ದಾವಣಗೆರೆ :
ಭಾರೀ ಮಳೆಯಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯ ಹಾಗೂ ಕೇರಳದ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚಲು ದಾವಣಗೆರೆಯ ವಿವಿಧ ಸಂಘ ಸಂಸ್ಥೆಗಳು ಬೀದಿಗಿಳಿದು ಆಹಾರ ಪದಾರ್ಥ, ಉಡುಪು, ಹೊದಿಕೆ ಹಾಗೂ ಧನ ಸಂಗ್ರಹಿಸುತ್ತಿವೆ.
ಭಾನುವಾರ ಎಸ್‍ಯುಸಿಐ, ಆರ್‍ಎಸ್‍ಎಸ್, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ, ಮೆಡಿಕಲ್ ಸರ್ವೀಸ್ ಸೆಂಟರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಗಳು ನಗರದ ಹಲವೆಡೆ ಸಂಚರಿಸಿ ವ್ಯಾಪಾರಸ್ಥರು, ಸಾರ್ವಜನಿಕರಿಂದ ಆಹಾರ ಪದಾರ್ಥ, ಉಡುಪು, ಹೊದಿಕೆ ಕಾಗೂ ಹಣ ಸಂಗ್ರಹಿಸಿದರು.
ಎಸ್‍ಯುಸಿಐ(ಸಿ):
ಕಳೆದ ಒಂದು ವಾರದಿಂದ ಕೇರಳ ರಾಜ್ಯ ಹಾಗೂ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಭೂಕುಸಿತವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ಸಾವಿರಾರು ಜನರು ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದು, ಈ ಸಂತ್ರಸ್ಥರಿಗೆ ನೆರವು ನೀಡುವ ಸಲುವಾಗಿ ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷದ ಪದಾಧಿಕಾರಿಗಳು ನಗರದ ಗಡಿಯಾರ ಕಂಬದಿಂದ ಹಲವೆಡೆ ಸಂಚರಿಸಿ ಔಷಧಿ, ಪರಿಹಾರಧನ, ಸಿದ್ಧ ಉಡುಪು, ಹೊದಿಕೆ ಹಾಗೂ ನಗದು ಸಂಗ್ರಹಿಸಲಾಯಿತು.
ಪ್ರಗತಿಪರ ಹೋರಾಟಗಾರ ಮಲ್ಲೇಶ್ ದೇಣಿಗೆ ನೀಡುವ ಮೂಲಕ ಸಾಮಗ್ರಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿ, ಕೇರಳದ ಜನರಿಗೆ ದಾವಣಗೆರೆ ಜನರು ಸ್ವ ಪ್ರೇರಿತವಾಗಿ ಬಂದು ಹಣ, ಬಟ್ಟೆ, ನೀಡುವುದರ ಮೂಲಕ ಜನರಿಗೆ ನೆರವಾಗಿ ಮಾನವೀಯತೆ ಮೆರೆಯಬೇಕೆಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನರೆಹಾವಳಿಯಿಂದ ಸಂತ್ರಸ್ಥಗೊಂಡ ಕೇರಳ ರಾಜ್ಯಕ್ಕೆ ಭೇಟಿ ನೀಡಿ, ನೆರೆ ಪೀಡಿತ ಪ್ರದೇಶಗಳ ಸ್ಥಳ ಪರೀಶಿಲನೆ ಮಾಡಿ, ಕೇರಳಕ್ಕೆ ಕೇವಲ 500 ಕೋಟಿ ರೂ. ಪರಿಹಾರ ನೀಡಿದ್ದಾರೆ. ಆದರೆ, ಅಲ್ಲಿನ ಭೀಕರ ಪರಿಸ್ಥಿಯನ್ನು ಗಮನಿಸದರೆ ಈ ಹಣ ಸಾಲುವುದಿಲ್ಲ. ಇನ್ನೂ 5 ಸಾವಿರ ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ರಾಘವೇಂದ್ರ ನಾಯ್ಕ, ತಿಪ್ಪೇಸ್ವಾಮಿ, ಮಧು ತೊಗಲೇರಿ, ಪರಶುರಾಮ್, ಭಾರತಿ, ನಾಗಜ್ಯೋತಿ, ಪ್ರಕಾಶ್ ಎಲ್.ಏಚ್, ಹರಿಪ್ರಸಾದ್, ಸ್ಮೀತಾ, ನೇತ್ರ, ಗೋಪಾಲಕೃಷ್ಣ ಮತ್ತಿತರರು ಹಾಜರಿದ್ದರು.
ಆರ್‍ಎಸ್‍ಎಸ್:
ಕೇರಳ ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಲುಗಿರುವ ನೆರೆ ಸಂತ್ರಸ್ಥರಿಗೆ ನೆರವು ನೀಡಲು ನಗರದ ಜಯದೇವ ವೃತ್ತದಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‍ಎಸ್‍ಎಸ್ )ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಹಲವೆಡೆ ಸಂಚರಿಸಿ ಸಂತ್ರಸ್ಥರ ನಿಧಿ ಸಂಗ್ರಹಿಸಿದರು.
ನಗರದ ಅಶೋಕ ರಸ್ತೆ, ಹಳೇಬಸ್ ನಿಲ್ದಾಣ, ಗಾಂಧಿವೃತ್ತ, ಮಂಡಿಪೇಟೆ, ಚಾಮರಾಜಪೇಟೆ, ಗಡಿಯಾರಕಂಬ, ಕಾಳಿಕಾದೇವಿ ರಸ್ತೆ, ಬಕ್ಕೇಶ್ವರ ದೇವಸ್ಥಾನ ರಸ್ತೆ,ದೊಡ್ಡಪೇಟೆಯಿಂದ ಮಹಾನಗರ ಪಾಲಿಕೆ ರಸ್ತೆ ಮುಖಾಂತರ ಸಾರ್ವಜನಿಕರು, ವ್ಯಾಪಾರಸ್ಥರಿಂದ ದೇಣಿಗೆ ಸಂಗ್ರಹಿಸಿದರು. ಇಲ್ಲಿ ಸಂಗ್ರಹಿಸಿದ ಸಂತ್ರಸ್ಥರ ನಿಧಿಯನ್ನು ಆರ್‍ಎಸ್‍ಎಸ್ ಸಂಚಾಲಿತ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅರುಣ್ ಜಿ, ರಮೇಶ್, ಗೋರುದ್ರಯ್ಯ, ಸಿದ್ದಲಿಂಗಸ್ವಾಮಿ, ಅರುಣ್ ಭಜರಂಗದಳ, ಪ್ರವೀಣ, ಶೋಭಕ್ಕ, ಎಸ್.ಟಿ.ವೀರೇಶ್, ರಾಜಶೇಖರ್, ಶ್ರೀನಿವಾಸ್, ಧನುಷ್, ರಘು, ಗುರು, ಲೋಕೇಶ್ ಆಚಾರ್, ಪ್ರಹ್ಲಾದ್, ಶಂಭಣ್ಣ, ವಿನಾಯಕ್ ಸೇರಿದಂತೆ ಮತ್ತಿತರಿದ್ದರು.
ಶಿವಸಿಂಪಿ ಸಮಾಜ:
ಕೊಡಗಿನ ಸಂತ್ರಸ್ತರಿಗೆ ದಾವಣಗೆರೆ ಶಿವಸಿಂಪಿ ಸಮಾಜದ ವತಿಯಿಂದ ಸುಮಾರು ನಾಲ್ಕು ಲಕ್ಷ ರೂ.ಗಳ ಮೌಲ್ಯದ ಬಟ್ಟೆಗಳನ್ನು ಕೊಡುಗೆಗೆ ತಲುಪಿಸಲಾಯಿತು. ಈ ಸಂದರ್ಭದಲ್ಲಿ ಹೇಮಣ್ಣ ಜವಳಿ ಅಧ್ಯಕ್ಷ ಗುರುಬಸಪ್ಪ ಬೂಸ್ನೂರ್, ಕಾರ್ಯದರ್ಶಿ ಜಗದೀಶ್ ಭಾವಿಕಟ್ಟೆ ಜ್ಞಾನೇಶ್ವರ್, ಜವಳಿ ಶಾಂತ ಕುಮಾರ್, ಶಿವಕುಮಾರ್, ಪೆÇ್ರೀ.ಮಲ್ಲಿಕಾರ್ಜುನ ಜವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಿಎಸ್‍ಸಿ ಅಂಗಡಿ:
ನಗರದ ಬಿ.ಎಸ್.ಚನ್ನಬಸಪ್ಪ ಆಂಡ್ ಸನ್ಸ್ ಅಂಗಡಿಯ ಮಾಲೀಕ ಬಿ.ಸಿ.ಉಮಾಪತಿ ಸಂತ್ರಸ್ತರಿಗೆ 15ಲಕ್ಷ ಮೌಲ್ಯದ ಉಡುಪು, ಹೊದಿಕೆ, ಕುಡಿವ ನೀರು ಸೇರಿದಂತೆ ಐದು ಲಕ್ಷದ ಮೌಲ್ಯದ ನಾನಾ ವಸ್ತುಗಳನ್ನು ಶನಿವಾರ ರಾತ್ರಿ ಪರಿಹಾರ ಸಾಮಾಗ್ರಿಗಳನ್ನು ಕಾಳಿದಾಸ ರಸ್ತೆಯಲ್ಲಿರುವ ಮಳಿಗೆಯಲ್ಲಿ ಪ್ಯಾಕ್ ಮಾಡಿಸಿ ಕೊಡುಗೆಗೆ ರವಾನಿಸಲಾಯಿತು.
ಮಹಿಳೆಯರಿಗಾಗಿ 2380 ಸ್ವೆಟರ್, ನೈಟಿ, ಒಳಉಡುಪು, 540 ಸ್ಯಾನಿಟರಿ ಪ್ಯಾಡ್ಗಳು, ಪುರುಷರಿಗಾಗಿ 1060 ಉಡುಪುಗಳು, ಮಕ್ಕಳಿಗಾಗಿ ವಿಂಟರ್ ಕ್ಯಾಪ್, 648 ಬೇಬಿ ಡೈಪರ್, ಟಿಶರ್ಟ್, ಶಾರ್ಟ್ಸ್, ಪ್ಯಾಂಟ್ಗಳು, 185 ಹೊದಿಕೆಗಳು, 96 ಸೊಳ್ಳೆಪರದೆ ಸೇರಿದಂತೆ ಬಿಸ್ಕತ್, ಚಾಪೆ, ಉಪ್ಪಿನಕಾಯಿ, ಜ್ಯೂಸ್, ಕುಡಿವ ನೀರಿನ ಬಾಟಲಿಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಮೆಡಿಕಲ್ ಸರ್ವಿಸ್ ಸೆಂಟರ್:
ಕೇರಳ ಹಾಗು ಕರ್ನಾಟಕದ ಭಾಗಗಳಲ್ಲಿ ಉಂಟಾದ ತೀವ್ರ ಜಲಪ್ರವಾಹದ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಮೆಡಿಕಲ್ ಸರ್ವಿಸ್ ಸೆಂಟರ್ ವತಿಯಿಂದ ನಗರದಲ್ಲಿ ನಿಧಿ ಸಂಗ್ರಹಿಸಲಾಯಿತು.
ವೈದ್ಯಕೀಯ-ದಂತವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷಕರು, ನರ್ಸಿಂಗ್ ವಿದ್ಯಾರ್ಥಿಗಳು, ವೈದ್ಯರು ನಗರದ ವಿವಿಧ ಭಾಗಗಳಲ್ಲಿ ಬಡಾವಣೆಗಳಲ್ಲಿ ನಿಧಿ ಸಂಗ್ರಹ ಮತ್ತು ಅವಶ್ಯಕ ವಸ್ತುಗಳ ಸಂಗ್ರಹ ಮಾಡಿದರು. ನೆರೆಹಾವಳಿಯಿಂದ ತತ್ತರಿಸಿದ ಜನತೆಗೆ ವೈದ್ಯಕೀಯ ನೆರವು ನೀಡಲು ಎಂ. ಎಸ್.ಸಿ ಕೇರಳ ರಾಜ್ಯ ಸಮಿತಿಯು ಈಗಾಗಲೆ ಹಲವು ಶಿಬಿರಗಳನ್ನು ನಡೆಸುತ್ತಿದೆ. ಈ ಶಿಬಿರಗಳಿಗಾಗಿ ಈ ಸಂಗ್ರಹಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜನಗಳ ಸಹಕಾರ, ಸ್ಪಂದನೆ ಅಭೂತಪೂರ್ವವಾಗಿದ್ದು, ಹೆಚ್ಚಿನ ನೆರವು ಹರಿದುಬಂದಿದೆ. ಸಮಸ್ತ ಜನತೆಗೆ ಮೆಡಿಕಲ್ ಸರ್ವಿಸ್ ಸೆಂಟರ್‍ನಿಂದ ಧನ್ಯವಾದ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
