾಗುವುದು.

-ನಂಜುಂಡಯ್ಯ, ತಾ.ಅಧ್ಯಕ್ಷರು, ಅಹಿಂದ ವೇದಿಕೆ.

ವಿದ್ಯಾರ್ಥಿ ವೇತನ ಹಾಗೂ ನಮ್ಮ ಮಕ್ಕಳ ಬ್ಯಾಂಕ್ ಖಾತೆ ತೆರೆಯಲು ಆಧಾರ್‍ಕಾರ್ಡ್ ಕಡ್ಡಾಯವಾಗಿದ್ದು, ಹೆಸರು ಬದಲಾವಣೆಯಾಗಿದ್ದು, ಅದನ್ನು ಬದಲಾಯಿಸಿಕೊಳ್ಳುವ ದೃಷ್ಟಿಯಿಂದ ಎಸ್‍ಬಿಐ ಕೇಂದ್ರಕ್ಕೆ ಬರುತ್ತಿದ್ದೇವೆ. ನಾವು ಬೆಳಗ್ಗೆ 10 ಗಂಟೆಗೆ ಬಂದದ್ದು, ಈ ಸಮಯಕ್ಕಾಗಲೇ ನೂರಾರು ಜನ ಸಾಲಿನಲ್ಲಿ ನಿಂತಿದ್ದಾರೆ. 24 ಜನರಿಗೆ ಮಾತ್ರ ದಿನವೊಂದಕ್ಕೆ ಕೆಲಸಗಳಾಗುತ್ತಿವೆ. ಸರತಿ ಸಾಲಿನಲ್ಲಿ ನೂರಾರು ಜನರ ಹಿಂದೆ ಇರುವ ನಾನು ಇಂದು ಕೆಲಸವಾಗುತ್ತಿಲ್ಲವೆಂದು ಮನೆಗೆ ವಾಪಾಸು ಬಂದು ಮತ್ತೊಂದು ದಿನ ಹೋಗಿ ನೋಡಿದರೂ ಇದೇ ಪರಿಸ್ಥಿತಿ. ಇದನ್ನು ಅರಿತು ರಾತ್ರಿ ಇಲ್ಲಿಯೇ ಉಳಿದುಕೊಂಡು ಟೋಕನ್ ಪಡೆಯೋಣವೆಂದು ಕಾಯುತ್ತಿದ್ದೇನೆ. ಚಾಪೆ, ಹೊದಿಕೆ ಸಹಿತ ಎಸ್‍ಬಿಐ ಬ್ಯಾಂಕಿನ ಮುಂದೆ ಮಲಗುತ್ತಿದ್ದೇನೆ.

-ಮಂಗಳಮ್ಮ, ಬೋಡಬಂಡೇನಹಳ್ಳಿ ನಿವಾಸಿ.

ಆಧಾರ್‍ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ನಾಡಕಚೇರಿ, ತಾಲ್ಲೂಕು ಕಚೇರಿ, ಅಂಚೆ ಕಚೇರಿಗಳಲ್ಲಿ ಅವಕಾಶವಿದೆ. ಜನ ಏಕೆ ಹೀಗೆ ಗೊಂದಲ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತಿಲ್ಲ. ಗ್ರಾ.ಪಂಗಳಲ್ಲಿ ತಿದ್ದುಪಡಿ ಮಾಡುವಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್‍ಗೆ ಸೂಚನೆ ನೀಡಿದ್ದೇವೆ. ಯೂಸರ್ ಮತ್ತು ಸರ್ವರ್ ತೊಂದರೆಯಿಂದ ಒಂದಿಷ್ಟು ನಿಧಾನವಾಗಿದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅತಿ ಶೀಘ್ರವಾಗಿ ಈ ಸಮಸ್ಯೆಯನ್ನು ತಿಳಿಗೊಳಿಸಲಾಗುವುದು.

-ನಾಗರಾಜು, ತಹಸೀಲ್ದಾರ್, ಕೊರಟಗೆರೆ.

Recent Articles

spot_img

Related Stories

Share via
Copy link