ಶಿರಾ
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಬೈರಾಪುರದ ಸರ್ವೇ ನಂಬರ್ ಜಮೀನಿನಲ್ಲಿ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಲ್ಲು ಗಣಿಗಾರಿಕೆ ನಡೆಸಲು ಜೆಂಟಿ ಸರ್ವೇ ಕಾರ್ಯಾಚರಣೆ ನಡೆಸಿರುವುದನ್ನು ಈ ಭಾಗದ ಗ್ರಾಮಸ್ಥರು ಖಂಡಿಸಿದ್ದಾರೆ.
ಬೈರಾಪುರದ ಸರ್ಕಾರದ ಖರಾಬು ಸ.ನಂ.13ರ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಯನ್ನು ನಡೆಸಿದಲ್ಲಿ ಈ ಭಾಗದ ಬೋವಿ ಕಾಲನಿ, ದೊಡ್ಡ ಚಿಕ್ಕನಹಳ್ಳಿ ಗ್ರಾಮಗಳು ಹಾಗೂ ಈ ಭಾಗದ ಕೆರೆಗಳಿಗೆ ಸಾಕಷ್ಟು ಹಾನಿಯಾಗಲಿದೆ. ಬೈರಾಪುರ ಸರ್ವೇ ನಂಬರ್‍ಗೆ ಹೊಂದಿಕೊಂಡಂತೆ ನೂರಾರು ಎಕರೆ ರೈತರ ಸಾಗುವಳಿ ಜಮೀನು ಕೂಡ ಇದೆ ಎಂದು ಈ ಭಾಗದ ರೈತರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ಬೈರಾಪುರದ ಬಳಿ ಕಲ್ಲು ಗಣಿಗಾರಿಕೆ ಆರಂಭಿಸಿದಲ್ಲಿ ಸಾಗುವಳಿ ಜಮೀನಿನಲ್ಲಿ ಯಾವುದೇ ರೀತಿಯ ಸಾಗುವಳಿಯನ್ನು ರೈತರು ಮಾಡಲು ಕಷ್ಟವಾಗುತ್ತದೆ. ರೈತರು ಇಲ್ಲಿ ಹೈನುಗಾರಿಕೆಯನ್ನು ಮುಖ್ಯ ಕಸುಬನ್ನಾಗಿಸಿಕೊಂಡಿರುವುದರಿಂದ ಗಣಿಗಾರಿಕೆಯಿಂದ ಮಾಲಿನ್ಯ ಉಂಟಾಗಿ ಜಾನುವಾರುಗಳ ಮೇವಿಗೂ ತೊಂದರೆಯಾಗುತ್ತದೆಯಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆÉ ಎಂದು ತಹಸೀಲ್ದಾರ್‍ರಿಗೆ ಸಲ್ಲಿಸಿರುವ ಮನವಿಯಲ್ಲಿ ಗ್ರಾಮಸ್ಥರು ತಿಳಿಸಿದ್ದಾರೆ.
ಇದೇ ಸರ್ವೇ ನಂಬರ್‍ಗೆ ಹೊಂದಿಕೊಂಡಂತೆ ಅರಣ್ಯ ಪ್ರದೇಶವೂ ಇದ್ದು ಅರಣ್ಯದಲ್ಲಿನ ಕಾಡು ಪ್ರಾಣಿಗಳಿಗೂ ಈ ಗಣಿಗಾರಿಕೆಯಿಂದ ತೊಂದರೆಯಾಗಲಿದ್ದು ಈ ಭಾಗದಲ್ಲಿ ಗಣಿಗಾರಿಕೆ ಆರಂಭಿಸದಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ
