ನವದೆಹಲಿ :
ವಿರಾಟ್ ಕೊಹ್ಲಿಯ ದಿಢೀರ್ ನಿವೃತ್ತಿಯು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಯ ನಡುವೆಯೇ ಬಿಸಿಸಿಐ ಸೂಚನೆ ಮೇರೆಗೆ ಕೊಹ್ಲಿ ಟೆಸ್ಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ವಿರಾಟ್ ಕೊಹ್ಲಿಗೆ ನಿವೃತ್ತಿ ಘೋಷಿಸುವಂತೆ ಬಿಸಿಸಿಐ ಮೊದಲೇ ಸೂಚನೆ ನೀಡಿತ್ತು. ಹೀಗಾಗಿಯೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ವರದಿ ಪ್ರಕಾರ, ಜೂನ್ 20, 2025 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುವುದಿಲ್ಲ ಎಂಬ ಸೂಚನೆ ನೀಡಲಾಗಿತ್ತು. ಇದೇ ಕಾರಣದಿಂದಾಗಿ ಅವರು ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಇದಾಗ್ಯೂ ನಿವೃತ್ತಿಯನ್ನು ಹಿಂಪಡೆಯಲು ಬಿಸಿಸಿಐ ಯಾವುದೇ ಮನವಿ ಮಾಡಿಲ್ಲ ಎಂದು ಹೇಳಲಾಗಿದೆ.
ಬಿಸಿಸಿಐ ಯಾರಿಗೂ ಮನವಿ ಮಾಡುವುದಿಲ್ಲ. ನಿವೃತ್ತಿ ಎಂಬುದು ಆಟಗಾರನ ನಿರ್ಧಾರ. ಅದು ಅವರ ವೈಯಕ್ತಿಕ ಆಯ್ಕೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಿಸಿಸಿಐ ಎಂದು ಮೂಲವೊಂದು ದೈನಿಕ್ ಜಾಗರಣ್‌ಗೆ ತಿಳಿಸಿದೆ. ಅಲ್ಲದೆ ಇದಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಇನ್ನು ಮುಂದೆ ಟೆಸ್ಟ್ ತಂಡದಲ್ಲಿ ನೀವು ಹೊಂದಿಕೊಳ್ಳುವುದಿಲ್ಲ ಎಂದು ತಿಳಿಸಲಾಗಿತ್ತು. ಹೀಗಾಗಿ ಅವರು ನಿವೃತ್ತಿ ನೀಡಲು ನಿರ್ಧರಿಸಿದ್ದರು. ಆದರೆ ನಿರ್ಧಾರವನ್ನು ಬದಲಿಸುವಂತೆ ಯಾವುದೇ ಮನವಿ ಮಾಡಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಅತ್ತ ರೋಹಿತ್ ಶರ್ಮಾ ಅವರ ವಿಷಯದಲ್ಲೂ ಇದೇ ನಡೆದಿದೆ. ಮೇ 7 ರಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೂ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸುವುದಿಲ್ಲ ಸಂದೇಶವನ್ನು ನೀಡಲಾಯಿತು. ಹೀಗಾಗಿ ರೋಹಿತ್ ಶರ್ಮಾ ಕೂಡ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಎಂದು ದೈನಿಕ್ ಜಾಗರಣ್ ವರದಿಯಲ್ಲಿ ಹೇಳಲಾಗಿದೆ.
ಅಂದರೆ ಬಿಸಿಸಿಐ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಕೈ ಬಿಡಲು ನಿರ್ಧರಿಸಿದ್ದರು. 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅನ್ನು ಕೇಂದ್ರೀಕರಿಸಿ ಹೊಸ ತಂಡ ಕಟ್ಟಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿದ್ದು, ಇದಕ್ಕಾಗಿ ಹಿರಿಯ ಆಟಗಾರರನ್ನು ಕಿಕ್ ಔಟ್ ಮಾಡಲು ನಿರ್ಧರಿಸಿದ್ದಾರೆ.
ಇದೇ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡುವುದಿಲ್ಲ ಎಂದು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ತಿಳಿಸಲಾಗಿತ್ತು. ಇದರಿಂದ ಮನನೊಂದ ದಿಗ್ಗಜರು ದಿಢೀರ್ ಆಗಿ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಬೀಳ್ಕೊಡುಗೆ ಇಲ್ಲದೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ಒಟ್ಟಿನಲ್ಲಿ 14 ವರ್ಷಗಳ ಕಾಲ ಭಾರತ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ ಬೀಳ್ಕೊಡುಗೆ ಪಂದ್ಯಕ್ಕೆ ಅರ್ಹರಾಗಿದ್ದರು. ಇದಾಗ್ಯೂ ಮೈದಾನದ ಮೂಲಕ ಅವರು ಕೆರಿಯರ್ ಅಂತ್ಯಗೊಳಿಸದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
